ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳಿ

27-pnp 1
ಪಾಂಡವಪುರ ತಾಲೂಕಿನ ಅರಳಕುಪ್ಪೆಯಲ್ಲಿ ಡ್ರೋನ್ ಮೂಲಕ ರಸಗೊಬ್ಬರ ಸಿಂಪಡಣೆಗೆ ಕೃಷಿಕ ಸಮಾಜದ ರಾಜ್ಯಾಧ್ಯಕ್ಷ ಮಂಜುನಾಥ್‌ಗೌಡ ಚಾಲನೆ ನೀಡಿದರು. ಫೋಟೋ : 27-ಪಿಎನ್‌ಪಿ 1ಎ ಪಾಂಡವಪುರ ತಾಲೂಕಿನ ಅರಳಕುಪ್ಪೆಯಲ್ಲಿ ಆಯೋಜಿಸಿದ್ದ ಡ್ರೋನ್ ಮೂಲಕ ರಸಗೊಬ್ಬರ ಸಿಂಪಡಣೆ ಕಾರ್ಯಕ್ರಮದಲ್ಲಿ ಕೃಷಿಕ ಸಮಾಜದ ರಾಜ್ಯಾಧ್ಯಕ್ಷ ಮಂಜುನಾಥ್‌ಗೌಡ ಮಾತನಾಡಿದರು.
Published on

ಪಾಂಡವಪುರ: ರೈತರು ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಕೃಷಿ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಬೇಕು ಎಂದು ಕೃಷಿಕ ಸಮಾಜದ ರಾಜ್ಯಾಧ್ಯಕ್ಷ ಮಂಜುನಾಥಗೌಡ ಹೇಳಿದರು.

ತಾಲೂಕಿನ ಅರಳಕುಪ್ಪೆಯ ರೈತ ದೇವರಾಜು ಅವರ ಜಮೀನಿನಲ್ಲಿ ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ಕೃಷಿ ಇಲಾಖೆ, ತಾಲೂಕು ಕೃಷಿಕ ಸಮಾಜ ಹಾಗೂ ಇಪ್ರೋ ಫಾರ್ಮರ್ಸ್ ಫರ್ಟಿಲೈಸರ್ಸ್‌ ಕೋ-ಆಪರೇಟಿವ್ ಇವರ ಸಹಕಾರದೊಂದಿಗೆ ಶುಕ್ರವಾರ ಆಯೋಜಿಸಿದ್ದ ಡ್ರೋನ್ ಬಳಕೆ ಮೂಲಕ ರಸಗೊಬ್ಬರ ಸಿಂಪಡಣೆ ಪ್ರಾತ್ಯಕ್ಷಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ರೈತರು ಕೃಷಿ ಮೇಲೆ ಸಂಪೂರ್ಣ ಅವಲಂಬಿತರಾಗಿ ಉತ್ತಮ ಬೆಳೆ ಬೆಳೆಯಬೇಕು ಎಂಬ ಭಾವನೆ ಇದೆಯಾದರೂ, ಕೃಷಿ ಕಾರ್ಮಿಕರ ಸಮಸ್ಯೆಯಿಂದ ವ್ಯವಸಾಯದಿಂದ ವಿಮುಖರಾಗುವ ಪರಿಸ್ಥಿತಿ ತಲೆದೋರಿದೆ. ಇಂತಹ ಸಮಸ್ಯೆಗಳನ್ನು ಆಧುನಿಕ ತಂತ್ರಜ್ಞಾನದ ಮೂಲಕ ಬಗೆಹರಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕುಲಾಂತರಿ ತಳಿಗಳಿಂದ ಎಷ್ಟು ಅನುಕೂಲವಿದೆಯೋ ಅಷ್ಟೇ ಅನನುಕೂಲ ಕೂಡ ಇದೆ. ಈ ತಳಿಗಳನ್ನು ಒಂದು ಬಾರಿ ಬಿತ್ತನೆ ಮಾಡಿ ಮತ್ತೇ ಬೇರೆ ತಳಿ ಬಿತ್ತ ಬೇಕಾದರೆ ಆ ಕಂಪನಿಯವರೇ ಬರಬೇಕು. ಹೀಗಾಗಿ ರೈತರು ಆದಷ್ಟು ದೇಸಿ ತಳಿಗಳ ಮೇಲೆ ಅವಲಂಬಿತರಾಗುವ ಜತೆಗೆ ಕುಲಾಂತರಿ ತಳಿಗಳನ್ನು ವಿರೋಧಿಸಬೇಕು. ಇತ್ತೀಚಿನ ದಿನಗಳಲ್ಲಿ ವಿದ್ಯಾವಂತರು ಕೂಡ ಕೃಷಿ ಕ್ಷೇತ್ರದತ್ತ ಮುಖ ಮಾಡುತ್ತಿರುವುದು ಸಂತಸದ ವಿಷಯ ಎಂದರು.

ರೈತಸಂಘ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ ಮಾತನಾಡಿ, ಟ್ರ್ಯಾಕ್ಟರ್, ಟಿಲ್ಲರ್ ಇತ್ಯಾದಿ ಆಧುನಿಕ ಕೃಷಿ ಯಂತ್ರೋಪಕರಣಗಳು ಇಲ್ಲವಾಗಿದ್ದರೆ ರೈತ ಜಮೀನು ಪಾಳು ಬಿಡಬೇಕಾದ ಪರಿಸ್ಥಿತಿ ಎದುರಾಗುತ್ತಿತ್ತು. ಇಂದು ಗದ್ದೆ ನಾಟಿ ಮಾಡಲು ಕಾರ್ಮಿಕರು ಸಿಗುತ್ತಿಲ್ಲ. ಡ್ರೋನ್ ಮೂಲಕ ರಸಗೊಬ್ಬರ ಸಿಂಪಡಣೆ ಮಾಡುವ ತಂತ್ರಜ್ಞಾನ ರೈತರಿಗೆ ಅನುಕೂಲವಾಗಿದೆ. ಇದರಿಂದ ಒಂದೇ ದಿನದಲ್ಲಿ ನೂರಾರು ಎಕರೆ ಜಮೀನಿಗೆ ರಸಗೊಬ್ಬರ ಸಿಂಪಡಿಸಬಹುದಾಗಿದೆ. ಸರ್ಕಾರ ಗ್ರಾಮ ಮಟ್ಟದ ಇಂತಹ ಆಧುನಿಕ ಕೃಷಿ ಸಾಧನಗಳನ್ನು ನೀಡಿ ರೈತರು ಕೃಷಿಯತ್ತ ಹೆಚ್ಚು ಒಲವು ತೋರುವಂತೆ ನೋಡಿಕೊಳ್ಳಬೇಕು. ಇಲ್ಲವಾದರೆ ಇನ್ನೂ ಹತ್ತು ವರ್ಷಗಳಲ್ಲಿ ದೇಶದಲ್ಲಿ ಆಹಾರ ಭದ್ರತೆಯ ಸಮಸ್ಯೆ ಎದುರಾಗುತ್ತದೆ. ಕೃಷಿ ಬಂಡವಾಳ ಹೆಚ್ಚುತ್ತಿರುವ ಇಂತಹ ಸಂದರ್ಭದಲ್ಲಿ ಸರ್ಕಾರ ರೈತರನ್ನು ಉಳಿಸುವ ಕೆಲಸ ಮಾಡಬೇಕು ಎಂದು ತಿಳಿಸಿದರು.

ಇಪ್ರೋ ಸಂಸ್ಥೆಯ ಮಾರುಕಟ್ಟೆ ಅಧಿಕಾರಿ ಲಕ್ಷ್ಮೀಶ ಮಾತನಾಡಿ, ಕೇವಲ ರಸಗೊಬ್ಬರ ಹಾಕಿದರೆ ಇಳುವರಿ ಹೆಚ್ಚುತ್ತದೆ ಎಂದು ರೈತರು ರಸಗೊಬ್ಬರವನ್ನು ಯಥೇಚ್ಚವಾಗಿ ಬಳಕೆ ಮಾಡುವುದು ತಪ್ಪು. ಅಧಿಕ ಇಳುವರಿ ಪಡೆಯಲು ಭೂಮಿ ಫಲವತ್ತತೆಯಾಗಿರಬೇಕು. ಜತೆಗೆ ಪೋಟಾಷ್, ಗಂಧಕ, ರಂಜಕ, ಐರನ್, ಬೋರನ್, ಜಿಂಕ್ ಇತ್ಯಾದಿ ಸೇರಿದಂತೆ ಪೋಷಾಕಾಂಶಗಳನ್ನು ನಿಗದಿತ ಪ್ರಮಾಣದಲ್ಲಿ ಬಳಸಬೇಕು. ಕಬ್ಬಿನ ತರಗಿಗೆ ಬೆಂಕಿ ಹಾಕಿ ಸುಟ್ಟು ಹಾಕಿದರೆ ಭೂಮಿಯ ಸತ್ವ ನಾಶವಾಗುತ್ತದೆ. ಅದರ ಬದಲು ಜಮೀನಿನಲ್ಲಿ ಕೊಳೆಯಲು ಬಿಡಬೇಕು. ಜತೆಗೆ ಹಸಿ ಕಸಗಳ ಬಳಕೆಯಿಂದ ಭೂಮಿಯ ತಾಕತ್ತು ಹೆಚ್ಚುತ್ತದೆ ಎಂದು ವಿವರಿಸಿದರು.

ಇದೇ ವೇಳೆ ಅರಳಕುಪ್ಪೆ ಗ್ರಾಮದ ದೇವರಾಜು ಎಂಬುವರ ಒಂದು ಎಕರೆ ಜಮೀನಿಗೆ ಡ್ರೋನ್ ಬಳಕೆ ಮೂಲಕ ನ್ಯಾನೋ ಯೂರಿಯಾ ಸಿಂಪಡಣೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಕೃಷಿಕ ಸಮಾಜದ ತಾಲೂಕು ಅಧ್ಯಕ್ಷ ಆರ್.ಚನ್ನಕೇಶವ, ಉಪಾಧ್ಯಕ್ಷ ದೇವೇಗೌಡ, ನಿರ್ದೇಶಕರಾದ ಉಮಾಶಂಕರ್, ದೇವರಾಜು, ಪುಟ್ಟರಾಜು, ಕೃಷಿ ಇಲಾಖೆ ಎಡಿ ಮಂಜುನಾಥ್, ಕೃಷಿ ಅಧಿಕಾರಿ ಶ್ರುತಿ, ರೇಷ್ಮೆ ಇಲಾಖೆ ಎಡಿ ರವಿಕುಮಾರ್, ತೋಟಗಾರಿಕೆ ಇಲಾಖೆ ಎಡಿ ಪ್ರಸನ್ನ, ಇಫ್ರೋ ಫೆಡರೇಷನ್ ನಿರ್ದೇಶಕರಾದ ಮಹದೇವು, ಚಲುವರಾಜು, ಗುರುಸ್ವಾಮಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net