More

    ಪ್ರವೇಶ ಶುಲ್ಕ ಪಾವತಿಗೆ ಒತ್ತಡ ಹೇರಿಕೆಗೆ ಖಂಡಿಸಿ ವಿದ್ಯಾರ್ಥಿಗಳ ಪ್ರತಿಭಟನೆ

    ಮೈಸೂರು: ಪ್ರವೇಶ ಶುಲ್ಕ ಪಾವತಿಗೆ ಒತ್ತಡ ಹೇರಿರುವ ಮೈಸೂರು ವಿಶ್ವವಿದ್ಯಾಲಯದ ಕ್ರಮವನ್ನು ಖಂಡಿಸಿ ಎಐಡಿಎಸ್‌ಒ ಸಂಘಟನೆ ನೇತೃತ್ವದಲ್ಲಿ ವಿದ್ಯಾರ್ಥಿಗಳು ಶುಕ್ರವಾರ ಪ್ರತಿಭಟನೆ ನಡೆಸಿದರು.


    ವಿವಿ ಕಾರ್ಯಸೌಧ ಕ್ರಾಫರ್ಡ್ ಭವನದ ಎದುರು ಜಮಾವಣೆಗೊಂಡ ವಿದ್ಯಾರ್ಥಿಗಳು ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.


    ಈಗಾಗಲೇ ಕಾಲೇಜುಗಳ ಪ್ರವೇಶಾತಿ ಪ್ರಾರಂಭವಾಗಿದೆ. ಏಕಾಏಕಿ ಎಲ್ಲ ವಿದ್ಯಾರ್ಥಿಗಳಿಗೂ 1, 2 ಮತ್ತು 3ನೇ ವರ್ಷದ ಪ್ರವೇಶ ಶುಲ್ಕವನ್ನು ಒಟ್ಟಿಗೆ ಕಟ್ಟಬೇಕೆಂದು ಆದೇಶ ಹೊರಡಿಸಲಾಗಿದೆ. ಮಹಾರಾಣಿ ಕಾಲೇಜಿನ ಒಬ್ಬ ವಿದ್ಯಾರ್ಥಿಗೆ 16 ಸಾವಿರ ರೂ., ಮಹಾರಾಜ ಕಾಲೇಜಿನ ಒಬ್ಬ ವಿದ್ಯಾರ್ಥಿಗೆ 30 ಸಾವಿರ ರೂ. ಹಾಗೂ ಯುವರಾಜ ಕಾಲೇಜಿನ ಒಬ್ಬ ವಿದ್ಯಾರ್ಥಿ 30ರಿಂದ 60 ಸಾವಿರ ರೂ. ಶುಲ್ಕವನ್ನು ಕಟ್ಟಬೇಕೆಂದು ಸೂಚಿಸಲಾಗಿದೆ. ಇದು ಸರಿಯಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.


    ಎಐಡಿಎಸ್‌ಒ ವಿದ್ಯಾರ್ಥಿ ಸಂಘಟನೆಯ ಮೈಸೂರು ಜಿಲ್ಲಾಧ್ಯಕ್ಷ ಸುಭಾಷ್ ಮಾತನಾಡಿ, ಎಷ್ಟೋ ವಿದ್ಯಾರ್ಥಿಗಳಿಗೆ ಸರಿಯಾದ ವಿದ್ಯಾರ್ಥಿ ವೇತನ ಬಂದಿಲ್ಲ. ಈ ಹಿನ್ನೆಲೆಯಲ್ಲಿ ಏಕಾಏಕಿ ಸಾವಿರಾರು ರೂ.ಪ್ರವೇಶ ಶುಲ್ಕ ಕಟ್ಟಿ ಎಂದು ಒತ್ತಡ ಹೇರುತ್ತಿರುವುದು ವಿದ್ಯಾರ್ಥಿ ವಿರೋಧಿ ನಿಲುವಾಗಿದೆ ಎಂದು ಆರೋಪಿಸಿದರು.
    ಸರ್ಕಾರ ಹಾಗೂ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಈ ಕೂಡಲೇ ಮಧ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸಬೇಕೆಂದು ಆಗ್ರಹಿಸಿದರು. ಇಲ್ಲದಿದ್ದಲ್ಲಿ ಮುಂದಿನ ದಿನದಲ್ಲಿ ತೀವ್ರ ಹೋರಾಟವನ್ನು ತೀವ್ರಗೊಳಿಸುವುದಾಗಿ ಎಚ್ಚರಿಸಿದರು.


    ಕಟ್ಟಡ ದುರಸ್ತಿ ಮಾಡಿ:
    ಮಹಾರಾಣಿ ವಿಜ್ಞಾನ ಕಾಲೇಜಿನ ಕಟ್ಟಡದ ಒಂದು ಭಾಗ ಕುಸಿದಿರುವುದು ವಿದ್ಯಾರ್ಥಿಗಳಲ್ಲಿ ಆತಂಕ ಮೂಡಿಸಿದೆ. ಬೇಜವಾಬ್ದಾರಿತನದಿಂದ ಈ ಕಟ್ಟಡದ ದುರಸ್ತಿ ಮಾಡದೆ, ಯಾವುದೇ ಮುಂಜಾಗ್ರತಾ ಕ್ರಮ ಕೈಗೊಳ್ಳದೆ ಇರುವುದು ಸರ್ಕಾರ ಹಾಗೂ ಆಡಳಿತ ಮಂಡಳಿಯ ವೈಫಲ್ಯ ಎಂದು ಆರೋಪಿಸಿದರು.


    ಹಳೆಯ ಕಟ್ಟಡಗಳಲ್ಲಿ ಯಾವುದೇ ತರಗತಿಗಳು ನಡೆಯಬಾರದು. ಕಟ್ಟಡಗಳನ್ನು ದುರಸ್ತಿ ಮಾಡಬೇಕು. ಹೊಸ ಕಟ್ಟಡಗಳನ್ನು ಕಟ್ಟಿ ಅಭಿವೃದ್ಧಿಪಡಿಸಬೇಕೆಂದು ಆಗ್ರಹಿಸಿದರು.
    ಸಂಘಟನೆಯ ಪದಾಧಿಕಾರಿಗಳಾದ ನಿತಿನ್, ಸ್ವಾತಿ, ಚಂದ್ರಿಕಾ, ಚಂದನಾ, ಹೇಮಾ, ವಿದ್ಯಾರ್ಥಿಗಳಾದ ಹರ್ಷಿತಾ, ಅಂಕಿತಾ, ಸುಚಿತ್ರಾ, ರಮ್ಯಾ, ಸಂಧ್ಯಾ, ದೀಪಿಕಾ, ಸಂಗೀತಾ, ಕಾವ್ಯಾ, ಅಂಜಲಿ, ಐಶ್ವರ್ಯಾ, ನಿರ್ಮಲಾ, ವೀರೇಶ್, ಅಭಿಷೇಕ್ ಮುಂತಾದವರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts