ಜೀವನದಲ್ಲಿ ಮಹನೀಯರ ತತ್ವ ಅಳವಡಿಸಿಕೊಳ್ಳಿ

15M.D.R.4
Published on

ಮದ್ದೂರು: ವಿದ್ಯಾರ್ಥಿಗಳು ಕಠಿಣ ಪರಿಶ್ರಮಪಟ್ಟು ವ್ಯಾಸಂಗ ಮಾಡಿ ಸಮಾಜದಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸುವ ಮೂಲಕ ನೊಂದವರ ಬಾಳಿಗೆ ಬೆಳಕಾಗಬೇಕೆಂದು ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ಜಿಲ್ಲಾಧ್ಯಕ್ಷ ವಿ.ಸಿ.ಉಮಾಶಂಕರ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಪಟ್ಟಣದ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಭಾನುವಾರ ಶರಣರ ಸಂಘಟನಾ ವೇದಿಕೆ ಮದ್ದೂರು ತಾಲೂಕು ಘಟಕ ವತಿಯಿಂದ ಹಮ್ಮಿಕೊಂಡಿದ್ದ 892ನೇ ಜಗಜ್ಯೋತಿ ಬಸವೇಶ್ವರ ಜಯಂತಿ ಅಂಗವಾಗಿ 2024-25 ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ 100 ಕ್ಕೂ ಹೆಚ್ಚು ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳು ನಿರಂತರವಾಗಿ ವ್ಯಾಸಂಗ ಮಾಡಬೇಕು ಮತ್ತು ಬಸವಣ್ಣ, ಬುದ್ಧ, ಅಂಬೇಡ್ಕರ್, ಕುವೆಂಪು ಸೇರಿದಂತೆ ಮಹಾನ್ ನಾಯಕರ ಜೀವನ ಚರಿತ್ರೆಯನ್ನು ಓದುವ ಮೂಲಕ ಅವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಕೊಂಡು ಉತ್ತಮ ಜೀವನ ರೂಪಿಸಿಕೊಳ್ಳಬೇಕೆಂದು ಸಲಹೆ ನೀಡಿದರು.

ಶರಣರ ಸಂಘಟನಾ ವೇದಿಕೆ ತಾಲೂಕು ಅಧ್ಯಕ್ಷ ಎಸ್.ಎಂ.ಗಂಗಾಧರ್ ಮಾತನಾಡಿ, ವಿದ್ಯೆ ಯಾರು ಕದಿಯಲಾಗದ ಆಸ್ತಿ. ಉನ್ನತ ವಿದ್ಯಾಭ್ಯಾಸ ಪಡೆದುಕೊಂಡರೆ ಜಗತ್ತಿನ ಯಾವುದೇ ಮೂಲೆಯಲ್ಲಿ ಬೇಕಾದರು ಅತ್ಯುತ್ತಮ ಸಾಧನೆ ಮಾಡಿ ಸುಂದರ ಜೀವನ ರೂಪಿಸಿಕೊಳ್ಳಬಹುದು ಎಂದರು.

ಶರಣರ ಸಂಘಟನಾ ವೇದಿಕೆ ಜಿಲ್ಲಾಧ್ಯಕ್ಷ ನಂದೀಶ್, ಜಿಲ್ಲಾ ಮಹಿಳಾ ಅಧ್ಯಕ್ಷೆ ಕವಿತಾ, ಮದ್ದೂರು ಟೌನ್ ಅಧ್ಯಕ್ಷೆ ರಶ್ಮಿ, ಜಿಲ್ಲಾ ಸಂಘಟನೆಯ ಖಜಾಂಚಿ ಬಸವಣ್ಣ, ತಾಲೂಕು ಕಾರ್ಯದರ್ಶಿ ಶಿವಮೂರ್ತಿ, ಮುಖಂಡರಾದ ಬಸಂತ್, ಕರ್ಣ, ಬಸವರಾಜು, ಎ.ಎಸ್.ಪರಮೇಶ್, ಬಸವರಾಜಪ್ಪ, ನಟರಾಜು ಸೇರಿದಂತೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net