

ಚಳ್ಳಕೆರೆ: ಸರ್ಕಾರದ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವಲ್ಲಿ ಗ್ರಾಮ ಪಂಚಾಯಿತಿ ಆಡಳಿತ ನಿರ್ವಹಣೆ ಪ್ರಾಮಾಣಿಕವಾಗಿ ನಡೆಯಬೇಕು ಎಂದು ಶಾಸಕ ಟಿ. ರಘುಮೂರ್ತಿ ಹೇಳಿದರು.
ತಾಲೂಕಿನ ನನ್ನಿವಾಳ ಗ್ರಾಮದಲ್ಲಿ 52 ಲಕ್ಷ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿದ್ದ ಗ್ರಾಮ ಪಂಚಾಯಿತಿ ಕಟ್ಟಡ ಉದ್ಘಾಟನೆ ಸೇರಿ ಸುಮಾರು 2 ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ಚಳ್ಳಕೆರೆ ತಾಲೂಕಿನಲ್ಲಿ ನನ್ನಿವಾಳ ಗ್ರಾಮ ಪಂಚಾಯಿತಿ ವಿಶೇಷ 34 ಹಟ್ಟಿಗಳ ನಿರ್ವಹಣೆಯ ದೊಡ್ಡ ಪಂಚಾಯಿತಿಯಾಗಿದೆ. ಇಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಜನ ಹೆಚ್ಚಾಗಿ ಇದ್ದಾರೆ. ಅರ್ಹ ಫಲಾನುಭವಿಗಳಿಗೆ ವಸತಿ ಸೌಲಭ್ಯ ಸೇರಿದಂತೆ ಮೂಲಸೌಕರ್ಯ ವಿತರಣೆಯಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳಬೇಕು ಎಂದರು.
ಸ್ವಚ್ಚತೆ, ಬೆಳಕಿನ ವ್ಯವಸ್ಥೆ ಮತ್ತು ಕುಡಿಯುವ ನೀರಿನ ಅನುಕೂಲಕ್ಕೆ ತೊಂದರೆ ಆಗದಂತೆ ನಿಗಾ ವಹಿಸಬೇಕು. ಈಗಾಗಲೇ ಪ್ರತಿ ಹಟ್ಟಿಗಳಲ್ಲೂ ಸಮುದಾಯ ಭವನ, ರಸ್ತೆ ನಿರ್ಮಾಣ ಮತ್ತು ಬಸ್ಸಿನ ಸೌಕರ್ಯ ಕಲ್ಪಿಸಲಾಗಿದೆ. ಆಡಳಿತ ವಿಕೇಂದ್ರಿಕರಣ ಪರಿಣಾಮಕಾರಿಯಾಗಲು ಪಂಚಾಯಿತಿ ಹಂತದಲ್ಲಿ ಒಗ್ಗಟ್ಟಿನ ಆಡಳಿತ ನಡೆಯಬೇಕು. ಪಕ್ಷಭೇದ ಮರೆತು ಹಳ್ಳಿಗಳ ಅಭಿವೃದ್ದಿಗೆ ಪರಸ್ಪರ ಹೊಂದಾಣಿಕೆ ಅಗತ್ಯ ಎಂದು ಕಿವಿಮಾತು ಹೇಳಿದರು.
ತಾಪಂ ಮಾಜಿ ಅಧ್ಯಕ್ಷ, ಮುಖಂಡ ದೊರೆ ಬೈಯಣ್ಣ ಮಾತನಾಡಿ, ನನ್ನಿವಾಳ ಗ್ರಾಮಕ್ಕೆ ಇತಿಹಾಸ ಹಿನ್ನೆಲೆ ಇರುವಂತ ಏಕಶಿಲಾ ಬೆಟ್ಟ ಇದೆ. ಬೆಟ್ಟದ ಮೇಲೆ ಬಸವಣ್ಣ, ಕಾಟಲಿಂಗೇಶ್ವರ ದೇವಾಲಯ, ನಂದೀಶನ ವಿಗ್ರಹ, ಹೊಂಡ ಇದೆ. ಇಲ್ಲಿನ ಬುಡಕಟ್ಟು ಜನಾಂಗದ ಹಬ್ಬಗಳ ಆಚರಣೆಯಲ್ಲಿ ಶ್ರೀ ಬಂಗಾರ ದೇವರನ್ನು ಹೆಗಲ ಮೇಲೆ ಹೊತ್ತು ಪೂಜಾ ಕಾರ್ಯಕ್ಕೆ ಬೆಟ್ಟದ ಮೇಲಕ್ಕೆ ಹೋಗಲಾಗುತ್ತದೆ. ಇದರ ಅನುಕೂಲಕ್ಕೆ ಮೆಟ್ಟಿಲುಗಳ ನಿರ್ಮಾಣ ಮಾಡಿಕೊಡಬೇಕು. ಪ್ರವಾಸ ತಾಣದಂತೆ ನನ್ನಿವಾಳ ಗ್ರಾಮವನ್ನು ಅಭಿವೃದ್ದಿಪಡಿಸಬೇಕು ಎಂದು ಶಾಸಕರಲ್ಲಿ ಮನವಿ ಮಾಡಿದರು.
ಗ್ರಾಪಂ ಅಧ್ಯಕ್ಷೆ ಶಿವಮ್ಮ ರಾಜಣ್ಣ, ಉಪಾಧ್ಯಕ್ಷೆ ಬೀಬಿಜಾನ್ ದಾದಾಪೀರ್, ನಗರಸಭಾ ಅಧ್ಯಕ್ಷೆ ಬಿ. ಶಿಲ್ಪಾ, ಸ್ಥಾಯಿ ಸಮಿತಿ ಅಧ್ಯಕ್ಷ ಟಿ. ಮಲ್ಲಿಕಾರ್ಜುನ, ಗ್ಯಾರಂಟಿ ಸಮಿತಿ ಅಧ್ಯಕ್ಷ ಗದ್ದಿಗೆ ತಿಪ್ಪೇಸ್ವಾಮಿ, ಜಿಪಂ ಮಾಜಿ ಸದಸ್ಯ ಬಿ.ಪಿ. ಪ್ರಕಾಶ್‌ಮೂರ್ತಿ, ತಹಸೀಲ್ದಾರ್ ರೇಹಾನ್ ಪಾಷ, ತಾಪಂ ಇಒ ಎಚ್. ಶಶಿಧರ, ಪಿಡಿಒ ಎಸ್. ಇನಾಯಿತ್ ಪಾಷಾ, ಕೆ. ವೀರಭದ್ರಯ್ಯ, ಬಿ.ಟಿ. ರಮೇಶ್‌ಗೌಡ, ಎಂ.ಜೆ. ರಾಘವೇಂದ್ರ ಸೇರಿ ಗ್ರಾಮ ಪಂಚಾಯಿತಿ ಸದಸ್ಯರು ಇದ್ದರು.
ಮಹಿಳೆಯರಿಂದ ಅಪಸ್ವರ
ಸರ್ಕಾರದಿಂದ ಸಮರ್ಪಕ ಗ್ಯಾರಂಟಿ ಯೋಜನೆಗಳ ಜತೆಗೆ, ಅಭಿವೃದ್ಧಿ ಕಾರ್ಯಗಳೂ ನಡೆಯುತ್ತಿವೆ ಎಂದು ಶಾಸಕ ಟಿ. ರಘುಮೂರ್ತಿ ಮಾತನಾಡುತ್ತಿದ್ದ ವೇಳೆ, ಸಭೆಯಲ್ಲಿ ಕುಳಿತಿದ್ದ ಮಹಿಳೆಯರು ಮೂರು ತಿಂಗಳಿನಿಂದ ಗೃಹಲಕ್ಷ್ಮಿ ಹಣವೇ ಬಂದಿಲ್ಲ. ಬರೀ ಭಾಷಣದಲ್ಲಿ ಹೇಳುವಂತ ಯೋಜನೆಯಾಗಿದೆ ಎಂದು ಗೊಣಗಾಡಿದರು.
ಇದನ್ನು ಕೇಳಿಸಿಕೊಂಡ ಶಾಸಕರು, ಕೇವಲ ಮೂರು ತಿಂಗಳಿನಿಂದ ಬಂದಿಲ್ಲ. ಇದುವರೆಗೂ ಗೃಹಲಕ್ಷ್ಮಿ ಯೋಜನೆ ಪಡೆದುಕೊಂಡಿರುವ ಬಗ್ಗೆ ಮಾತನಾಡುತ್ತಿಲ್ಲ. ಅನ್ನಭಾಗ್ಯ, ಶಕ್ತಿ ಯೋಜನೆ, ಗೃಹಲಕ್ಷ್ಮಿ, ಗೃಹಜ್ಯೋತಿ, ಯುವನಿಧಿ ಬಡವರಿಗೆ ಅನುಕೂಲವಾಗುತ್ತಿವೆ. ಉಳ್ಳವರು, ಗ್ಯಾರಂಟಿ ಯೋಜನೆ ವಿರೋಧ ಮಾಡುತ್ತಿದ್ದಾರೆ. ಇದರ ಜತೆಗೆ ಯೋಜನೆ ಪಡೆದುಕೊಳ್ಳುವವರು ಧ್ವನಿಗೂಡಿಸುವಂತದ್ದು ಆಗಬಾರದು. ಸ್ವಲ್ಪ ವಿಳಂಬವಾದರೂ ಸೌಲಭ್ಯ ಫಲಾನುಭವಿಗಳಿಗೆ ತಲುಪುವುದು ಗ್ಯಾರಂಟಿ ಎಂದರು.