ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿನ ಸ್ಥಳೀಯ ಆಡಳಿತ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಅನಧಿಕೃತ ಆಸ್ತಿಗಳನ್ನು ನಿಯಮಾನುಸಾರ ಸಕ್ರಮಗೊಳಿಸಲು ಆಡಳಿತ ಸಿದ್ಧತೆ ನಡೆಸುತ್ತಿರುವ ನಡುವೆ ಸಮಸ್ಯೆ ಪರಿಹಾರಕ್ಕೆ ಮಾಲೀಕರು ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ.
ಹೌದು! ರಾಜ್ಯ ಸರ್ಕಾರವು ಅನಧಿಕೃತ ಆಸ್ತಿಗಳಿಗೆ ಖಾತೆ ನೀಡಿ ತೆರಿಗೆ ಸಂಗ್ರಹಿಸಲು ಆದೇಶಿಸಿದೆ. ಇದರಿಂದ ಅಲರ್ಟ್ ಆಗಿರುವ ಸಂಬಂಧಪಟ್ಟ ಅಧಿಕಾರಿಗಳು, ಆಯಾ ವ್ಯಾಪ್ತಿಯಲ್ಲಿ ಸರ್ವೇ ಕೈಗೊಂಡು ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಗೊಂದಲ ಬಗೆಹರಿಸಿಕೊಂಡು ಇಲಾಖೆ ಮಾರ್ಗಸೂಚಿ ಅನ್ವಯ ಕೆಲಸ ಮುಗಿಸಲು ಮುಂದಾಗಿದ್ದಾರೆ.
ಸರ್ಕಾರಿ ಇ-ತಂತ್ರಾಂಶದಲ್ಲಿ ಜಿಲ್ಲೆಯ ನಗರ, ಪಟ್ಟಣ ಪ್ರದೇಶಗಳ ವ್ಯಾಪ್ತಿಯಲ್ಲಿ 32005 ಅಧಿಕೃತ, 10,065 ಅನಧಿಕೃತ ಆಸ್ತಿಗಳು ನಮೂದಾಗಿವೆ. ಇದರ ನಡುವೆ ಭೂ ಪರಿವರ್ತನೆ ಇಲ್ಲದೇ ಕೃಷಿ ಜಾಗದಲ್ಲಿ ಕಟ್ಟಡಗಳ ನಿರ್ಮಾಣ, ಪ್ರಾಧಿಕಾರಗಳ ಅನುಮೋದನೆ ಪಡೆಯದೇ ಬಡಾವಣೆಗಳ ನಿರ್ಮಾಣ, ನಿವೇಶನಗಳ ವಿಂಗಡಣೆ ಸೇರಿ ಸಾಕಷ್ಟು ಅನಧಿಕೃತ ಆಸ್ತಿಗಳು ಇವೆ. ನಿಯಮಾನುಸಾರ ಖಾತೆಯನ್ನು ಹೊಂದಿಲ್ಲ. ಇದರಿಂದ ಆಸ್ತಿ ಮಾರಾಟ, ನೋಂದಣಿ ಜತೆಗೆ ಇತರ ವಹಿವಾಟಿಗೆ ತೊಂದರೆಯಾಗುತ್ತಿದೆ. ಹಾಗೆಯೇ ಅನಧಿಕೃತ ಆಸ್ತಿಗಳಿಂದ ಸ್ಥಳಿಯ ಆಡಳಿತ ಸಂಸ್ಥೆಗಳಿಗೆ ಯಾವುದೇ ತೆರಿಗೆ ಸಿಗುತ್ತಿಲ್ಲ. ಆದರೆ, ಇಂತಹವುಗಳಿಗೂ ಸರ್ಕಾರಿ ಸವಲತ್ತು ಸಿಗುತ್ತಿದೆ.ಇದರಿಂದ ಆದಾಯ ಖೋತಾದಲ್ಲಿ ಸ್ಥಳೀಯ ಆಡಳಿತ ಸಂಸ್ಥೆಗಳ ಅಭಿವೃದ್ಧಿ ಕೆಲಸಗಳ ನಿರ್ವಹಣೆಗೆ ತೊಡಕಾಗಿದೆ.
ಮಾರ್ಗಸೂಚಿ ಪ್ರಕಟ
ಈಗಾಗಲೇ ರಾಜ್ಯಮಟ್ಟದಲ್ಲಿ ಅನಧಿಕೃತ ಆಸ್ತಿಗಳಿಗೆ ಬಿ-ಖಾತೆ ನೀಡುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಮಾರ್ಗಸೂಚಿ ಪ್ರಕಟಿಸಲಾಗಿದೆ. ಇದರನ್ವಯ ಅಗತ್ಯ ಪ್ರಕ್ರಿಯೆ ನಿರ್ವಹಣೆಗೆ ಜಿಲ್ಲಾಡಳಿತಗಳಿಗೆ ಆದೇಶಿಸಲಾಗಿದೆ. ಅದರಂತೆ ಜಿಲ್ಲೆಯಲ್ಲಿ ಸಭೆಯನ್ನು ನಡೆಸಿ ಸ್ಥಳೀಯ ಆಡಳಿತ ಸಂಸ್ಥೆಗಳೊಂದಿಗೆ ಜಿಲ್ಲಾಧಿಕಾರಿಗಳು ಚರ್ಚಿಸಲಿದ್ದು ಫೆ.20ರ ಬಳಿಕ ಖಾತೆ ವಿತರಣೆಯಾಗುವ ನಿರೀಕ್ಷೆ ಹೊಂದಲಾಗಿದೆ.
ಅಧಿಕೃತಗೊಳಿಸಲು ಒತ್ತಡ
ಮೊದಲಿನಿಂದಲೂ ಸ್ಥಳೀಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಮೇಲೆ ಅನಧಿಕೃತ ಆಸ್ತಿಯನ್ನು ಸಕ್ರಮಗೊಳಿಸಲು ಮಾಲೀಕರು ನಿರಂತರವಾಗಿ ಒತ್ತಡ ಹೇರುತ್ತಿದ್ದಾರೆ. ಇದರ ಬಗ್ಗೆ ಸಾಮಾನ್ಯಸಭೆ, ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಗಳಲ್ಲಿ ಚರ್ಚೆಯಾಗುತ್ತಲೇ ಇದೆ. ಆದರೆ, ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದ್ದರಿಂದ ಸೂಕ್ತ ನಿರ್ಧಾರ ಕೈಗೊಳ್ಳಲು ಸಾಧ್ಯವಾಗಿರಲಿಲ್ಲ. ಆದರೆ, ಕೆಲ ಷರತ್ತಿಗೊಳಪಟ್ಟು ಅಕ್ರಮ ಸಕ್ರಮಕ್ಕೆ ಒಮ್ಮೆ ಅವಕಾಶ ನೀಡುತ್ತಿದ್ದು ಇದು ಆಸ್ತಿ ಮಾಲೀಕರ ಖುಷಿಗೆ ಕಾರಣವಾಗಿದೆ. ಯಾವುದೇ ಗೊಂದಲಕ್ಕೆ ಅವಕಾಶವಿಲ್ಲದೇ ತ್ವರಿತವಾಗಿ ಅರ್ಜಿ, ದಾಖಲೆಗಳು ಮತ್ತು ನಿಗದಿತ ತೆರಿಗೆ ಪಡೆದುಕೊಂಡು ಖಾತೆ ವಿತರಿಸಬೇಕು ಎಂದು ಒತ್ತಡ ಹೇರುತ್ತಿದ್ದಾರೆ.
ಆಸ್ತಿ ಗುರುತಿನ ಸಂಖ್ಯೆ
ಇ-ತಂತ್ರಾಂಶದಲ್ಲಿ ಸ್ವತ್ತಿನ ಗುರುತಿನ ಸಂಖ್ಯೆಯನ್ನು ನೀಡಲು ಜಿಲ್ಲೆಯ ನಗರ, ಪಟ್ಟಣ ಪ್ರದೇಶಗಳ ವ್ಯಾಪ್ತಿಯಲ್ಲಿ 6735 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ 1585 ಆಸ್ತಿಗಳ ಕರಾರುಪತ್ರವನ್ನು ಅಪ್‌ಡೇಟ್ ಮಾಡಲಾಗಿದೆ.
ಅನಧಿಕೃತ ಆಸ್ತಿಗಳ ಆದಾಯ
ಚಿಕ್ಕಬಳ್ಳಾಪುರ ನಗರಸಭೆ ವ್ಯಾಪ್ತಿಯಲ್ಲಿ ಪ್ರಸ್ತುತ 6 ಸಾವಿರ ಅನಧಿಕೃತ ಆಸ್ತಿಗಳನ್ನು ಸರ್ವೇ ಪ್ರಕಾರ ಗುರುತಿಸಲಾಗಿದೆ. ಆದರೆ, ವಾಸ್ತವವಾಗಿ ಇದು 15 ಸಾವಿರಕ್ಕಿಂತಲೂ ಹೆಚ್ಚು ಇದೆ ಎನ್ನುವುದು ಅಧಿಕಾರಿಗಳು ಮಾತು. ಜಿಲ್ಲೆಯ ಉಳಿದ ಭಾಗಗಳಲ್ಲಿನ ಅನಧಿಕೃತ ಆಸ್ತಿಗಳು ಸಾವಿರಾರು ಲೆಕ್ಕದಲ್ಲಿದ್ದು ಇವುಗಳ ಸಕ್ರಮದಿಂದ ಸರ್ಕಾರಕ್ಕೆ ಒಳ್ಳೆಯ ಆದಾಯ ಸಿಗಲಿದೆ. ಜನರಿಗೂ ಅನುಕೂಲವಾಗಲಿದೆ.
ಹಲವು ವರ್ಷಗಳ ಹಿಂದಿನ ಅನಧಿಕೃತ ಆಸ್ತಿಗಳಿಗೆ ನಿಯಮಾನುಸಾರ ಖಾತೆಯನ್ನು ನೀಡಿ, ತೆರಿಗೆ ಸಂಗ್ರಹಿಸಬೇಕು. ಇದರಲ್ಲಿ ಯಾವುದೇ ಅವ್ಯವಹಾರ, ಗೊಂದಲಕ್ಕೆ ಅವಕಾಶ ನೀಡಬಾರದು. ಹಾಗೆಯೇ ಜನರನ್ನು ಅನವಶ್ಯಕವಾಗಿ ಅಲೆದಾಡಿಸಬಾರದು. ಇದರಿಂದ ಸ್ಥಳಿಯ ಆಡಳಿತ ಸಂಸ್ಥೆಗಳ ಆದಾಯ ಹೆಚ್ಚಳವಾಗಿ, ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಲು ಅನುಕೂಲವಾಗುತ್ತದೆ. -ಆರ್.ಮಟಮಪ್ಪ ನಗರಸಭೆ ಸದಸ್ಯ, ಚಿಕ್ಕಬಳ್ಳಾಪುರ