ತಂಬಾಕು ಉತ್ಪನ್ನ ಮಾರಾಟಕ್ಕೆ ನಿಷೇಧ

8
Published on

ರಾಮನಗರ : ಶಾಲಾ - ಕಾಲೇಜುಗಳ ಸುತ್ತಮುತ್ತಲಿನ 100 ಮೀಟರ್ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ನಿಷೇಧಿಸಲಾಗಿದೆ. ಅದು ಉಲ್ಲಂಘನೆಯಾಗದಂತೆ ಎಚ್ಚರವಹಿಸಬೇಕೆಂದು ಅಪರ ಜಿಲ್ಲಾಧಿಕಾರಿ ಆರ್. ಚಂದ್ರಯ್ಯ ಸಂಬಂಧಿಸಿದ ಇಲಾಖೆಗಳ ಮುಖ್ಯಸ್ಥರಿಗೆ ನಿರ್ದೇಶನ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಮನ್ವಯ ಸಮಿತಿಯ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವುದು ನಿಷೇಧವಾಗಿದ್ದು, ಸಾರ್ವಜನಿಕ ಸ್ಥಳದ ಮಾಲೀಕರು ಧೂಮಪಾನ ನಿಷೇಧ ನಾಮಫಲಕವನ್ನು ಕಡ್ಡಾಯವಾಗಿ ಪ್ರದರ್ಶನ ಮಾಡಬೇಕು. ಹಾಗೂ ಸಿಗರೇಟು ಮತ್ತು ಇತರೆ ತಂಬಾಕು ಉತ್ಪನ್ನಗಳ ನೇರ ಹಾಗೂ ಪರೋಕ್ಷವಾದ ಜಾಹೀರಾತು, ಉತ್ತೇಜನ ಮತ್ತು ಪ್ರಾಯೋಜಕತೆಯನ್ನು ನಿಷೇಧಿಸಲಾಗಿದೆ. ತಂಬಾಕು ಉತ್ಪನ್ನಗಳ ಮಾರಾಟಕ್ಕೆ ಕಡ್ಡಾಯವಾಗಿ ಪರವಾನಗಿ ಪಡೆಯಬೇಕು. ಇಲ್ಲವಾದಲ್ಲಿ ದಂಡ ವಿಧಿಸಲಾಗುವುದು ಎಂದು ತಿಳಿಸಿದರು.

ತಂಬಾಕು ಉತ್ಪನ್ನಗಳನ್ನು 18 ವಯಸ್ಸಿನೊಳಗಿನ ಮಕ್ಕಳು, ಅಪ್ರಾಪ್ತ ವಯಸ್ಸಿನವರು ಮಾರಾಟ ಮಾಡುವುದು ಹಾಗೂ ಅವರಿಂದ ಮಾರಾಟ ಮಾಡಿಸುವುದು ನಿಷೇಧಿಸಲಾಗಿದೆ. ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವ ವ್ಯಾಪಾರಸ್ಥರು ಅಂಗಡಿಯ ಮುಂಭಾಗ ನಾಮಫಲಕವನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು. ಉಲ್ಲಂಘಿಸಿದ್ದಲ್ಲಿ 200 ರೂ.ಗಳ ವರೆಗೆ ದಂಡ ವಿಧಿಸಲಾಗುವುದು ಎಂದು ಎಚ್ಚರಿಸಿದರು.

2024-25ನೇ ಸಾಲಿನಲ್ಲಿ ಪೊಲೀಸ್ ಇಲಾಖೆಯು ತಂಬಾಕು ಸೇವನೆ ಕುರಿತು ಕಾರ್ಯಾಚರಣೆ ನಡೆಸಿ ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಸೇವನೆ ಮಾಡುತ್ತಿದ್ದ 5,466 ಜನರಿಗೆ ದಂಡ ವಿಧಿಸಿದೆ. ಇದೇ ರೀತಿ ಸಂಬಅಧಪಟ್ಟ ಇಲಾಖೆಗಳು ಕಾರ್ಯಾಚರಣೆ ನಡೆಸಿ ದಂಡ ವಿಧಿಸುವಂತೆ ಸೂಚಿಸಿದರು.

ಸಿಗರೇಟು ಮತ್ತು ಇತರೆ ತಂಬಾಕು ಉತ್ಪನ್ನಗಳು ನಿರ್ಧಿಷ್ಠ ಆರೋಗ್ಯ ಎಚ್ಚರಿಕೆಗಳ ಚಿತ್ರ ಸಹಿತ ಸಂದೇಶಗಳಿಲ್ಲದೇ ಮಾರಾಟ ಸರಬರಾಜು ಮಾಡುವುದು ನಿಷೇಧಿಸಲಾಗಿದೆ ಎಂದರು.

ತಂಬಾಕು ಮಾರಾಟ ಮಾಡಲು ಪರವಾನಗಿ ಪಡೆಯಲು ಇಚ್ಛಿಸುವವರು ವ್ಯಾಪಾರ್ ಆ್ಯಪ್ ಮೂಲಕ ಅರ್ಜಿ ಸಲ್ಲಿಸಿ ಪರವಾನಿಗೆ ಪಡೆಯಬೇಕು ಹಾಗೂ ಇದು ಕಡ್ಡಾಯ ಎಂದರು.

ತಂಬಾಕು ನಿಷೇಧ ಕುರಿತು ಸಾರ್ವಜನಿಕ ಸ್ಥಳಗಳ ಹಾಗೂ ಬಸ್ ನಿಲ್ದಾಣಗಳಲ್ಲಿ ಐ.ಇ.ಸಿ ಚಟುವಟಿಕೆಗಳು, ಬೀದಿ ನಾಟಕ, ವಿಚಾರ ಸಂಕೀರ್ಣಗಳನ್ನು ಏರ್ಪಡಿಸಬೇಕು ಹಾಗೂ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ರಸಪ್ರಶ್ನೆ, ಚರ್ಚಾ ಸ್ಪರ್ಧೆ, ಪ್ರಬಂಧ ಸ್ಪರ್ಧೆಗಳು ಸೇರಿ ಅರಿವು ಕಾರ್ಯಕ್ರಮಗಳನ್ನು ಆಯೋಜಿಸಿ, ಜಾಗೃತಿ ಮೂಡಿಸುವಂತೆ ಅವರು ತಿಳಿಸಿದರು. ಜಿಲ್ಲೆಯಲ್ಲಿ ತಂಬಾಕು ಪದಾರ್ಥಗಳ ಮಾರಾಟವನ್ನು ನಿಷೇಧಿಸಲು ಅಧಿಕಾರಿಗಳು ಸಾಮಾಜಿಕ ಹೊಣೆಗಾರಿಕೆಯನ್ನು ಹೊರುವಂತೆ ಕಿವಿ ಮಾತು ಹೇಳಿದರು. ತಂಬಾಕು ನಿಷೇಧ ಕುರಿತು ನಾಮಫಲಕಗಳನ್ನು ಅಪರ ಜಿಲ್ಲಾಧಿಕರಿಗಳು ಬಿಡುಗಡೆ ಮಾಡಿದರು. ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಮಂಜುನಾಥ್, ಸಹಾಯಕ ವಾರ್ತಾಧಿಕಾರಿ ರಮೇಶ್, ಸಿಇಎನ್ ಠಾಣೆ ಇನ್‌ಸ್ಪೆಕ್ಟರ್ ವಸಂತ್ ಕುಮಾರ್ ಮುಂತಾದವರು ಇದ್ದರು.

ಜಿಲ್ಲೆಯಲ್ಲಿರುವ 1,606 ಶಾಲೆಗಳಲ್ಲಿ ತಂಬಾಕು ನಿಯಂತ್ರಣ ಸಮಿತಿಯನ್ನು ರಚಿಸಲಾಗಿದೆ ಹಾಗೂ ಶಾಲಾ-ಕಾಲೇಜುಗಳ ಮುಂಭಾಗದಲ್ಲಿ ತಂಬಾಕು ಮುಕ್ತ ಶಾಲಾ, ಕಾಲೇಜು ಎಂಬ ನಾಮಫಲಕವನ್ನು ಕಡ್ಡಾಯವಾಗಿ ಪ್ರವೇಶ ದ್ವಾರದಲ್ಲಿ ಪ್ರದರ್ಶನ ಮಾಡಬೇಕು. ಆರ್. ಚಂದ್ರಯ್ಯ, ಅಪರ ಜಿಲ್ಲಾಧಿಕಾರಿ

ತಂಬಾಕು ಮುಕ್ತ ಗ್ರಾಮ ಸುಗ್ಗನಹಳ್ಳಿ ಸುಗ್ಗನಹಳ್ಳಿ ಗ್ರಾಪಂ ವ್ಯಾಪ್ತಿಗೆ ಬರುವ 21 ಗ್ರಾಮಗಳಲ್ಲಿ ತಂಬಾಕು ಮಾರಾಟ ನಿಷೇಧಿಸಲಾಗಿದ್ದು, ಸುಗ್ಗನಹಳ್ಳಿ ಗ್ರಾಪಂ ಅನ್ನು ರಾಜ್ಯದಲ್ಲಿಯೇ ಮೊದಲ ಬಾರಿಗೆ ತಂಬಾಕು ಮುಕ್ತ ಗ್ರಾಮವೆಂದು ಘೋಷಿಸಲಾಗಿದೆ. ನಗರಸಭೆ, ಪುರಸಭೆ, ಗ್ರಾಮ ಪಂಚಾಯಿತಿ, ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ಸಂಬಂಧಪಟ್ಟ ಇತರೆ ಇಲಾಖೆಗಳು ಜಂಟಿಯಾಗಿ ತಂಬಾಕು ಮಾರಾಟ ಮಾಡುತ್ತಿರುವ ಅಂಗಡಿಗಳಿಗೆ ಭೇಟಿ ನೀಡಿ ತಪಾಸಣೆ ನಡೆಸಬೇಕು. ಒಂದು ವೇಳೆ ತಂಬಾಕು ಮಾರಾಟ ಮಾಡುತ್ತಿದ್ದರೆ ತಂಬಾಕು ಪದಾರ್ಥಗಳನ್ನು ವಶಪಡಿಸಿಕೊಂಡು, ದಂಡ ವಿಧಿಸುವಂತೆ ಅಪರ ಜಿಲ್ಲಾಧಿಕಾರಿ ಆರ್. ಚಂದ್ರಯ್ಯ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net