ಕಾಯಕವೇ ಕೈಲಾಸ ತತ್ವವನ್ನು ಅಳವಡಿಸಿಕೊಳ್ಳಿ

30-pnp 1
Published on

ಪಾಂಡವಪುರ: ಆದರ್ಶ ಪುರುಷರು, ಮಹನೀಯರ ಮಾರ್ಗದರ್ಶನಗಳನ್ನು ಈ ಕಾಲಘಟ್ಟದಲ್ಲಿ ಯಾವ ರೀತಿ ಅಳವಡಿಸಿಕೊಳ್ಳಬೇಕು ಎಂಬುದರ ಬಗ್ಗೆ ಸಂಶೋಧನೆ ನಡೆಯಬೇಕಿದೆ ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿದರು.

ಪಟ್ಟಣದ ತಾಲೂಕು ಆಡಳಿತದ ಸಭಾಂಗಣದಲ್ಲಿ ತಾಲೂಕು ಆಡಳಿತ ವತಿಯಿಂದ ಬುಧವಾರ ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಬಸವಣ್ಣನವರ ಭಾವಚಿತ್ರಕ್ಕೆ ಪೂಜೆ ನೆರವೇರಿಸಿ ಪುಷ್ಪಾರ್ಚನೆ ಸಲ್ಲಿಸಿದ ಬಳಿಕ ಅವರು ಮಾತನಾಡಿದರು.

ಬಸವಣ್ಣ, ಅಲ್ಲಮಪ್ರಭು ಅವರಂತಹ ಮಹನೀಯರು ಹೇಳಿಕೊಟ್ಟಿರುವ ಆದರ್ಶಗಳನ್ನು ಮರೆತು ನಾವು ಬದುಕುತ್ತಿದ್ದೇವೆ. ನಮ್ಮ ತಂದೆ ಕೆ.ಎಸ್.ಪುಟ್ಟಣ್ಣಯ್ಯ ಅವರು ಬಸವಣ್ಣನವರ ಕಾಯಕವೇ ಕೈಲಾಸ ಎಂಬ ತತ್ವ ಅಳವಡಿಸಿಕೊಂಡಿದ್ದರು. ಕಾಯಕವೇ ಕೈಲಾಸ ಎಂಬುದು ಎರಡೇ ಪದವಾದರೂ ಅದರಲ್ಲಿ ಎಷ್ಟು ಅರ್ಥವಿದೆ ಎಂಬುದನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕು. ವಚನಗಳಲ್ಲಿ ಈಗಿರುವ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಆದರೆ ಅದರ ಆಳವಾದ ಅಧ್ಯಯನ ಆಗಬೇಕಿದೆ. ಬಸವಣ್ಣನವರ ವಚನಗಳ ಸಾರಾಂಶವನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಸಾಧ್ಯವಾದ ಮಟ್ಟಿಗೆ ಎಲ್ಲರೂ ಪ್ರಯತ್ನಿಸಬೇಕು ಎಂದು ತಿಳಿಸಿದರು.

ತಹಸೀಲ್ದಾರ್ ಎಸ್.ಸಂತೋಷ್ ಮಾತನಾಡಿ, ಮಹನೀಯರ ಜಯಂತಿ ಕಾರ್ಯಕ್ರಮದಲ್ಲಿ ಎಲ್ಲ ಸಮುದಾಯದವರು ಭಾಗಿಯಾಗಬೇಕು ಎಂಬುದು ನಮ್ಮ ಆಶಯವಾಗಿದೆ. ಆದರ್ಶ ವ್ಯಕ್ತಿಗಳನ್ನು ಒಂದು ಧರ್ಮ, ಜಾತಿಗೆ ಸೀಮಿತಗೊಳಿಸಬಾರದು. ಒಬ್ಬೊಬ್ಬ ಮಹನೀಯರು ಒಂದೊಂದು ರೀತಿಯ ಆದರ್ಶವನ್ನು ತಿಳಿಸಿಕೊಟ್ಟಿದ್ದಾರೆ. ಈ ಆದರ್ಶಗಳು ನಮಗೆ ಮಾರ್ಗದರ್ಶನವಾಗಬೇಕು, ಜಯಂತಿ ಕಾರ್ಯಕ್ರಮಗಳು ಕೇವಲ ಮಾಲಾರ್ಪಣೆ, ಪುಷ್ಪಾರ್ಚನೆಗಳಿಗೆ ಮಾತ್ರ ಸೀಮಿತವಾಗಿರಬಾರದು. ಬಸವಣ್ಣನವರ ಅನುಭವ ಮಂಟಪ ಕೇವಲ ಒಂದು ಜಾತಿ, ಜನಾಂಗಕ್ಕೆ ಸೀಮಿತವಾಗಿರಲಿಲ್ಲ. ಎಲ್ಲ ಜಾತಿಯವರು ಅನುಭವ ಮಂಟಪದಲ್ಲಿ ಇದ್ದರು. ಸಮಾಜದಲ್ಲಿ ಸಮಾನತೆ ತರಲು ಎಲ್ಲ ದಾರ್ಶನಿಕರು, ಮಹನೀಯರು ಪ್ರಯತ್ನಪಟ್ಟಿದ್ದಾರೆ. ಸಮಾಜದಲ್ಲಿ ಸಮಾನತೆ ತರಲು ಮೊದಲು ಶಿಕ್ಷಣದ ಅಗತ್ಯ ಇದೆ. ಹೀಗಾಗಿ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ತಾಪಂ ಇಒ ಲೋಕೇಶ್‌ಮೂರ್ತಿ, ಪುರಸಭೆ ಮುಖ್ಯಾಧಿಕಾರಿ ಸತೀಶ್‌ಕುಮಾರ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆಂಪೇಗೌಡ, ಡಾ.ಅರವಿಂದ್, ಬಿಇಒ ರವಿಕುಮಾರ್, ಅಮೃತಿ ರಾಜಶೇಖರ್, ಎಸ್.ಮಂಜುನಾಥ್, ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ಶಿವಕುಮಾರ್, ದ್ಯಾವಪ್ಪ, ಡಿ.ಕೆ.ಅಂಕಯ್ಯ, ಬೊಮ್ಮರಾಜು, ಕಣಿವೆ ಯೋಗೇಶ್, ಬೇವಿನಕುಪ್ಪೆ ದೇವರಾಜು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net