ಅಬ್ದುಲ್ ಕಲಾಂ ಜೀವನ ಮೌಲ್ಯ ಅಳವಡಿಸಿಕೊಳ್ಳಿ

ಅಬ್ದುಲ್ ಕಲಾಂ ಜೀವನ ಮೌಲ್ಯ ಅಳವಡಿಸಿಕೊಳ್ಳಿ
Published on

ಹೊಳೆನರಸೀಪುರ: ಭಾರತದ ಹೆಮ್ಮೆಯ ವಿಜ್ಞಾನಿ ಮಾಜಿ ರಾಷ್ಟ್ರಪತಿ ಡಾ. ಎಪಿಜೆ ಅಬ್ದುಲ್ ಕಲಾಂ ನಮ್ಮ ದೇಶ ಹಾಗೂ ಪ್ರಪಂಚ ಕಂಡ ಮಹಾನ್ ವಿಜ್ಞಾನಿ, ಮಹಾನ್ ಮಾನವತಾವಾದಿ ಎಂದು ಸಂಸದ ಶ್ರೇಯಶ್ ಪಟೇಲ್ ಬಣ್ಣಿಸಿದರು.

ಡಾ. ಎಪಿಜೆ ಅಬ್ದುಲ್ ಕಲಾಂ ಅವರ 93ನೇ ಜನ್ಮದಿನಾಚರಣೆ ಅಂಗವಾಗಿ ಎ.ಪಿ.ಜೆ. ಅಬ್ದುಲ್ ಕಲಾಂ ನೌಕರರ ಸಂಘ ಮಂಗಳವಾರ ಟಿಪ್ಪು ಶಾದಿಮಹಲ್‌ನಲ್ಲಿ ಹಾಸನದ ಜನಪ್ರಿಯ ಆಸ್ಪತ್ರೆ ಹಾಗೂ ಇಲ್ಲಿನ ಸರ್ಕಾರಿ ಆಸ್ಪತ್ರೆಯ ಸಹಯೋಗದಲ್ಲಿ ಆಯೋಜಿಸಿದ್ದ ಆರೋಗ್ಯ ತಪಾಸಣೆ ಶಿಬಿರದಲ್ಲಿ ಮಾತನಾಡಿದರು.

ಸರಳತೆ, ಪ್ರಾಮಾಣಿಕತೆ, ಮೇರು ವ್ಯಕ್ತಿತ್ವದ ದೇಶಪ್ರೇಮಿ, ಮಿಸೈಲ್ ಮ್ಯಾನ್ ಆಫ್ ಇಂಡಿಯಾ ಎನಿಸಿಕೊಂಡಿದ್ದ ಕಲಾಂ ಅವರು ತೋರಿದ ದಾರಿಯಲ್ಲಿ ಸಾಗಿ ಮಹಾನ್ ದೇಶಪ್ರೇಮಿಗಳು ಎನಿಸಿಕೊಳ್ಳುವಂತಹ ಸೇವೆಯನ್ನು ನಾವು ಮಾಡಬೇಕು. ಎಪಿಜೆ ಅಬ್ದುಲ್ ಕಲಾಂ ಅವರ ಆತ್ಮಕಥೆ ವಿಂಗ್ಸ್ ಆಫ್ ಫೈರ್ ಪುಸ್ತಕವನ್ನು ಓದಿ ಅರ್ಥೈಸಿಕೊಂಡರೆ ನಾವು ಆದರ್ಶ ಜೀವನ ನಡೆಸಲು ಪ್ರೇರಣೆ ಸಿಕ್ಕಂತಾಗುತ್ತದೆ. ಕಲಾಂ ಅವರನ್ನು ಅಟಲ್ ಬಿಹಾರಿ ವಾಜಪೇಯಿ ರಾಷ್ಟ್ರಪತಿ ಮಾಡುವಾಗ ಎಲ್ಲ ಪಕ್ಷಗಳು ಅವರ ನಿರ್ಧಾರವನ್ನು ಅತ್ಯಂತ ಗೌರವದಿಂದ ಸ್ವಾಗತಿಸಿ ಅಬ್ದುಲ್ ಕಲಾಂ ಅವರ ಮೇಲಿನ ಗೌರವವನ್ನು ತೋರಿಸಿದರು. ಕಲಾಂ ರಾಷ್ಟ್ರಪತಿ ಆದ ನಂತರ ನಮ್ಮ ದೇಶದಲ್ಲಿ ವೈಜ್ಞಾನಿಕ ಕ್ರಾಂತಿ ಆಯಿತು ಎಂದರು.

ಹಾಸನ ಜನಪ್ರಿಯ ಆಸ್ಪತ್ರೆಯ ಡಾ. ಅಬ್ದುಲ್ ಬಷೀರ್ ಮಾತನಾಡಿ, ಇಂದಿನ ದಿನದಲ್ಲಿ ಸಕ್ಕರೆ ಕಾಯಿಲೆ ಮತ್ತು ಬಿಪಿ ಸಾಮಾನ್ಯ ಎನಿಸಿದೆ. ಇದಕ್ಕೆ ಸಕಾಲದಲ್ಲಿ ಸರಿಯಾದ ಚಿಕಿತ್ಸೆ ಪಡೆದು ಕೊಂಡರೆ ಅದು ಸಾಮಾನ್ಯ. ಚಿಕಿತ್ಸೆ ಪಡೆದುಕೊಳ್ಳದಿದ್ದರೆ ಇದು ಅಸಮಾನ್ಯ ಕಾಯಿಲೆ ಎನಿಸುತ್ತದೆ. ಆದ್ದರಿಂದ ಎಲ್ಲರೂ ಆಗಾಗ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಿ. ಆರೋಗ್ಯ ಕಾಪಾಡಿಕೊಳ್ಳಿ. ಮರಕ್ಕೆ ಗೆದ್ದಲು ಹಿಡಿದು ಹೇಗೆ ಮರವನ್ನು ನಾಶ ಮಾಡುತ್ತೋ ಅದೇ ರೀತಿ ಸಕ್ಕರೆ ಕಾಯಿಲೆ ಮತ್ತು ಬಿಪಿ ಮನುಷ್ಯನಿಗೆ ಗೆದ್ದಲಿನಂತೆ. ಅದರ ನಿಯಂತ್ರಣಕ್ಕೆ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಿ ಎಂದರು.
ಸಿ.ಎಂ.ನಾಗರಾಜ್ ಅಬ್ದುಲ್ ಕಲಾಂ ಅವರ ಜೀವನ ಚರಿತ್ರೆಯಲ್ಲಿನ ಪ್ರಮುಖ ಅಂಶಗಳನ್ನು ವಿವರಿಸಿದರು. ಐಪಿಎಸ್ ಅಧಿಕಾರಿ ಶಾಲೂ, ತಾ.ಆರೋಗ್ಯಾಧಿಕಾರಿ ಡಾ.ರಾಜೇಶ್, ಬಿಇಒ ಸೋಮಲಿಂಗೇಗೌಡ ಮಾತನಾಡಿದರು.

ಸಂಘದ ಅಧ್ಯಕ್ಷ ಸೈಯದ್ ನಿಜಾಂ ಖಾದ್ರಿ, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಎಚ್.ವಿ. ಸುರೇಶ್ ಕುಮಾರ್, ಅಖಿಲ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಎಸ್.ಎಸ್, ಪಾಶ, ಕೌಸರ್ ಅಹಮದ್, ಡಾ. ಧನ್ ಶೇಖರ್, ಡಾ.ರಾಜೇಶ್, ಎನ್.ಜಿ. ಮುಕುಂದ, ಸಂಘದ ಗೌರವಾಧ್ಯಕ್ಷ ಫಯಾಜ್ ಪಾಶ, ಸುಜತ್ ಅಲಿ, ಖದೀರ್ ಅಹಮದ್, ಭಾಗವಹಿಸಿದ್ದರು. ಸಾರ್ವಜನಿಕ ಆಸ್ಪತ್ರೆಯ ಡಾ. ನಾಗೇಂದ್ರ, ಡಾ. ಅಶ್ವತಿ, ಡಾ. ಚಿಂತನಾ ಹಾಗೂ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿನಿಯರು ಮತ್ತು ಜನಪ್ರಿಯ ಆಸ್ಪತ್ರೆಯ ಡಾ. ಮಹಮದ್ ಫಸಲ್, ಡಾ. ಸಚಿನ್, ಡಾ. ವೈಭವ್, ಡಾ. ಶಿವಪ್ರಸಾದ್ ಆರೋಗ್ಯ ತಪಾಸಣೆ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net