

ಲಿಂಗಸುಗೂರು: ತಾಲೂಕಿನ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಡೊನೇಷನ್ ಹಾವಳಿ ತಡೆಗಟ್ಟಿ ಬಡ ಪ್ರತಿಭಾವಂತ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಅನುಕೂಲ ಕಲ್ಪಿಸಬೇಕೆಂದು ಒತ್ತಾಯಿಸಿ ಸಹಾಯಕ ಆಯುಕ್ತ ಅವಿನಾಶ ಶಿಂಧೆಗೆ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಶುಕ್ರವಾರ ಮನವಿ ಸಲ್ಲಿಸಿದರು.
ಶಿಕ್ಷಣ ಹಕ್ಕು ಕಾಯ್ದೆ 1983 ಮತ್ತು 2009 ಆರ್‌ಟಿಇ ಕಾಯ್ದೆ ಜಾರಿಯಾದರೂ ಸಮರ್ಪಕವಾಗಿ ಪಾಲನೆಯಾಗುತ್ತಿಲ್ಲ. ಎಲ್‌ಕೆಜಿ, ಯುಕೆಜಿ ಪ್ರವೇಶಕ್ಕೆ 25 ಸಾವಿರ ರೂ. ಮತ್ತು ಎಸ್‌ಎಸ್‌ಎಲ್‌ಸಿ ತರಗತಿವರೆಗೆ 25 ಸಾವಿರ ರೂ. ಮೇಲ್ಪಟ್ಟು ಪ್ರವೇಶ ಶುಲ್ಕದ ಹೆಸರಿನಲ್ಲಿ ಡೊನೇಷನ್ ಪಡೆಯಲಾಗುತ್ತಿದೆ. ಬಹುತೇಕ ಕಾಲೇಜುಗಳಲ್ಲಿ ಲಕ್ಷಾಂತರ ರೂ. ಹಣ ವಸೂಲಿ ಮಾಡುವ ಮೂಲಕ ಹಗಲು ದರೋಡೆ ಮಾಡಲಾಗುತ್ತಿದೆ. ಅಲ್ಲದೆ ಕೋಚಿಂಗ್, ಟ್ಯೂಷನ್, ಟ್ಯೂಟೋರಿಯಲ್ಸ್ ನಡೆಸುವುದು, ಸಿಬಿಎಸ್‌ಸಿ, ಜೆಇಇ, ನೀಟ್, ಸಿಇಟಿ ಹೆಸರಲ್ಲಿ ಅನಧಿಕೃತವಾಗಿ ತರಬೇತಿ ನೀಡುವ ಕೆಲಸ ಮಾಡಲಾಗುತ್ತಿದೆ ಎಂದು ದೂರಿದರು.
ಅನುದಾನ ರಹಿತ ಶಿಕ್ಷಣ ಸಂಸ್ಥೆಗಳು 600 ರೂ. ಅಭಿವೃದ್ಧಿ ಶುಲ್ಕ ಸಂಗ್ರಹಿಸಲು ಅವಕಾಶವಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳು ಪ್ರಾರಂಭಿಕ ತರಗತಿಗೆ ಪ್ರವೇಶ ಪರೀಕ್ಷೆ ನಡೆಸಬಾರದು ಎಂದು ಶಿಕ್ಷಣ ಹಕ್ಕು ಕಾಯ್ದೆ 2009 ಸೆಕ್ಷನ್ 13(ಬಿ) ಹೇಳುತ್ತದೆ. ಪ್ರವೇಶ ಪರೀಕ್ಷೆ ನಡೆಸುವ ಶಾಲೆಗೆ 25 ಸಾವಿರ ರೂ. ದಂಡ ಹಾಕಬೇಕೆಂಬ ನಿಯಮವಿದೆ. ಸರ್ಕಾರದ ಸುತ್ತೋಲೆಯಲ್ಲಿ ಡಿಡಿಪಿಐ ಮತ್ತು ಬಿಇಒ ಪರಿಶೀಲಿಸಬೇಕೆಂದು ಹೇಳಿದ್ದರೂ ಅಧಿಕಾರಿಗಳು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಮಣಿದು ಸರಿಯಾಗಿ ಪರಿಶೀಲನೆ ನಡೆಸುತ್ತಿಲ್ಲ. ಪರೋಕ್ಷವಾಗಿ ಡೊನೇಷನ್ ಪಡೆಯಲು ಸಹಕಾರ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ನೋಟ್‌ಬುಕ್, ಶಾಲಾ ಬ್ಯಾಗ್, ಶೂ, ಜಾಮಿಟ್ರಿ ಬಾಕ್ಸ್ ಕಡ್ಡಾಯವಾಗಿ ಆಯಾ ಶಾಲೆಗಳಲ್ಲಿ ಅಥವಾ ಇಂಥದ್ದೇ ಅಂಗಡಿಗಳಲ್ಲಿ ಪಡೆಯಲು ಹೇಳಿ ಹೆಚ್ಚಿನ ದರದಲ್ಲಿ ಖರೀದಿ ಮಾಡಿಸಲಾಗುತ್ತಿದೆ. ಕೂಡಲೇ ಇಂತಹ ಶಾಲೆಗಳನ್ನು ಪರಿಶೀಲಿಸಿ ಕಾನೂನು ಕ್ರಮ ಕೈಗೊಳ್ಳಬೇಕು. ಅನಧಿಕೃತ ಟ್ಯೂಷನ್ ಕೇಂದ್ರಗಳನ್ನು ಮುಚ್ಚಿಸಬೇಕೆಂದು ಒತ್ತಾಯಿಸಲಾಯಿತು.