ಆಸ್ಪತ್ರೆ ಆಡಳಿತ ಅವ್ಯವಸ್ಥೆಗೆ ಜಗಳೂರು ಶಾಸಕ ಕಿಡಿ

91
Published on

ಜಗಳೂರು: ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಮಂಗಳವಾರ ಬೆಳಗ್ಗೆ ದಿಢೀರ್ ಭೇಟಿ ನೀಡಿದ ಶಾಸಕ ಚಿಕ್ಕಮ್ಮನಹಟ್ಟಿ ಬಿ. ದೇವೇಂದ್ರಪ್ಪ ಪ್ರತಿ ಕೊಠಡಿಯನ್ನು ಪರಿಶೀಲಿಸಿ ಆಡಳಿತ ಅವ್ಯವಸ್ಥೆಯ ವಿರುದ್ಧ ಹರಿಹಾಯ್ದರು.

ಆಸ್ಪತ್ರೆಯ ಮಾಹಿತಿ ಪಡೆದು ಮಾತನಾಡಿ, ಆಸ್ಪತ್ರೆಯಲ್ಲಿ ವೈದ್ಯ ಸಿಬ್ಬಂದಿ ರೋಗಿಗಳೊಂದಿಗೆ ಸೌಜನ್ಯದಿಂದ ವರ್ತಿಸಬೇಕು, ಔಷಧವಿದ್ದರೂ ಹೊರಗಡೆಯಿಂದ ತರುವಂತೆ ಸೂಚಿಸಬಾರದು, ಗುಣಮಟ್ಟದ ಆಹಾರ ನೀಡಬೇಕು. ಇಲ್ಲದಿದ್ದರೆ ಸಂಬಂಧಪಟ್ಟವರ ವಿರುದ್ಧ ಕ್ರಮ ನಿಶ್ಚಿತ ಎಂದು ಎಚ್ಚರಿಸಿದರು.

ನಂತರ ಡಯಾಲಿಸಿಸ್ ಕೇಂದ್ರಕ್ಕೆ ತೆರಳಿ ರೋಗಿಗಳ ಆರೋಗ್ಯ ವಿಚಾರಿಸಿದರು. ಡಯಾಲಿಸಿಸ್ ಎಷ್ಟು ದಿನಕ್ಕೊಮ್ಮೆ ಮಾಡಿಸಬೇಕು, ಅದರಿಂದ ಪ್ರಯೋಜನ? ಅಡ್ಡ ಪರಿಣಾಮ? ನಿತ್ಯ ಎಷ್ಟು ಜನ ಇದರ ಪ್ರಯೋಜನ ಪಡೆಯುತ್ತಾರೆ? ಇನ್ನೂ ಏನು ಸೌಲಭ್ಯ ಬೇಕಾಗಿದೆ? ಎಂದು ವೈದ್ಯರಿಂದ ಮಾಹಿತಿ ಪಡೆದರು.

ತುರ್ತು ಚಿಕಿತ್ಸಾ ವಿಭಾಗ, ಹೆರಿಗೆ ಕೊಠಡಿ, ಹೃದಯಾಘಾತ ತೀವ್ರ ನಿಗಾ ಘಟಕ, ರೋಗಿಗಳ ವಾರ್ಡ್, ರಕ್ತ ನಿಧಿ, ಪ್ರಯೋಗಾಲಯ, ಔಷಧ ವಿತರಣಾ ಕೊಠಡಿ, ಶಸ್ತ್ರಚಿಕಿತ್ಸಾ ವಿಭಾಗ ಸೇರಿದಂತೆ ವಿವಿಧ ವಿಭಾಗಗಳಿಗೆ ಖುದ್ದು ಭೇಟಿ ನೀಡಿ ಅಲ್ಲಿನ ವಸ್ತುಸ್ಥಿತಿ ಅವಲೋಕಿಸಿದರು.

ಜನೌಷಧ ಕೇಂದ್ರಕ್ಕೆ ಬೀಗ:

ಜಗಳೂರಿನ ಆಸ್ಪತ್ರೆ ಆವರಣದ ಜನೌಷಧ ಕೇಂದ್ರದಲ್ಲಿ ಔಷಧ ಸಮರ್ಪಕವಾಗಿ ಪೂರೈಕೆಯಾಗುತ್ತಿಲ್ಲ. ವೈದ್ಯರು ಬರೆದ ಔಷಧ ಸಿಗುವುದಿಲ್ಲ. ಖಾಸಗಿ ಮೆಡಿಕಲ್ ಸ್ಟೋರ್‌ಗಳಿಗೆ ಹೋಗಬೇಕು. ಉಪಯೋಗವಿಲ್ಲದ ಜನೌಷಧ ಕೇಂದ್ರ ಮುಚ್ಚಿಬಿಡಿ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಬಿಪಿಎಚ್ ಲ್ಯಾಬ್ ಪ್ರಾರಂಭಿಸಿ:
ಆಸ್ಪತ್ರೆಯಲ್ಲಿ ಬಿಪಿಎಚ್ ಲ್ಯಾಬ್ ಉದ್ಘಾಟನೆ ಮಾಡಿಸಿ ಸಾರ್ವಜನಿಕ ಉಪಯೋಗಕ್ಕೆ ಬಿಡಿ ಎಂದು ಶಾಸಕ ಬಿ. ದೇವೇಂದ್ರಪ್ಪ ವೈದ್ಯಾಧಿಕಾರಿಗೆ ಸೂಚನೆ ನೀಡಿದರು. ವೈದ್ಯಾಧಿಕಾರಿ ಷಣ್ಮುಖಪ್ಪ ಪ್ರತಿಕ್ರಿಯಿಸಿ, ಲ್ಯಾಬ್ ಕಾಮಗಾರಿ ಸಂಪೂರ್ಣ ಮುಗಿದಿದೆ. ಆದರೆ, ತುಂಬ ಎತ್ತರವಿರುವುದರಿಂದ ರ‌್ಯಾಕ್ ಅಳವಡಿಸಲು ಅನುದಾನದ ಕೊರತೆ ಇದೆ. ಹಂತ ಹಂತವಾಗಿ ಪೂರ್ಣಗೊಳಿಸಿ ಉದ್ಘಾಟಿಸಲಾಗುವುದು ಎಂದರು.

ಗುತ್ತಿಗೆದಾರನ ವಿರುದ್ಧ ಅಸಮಾಧಾನ
ಆಸ್ಪತ್ರೆಯ ದಾಖಲಾತಿ ರೋಗಿಗಳಿಗೆ ಮೊಟ್ಟೆ, ಬಾಳೆ ಹಣ್ಣು, ಬ್ರೆಡ್, ಊಟ, ಟೀ ಸಮರ್ಪಕವಾಗಿ ಪೂರೈಕೆಯಾಗುತ್ತಿಲ್ಲ ಎಂಬ ಆರೋಪವಿದೆ. ಇದರ ಗುತ್ತಿಗೆ ಯಾರ ಪಡೆದಿದ್ದಾರೆ ಮಾಹಿತಿ ಕೊಡಿ ಎಂದರು.
ಇದಕ್ಕೆ ಉತ್ತರಿಸಲು ವೈದ್ಯಾಧಿಕಾರಿ ಡಾ. ಷಣ್ಮುಖಪ್ಪ ತಡಬಡಿಸಿದರು. ಆಗ ಗರಂ ಆದ ಶಾಸಕರು, ಜವಾಬ್ದಾರಿಯುತ ವೈದ್ಯರಾಗಿ ಆಸ್ಪತ್ರೆಯಲ್ಲಿ ಏನು ನಡೆಯುತ್ತಿದೆ? ಗುತ್ತಿಗೆದಾರ ಯಾರು ಎಂಬ ಅರಿವಿಲ್ಲವೇ? ಈ ಕೂಡಲೇ ಅವರನ್ನು ಕರೆಸಿ, ಇಲ್ಲವಾದರೆ ನಿಮ್ಮ ಮೇಲೆ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಕಿಡಿಕಾರಿದರು.

ತಾಲೂಕು ಆರೋಗ್ಯಾಧಿಕಾರಿ ವಿಶ್ವನಾಥ್, ಡಾ. ಜಗನಾಥ್, ಡಾ.ಎಸ್.ಕೆ. ಸಂಜಯ್, ಸರ್ಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಸಿ.ಬಿ. ನಾಗರಾಜ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಅಹಮದ್, ಜಿಲ್ಲಾ ಕಾರ್ಯದರ್ಶಿ ಶೇಖರಪ್ಪ ಪಲ್ಲಾಗಟ್ಟೆ, ಮುಖಂಡರಾದ ಎಂ.ಎಸ್. ಪಾಟೀಲ್, ಸಿ. ತಿಪ್ಪೇಸ್ವಾಮಿ, ತಿಮ್ಮಣ್ಣ, ರಂಗಸ್ವಾಮಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net