

ಶ್ರೀರಂಗಪಟ್ಟಣ: ಕಾಡುಗಳಲ್ಲಿ ಕರ್ತವ್ಯ ಪಾಲನೆ ಮೆರೆಯುವ ಅಧಿಕಾರಿ, ಸಿಬ್ಬಂದಿ ಸದಾ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕಿದ್ದು, ಸರ್ಕಾರವೂ ಅರಣ್ಯ ರಕ್ಷಕರಿಗೆ ಅತ್ಯಾಧುನಿಕ ಪರಿಕರಗಳನ್ನು ವಿತರಿಸಿ ಜೀವಹಾನಿ ತಪ್ಪಿಸಬೇಕು ಎಂದು ಜಿಲ್ಲಾ ಅರಣ್ಯಾಧಿಕಾರಿ ರಾಜು ಮನವಿ ಮಾಡಿದರು.
ತಾಲೂಕಿನ ಕೆ.ಶೆಟ್ಟಹಳ್ಳಿ ಮೀಸಲು ಅರಣ್ಯ ಪ್ರದೇಶದ ಅರಣ್ಯ ಭವನದ ಬಳಿ ಬುಧವಾರ ಅರಣ್ಯ ಹುತಾತ್ಮರ ಸಂಸ್ಮರಣಾ ದಿನಾಚರಣೆ ಹಿನ್ನೆಲೆಯಲ್ಲಿ ಹುತಾತ್ಮರ ಸ್ಮಾರಕಕ್ಕೆ ಹೂಗುಚ್ಛ ಇರಿಸಿ ಮಡಿದವರ ಆತ್ಮಕ್ಕೆ ಗೌರವ ಸಲ್ಲಿಸಿ ಮಾತನಾಡಿದರು.
ನಾಡಿನ ಅಮೂಲ್ಯ ಪರಿಸರ ಸಂಪತ್ತು ಹಾಗೂ ಕಾಡುಗಳ ವನ್ಯಜೀವಗಳ ಸಂರಕ್ಷಣೆಯಲ್ಲಿ ಅರಣ್ಯ ಸಿಬ್ಬಂದಿ ಪಾತ್ರ ಪ್ರಶಂಸನೀಯ. ಇಂತಹ ಸಂಪತ್ತುಗಳ ಉಳಿವಿಗೆ ಸಾಕಷ್ಟು ಅಧಿಕಾರಿ. ಸಿಬ್ಬಂದಿ ತಮ್ಮ ಪ್ರಾಣ ಒತ್ತೆ ಇಟ್ಟು ವೀರಮರಣವನ್ನಪ್ಪಿದ್ದು, ಅವರ ಸೇವೆ ಸದಾ ಕಾಲಕ್ಕೂ ನಮಗೆ ಸ್ಮರಣೀಯ. ದಟ್ಟ ಅಭಯಾರಣ್ಯಗಳಲ್ಲಿ ಕರ್ತವ್ಯ ಪಾಲನೆ ವೇಳೆ ಉಂಟಾಗುವ ಕಾಡುಪ್ರಾಣಿಗಳ ದಾಳಿ ತಪ್ಪಿಸಿಕೊಳ್ಳಲು, ಕಾಳ್ಗಿಚ್ಚು ಉಂಟಾದ ಸಮಯದಲ್ಲಿ ಹಾಗೂ ಅರಣ್ಯ ಲೂಟಿಕೋರ ದಾಳಿಯಿಂದ ತಡೆಗಟ್ಟಲು ನಮ್ಮ ಸಿಬ್ಬಂದಿ ಸಾಕಷ್ಟು ಮುನ್ನಚ್ಚೆರಿಕಾ ಕ್ರಮ ಕೈಗೊಂಡು ಎಚ್ಚರದಿಂದ ಕಾರ್ಯನಿರ್ವಹಿಸಬೇಕಿದೆ ಎಂದರು.
ಜಿಲ್ಲಾ ಅರಣ್ಯ ಉಪಸಂರಕ್ಷಣಾಧಿಕಾರಿ ಮಹದೇವಸ್ವಾಮಿ, ತಾಲೂಕು ಅರಣ್ಯಾಧಿಕಾರಿ ವಿನೋದ್‌ಗೌಡ, ಮಂಡ್ಯ ಆರ್‌ಎಫ್‌ಒ ಶೈಲಜಾ, ಕೆ.ಆರ್.ಪೇಟೆ ಆರ್‌ಎಫ್‌ಒ ಅನಿತಾ, ಪಾಂಡವಪುರ ಆರ್‌ಎಫ್‌ಒ ಜಗದೀಶ್‌ಗೌಡ, ನಾಗಮಂಗಲ ಆರ್‌ಎಫ್‌ಒ ಮಂಜುನಾಥ್ ಹಾಗೂ ಮದ್ದೂರು ಆರ್‌ಎಫ್‌ಒ ಗವಿಯಪ್ಪ, ಅರಣ್ಯ ಅಧಿಕಾರಿಗಳಾದ ನಾಗರಾಜು, ನೂರ್‌ಪಾಷ, ಕಾಂತರಾಜು ಇತರರು ಹಾಜರಿದ್ದರು.