ಇಲಾಖೆಗಳು, ನಿಗಮಗಳನ್ನು ವಿಲೀನಗೊಳಿಸುವ ಬಗ್ಗೆ ಚಿಂತನೆ: ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್‌.ವಿ.ದೇಶಪಾಂಡೆ

administration-development-authority-Meeting
Published on

ಕಾರವಾರ: ಆಡಳಿತ ಸುಧಾರಿಸಲು ವೆಚ್ಚ ಇಳಿಸಲು ಇಲಾಖೆಗಳು,ನಿಗಮ, ಮಂಡಳಿಗಳನ್ನು ವಿಲೀನಗೊಳಿಸುವ ಸಾಧ್ಯತೆಗಳನ್ನು ಕೂಲಂಕುಶವಾಗಿ ಪರಿಶೀಲಿಸಿ ಸರ್ಕಾರಕ್ಕೆ ಸಲಹೆ ನೀಡಲಾಗುವುದು ಎಂದು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆ ಹೇಳಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲೆಯ ವಿವಿಧ ಇಲಾಖೆಗಳ ಅಧಿಕಾರಿಗಳು, ಜನಪ್ರತಿನಿಧಿಗಳು, ಸಾರ್ವಜನಿಕರ ಜತೆ ರಾಜ್ಯ ಆಡಳಿತ ಸುಧಾರಣೆಯ ಬಗ್ಗೆ ಸಲಹೆಗಳನ್ನು ಪಡೆದು ನಂತರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ ಅವರು, ಯೋಜನೆಗಳನ್ನು ಜೋಡಿಸುವ ಬಗ್ಗೆಯೂ ಚಿಂತನೆ ನಡೆಸಲಾಗುವುದು ಎಂದರು.

ಆಡಳಿತದಲ್ಲಿ ಪಾರದರ್ಶಕತೆ, ಸರಳತೆ ಹಾಗೂ ಸಕಾಲದಲ್ಲಿ ನಾಗರಿಕ ಸೇವೆಗಳನ್ನು ಕಡಿಮೆ ಖರ್ಚಿನಲ್ಲಿ ನೀಡಲು ಬೇಕಾದ ಸಲಹೆಗಳನ್ನು ಸರ್ಕಾರಕ್ಕೆ ನೀಡುವುದು ಆಯೋಗದ ಕಾರ್ಯವಾಗಿದೆ. ಈ ವರ್ಷ ಜನವರಿಯವರೆಗೆ ರಾಜ್ಯದ 39 ಇಲಾಖೆಗಳಿಗೆ ಸಂಬಂಧಿಸಿ 7 ವರದಿಗಳನ್ನು ನೀಡಿ 5039 ಶಿಫಾರಸುಗಳನ್ನು ರಾಜ್ಯ ಆಡಳಿತ ಸುಧಾರಣಾ ಆಯೋಗ ಮಾಡಿತ್ತು. ಆದರೆ, ಅದರಲ್ಲಿ ಕೆಲವು ಶಿಫಾರಸುಗಳು ಮಾತ್ರ ಅನುಷ್ಠಾನಗೊಂಡಿದ್ದವು. ಜನವರಿಯಲ್ಲಿ ನಾನು ಅಧಿಕಾರ ವಹಿಸಿಕೊಂಡ ನಂತರ ಹಿಂದೆ ಮಾಡಲಾದ ಶಿಫಾರಸುಗಳ ಜಾರಿಗೆ ಒತ್ತು ನೀಡಿದ್ದೇನೆ ಎಂದರು. ಮುಖ್ಯಮಂತ್ರಿಗಳು, ಸಂಬಂಧಪಟ್ಟ ಇಲಾಖೆಯ ಸಚಿವರು ಹಾಗೂ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದು, ಹಿಂದಿನ ಶಿಫಾರಸುಗಳ ಜಾರಿಗೆ ಕ್ರಮ ವಹಿಸುವಂತೆ ಒತ್ತಡ ಹಾಕಿದ್ದೇನೆ ಮಾತ್ರವಲ್ಲ.
ಆಹಾರ ಮತ್ತು ನಾಗರಿಕ ಸರಬರಾಜು, ಸಾರಿಗೆ ಇಲಾಖೆಗೆ ಹಾಗೂ ಕಂದಾಯ ಇಲಾಖೆಗಳಿಗೆ ಸಂಬಂಧಿಸಿ 2021 ರಲ್ಲಿ ಆಯೋಗ ಮಾಡಿದ ಶಿಫಾರಸುಗಳ ಜಾರಿಗೆ ವಹಿಸಿದ ಕ್ರಮಗಳ ಬಗ್ಗೆ ಇತ್ತೀಚೆಗೆ ಇಲಾಖೆ ಕಾರ್ಯದರ್ಶಿಗಳ ಜತೆ ಸಭೆ ನಡೆಸಿ ಚರ್ಚಿಸಿದ್ದೇನೆ. ಕಂದಾಯ ಇಲಾಖೆಗೆ ಸಂಬಂಧಿಸಿ 528 ಶಿಫಾರಸುಗಳನ್ನು ಮಾಡಲಾಗಿದ್ದು, 205 ಶಿಫಾರಸುಗಳು ಜಾರಿಯಾಗಿವೆ. 76 ಅನುಷ್ಠಾನ ಹಂತದಲ್ಲಿವೆ. ಆಹಾರ ಇಲಾಖೆಗೆ ಸಂಬಂಧಿಸಿ 111 ಶಿಫಾರಸುಗಳಲ್ಲಿ 37 ಮಾತ್ರ ಅನುಷ್ಠಾನಗೊಂಡಿದ್ದು, 18 ಅನುಷ್ಠಾನದ ಹಂತದಲ್ಲಿವೆ. ಸಾರಿಗೆ ಇಲಾಖೆಯ 217 ಶಿಫಾರಸುಗಳಲ್ಲಿ 132 ಅನುಷ್ಠಾನವಾಗಿದ್ದು, 4 ಅನುಷ್ಠಾನ ಹಂತದಲ್ಲಿವೆ ಎಂದು ವಿವರಿಸಿದರು.
ಆಯೋಗವು ಸಂಪರ್ಕ ರಹಿತ, ನಗದು ಹರಿತ ಸೇವೆಗೆ ಶಿಫಾರಸು ಮಾಡಿಡಲಿದೆ. ಅಲ್ಲದೆ, ಎಲ್ಲ ಹಂತಗಳಲ್ಲಿ ಇ-ಆಫೀಸ್ ಬಳಕೆಗೆ, ಅಟಲ್ ಜೀ ಜನಸ್ನೇಹಿ, ಗ್ರಾಮ ಪಂಚಾಯಿತಿ ರೈತ ಸಂಪರ್ಕ ಕೇಂದ್ರ ಮುಂತಾದ ಮುಂಚೂಣಿ ಕಚೇರಿಗಳಲ್ಲಿ ಸಿಬ್ಬಂದಿ ಹೆಚ್ಚಿಸಲು ಶಿಫಾರಸು ಮಾಡಲಿದೆ ಎಂದರು.
ಆಯೋಗದ ಎರಡನೇ ವರದಿಯಲ್ಲಿರುವ ಸಮಾಜ ಕಲ್ಯಾಣ, ಪರಿಶಿಷ್ಟ ವರ್ಗಗಳ ಕಲ್ಯಾಣ ಹಿಂದುಳಿದ ವರ್ಗಗಳ ಇಲಾಖೆಗಳ ಬಗ್ಗೆ ಹಾಗೂ 3 ನೇ ವರದಿಯಲ್ಲಿರುವ ಗ್ರಾಮೀಣಾಭಿವೃದ್ಧಿ, ನಗರಾಭಿವೃದ್ಧಿ ಪಂಚಾಯತ್ ರಾಜ್ ಹಾಗೂ ಇಂಧನ ಇಲಾಖೆ ಶಿಫಾರಸುಗಳಿವೆ. ಅವುಗಳ ಅನುಷ್ಠಾನದ ಬಗ್ಗೆ ಚರ್ಚಿಸಲಾಗುವುದು ಎಂದರು. ಶಾಸಕ ಭೀಮಣ್ಣ ನಾಯ್ಕ, ಎಂಎಲ್‌ಸಿ ಗಣಪತಿ ಉಳ್ವೇಕರ್, ಜಿಲ್ಲಾಽಕಾರಿ ಗಂಗೂಬಾಯಿ ಮಾನಕರ್, ಜಿಪಂ ಸಿಇಒ ಈಶ್ವರ ಕಾಂದೂ, ಎಸ್‌ಪಿ ಎನ್.ವಿಷ್ಣುವರ್ಧನ ಸಭೆಯಲ್ಲಿದ್ದರು.

ದಿನಕದ ಶೆಟ್ಟಿ ಗರಂ

ಕುಮಟಾ ಸಬ್ ರಿಜಿಸ್ಟ್ರಾರ್‌ ಕಚೇರಿಯು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದ್ದು, ಆಡಳಿತ ಸೌಧದಲ್ಲಿರುವ ನೂತನ ಕಚೇರಿಗೆ ಸ್ಥಳಾಂತರಿಸದ ಬಗ್ಗೆ ಸಬ್ ರಿಜಿಸ್ಟ್ರಾರ್‌ ಅವರನ್ನು ತರಾಟೆಗೆ ತೆಗೆದುಕೊಂಡರು. ಜಲಜೀವನ್ ಮಿಷನ್ ಯೋಜನೆಯಡಿ ಕುಡಿಯುವ ನೀರಿನ ಕಾಮಗಾರಿಗಳಿಗೆ ಅರಣ್ಯ ಇಲಾಖೆ ತೊಂದರೆ ನೀಡುತ್ತಿರುವ ಬಗ್ಗೆ ಆಕ್ಷೇಪಿಸಿದರು. ಆರ್.ವಿ.ದೇಶಪಾಂಡೆ ಅವರು ಸಭೆಯ ನಡುವೆಯೇ ಅರಣ್ಯ ಇಲಾಖೆಯ ರಾಜ್ಯದ ಹಿರಿಯ ಅಽಕಾರಿಗಳಿಗೆ ಪೋನಾಯಿಸಿ ಅಽಕಾರಿಗಳು ಸಾರ್ವಜನಿಕ ಕೆಲಸಕ್ಕೆ ತೊಂದರೆ ನೀಡದಂತೆ ಸೂಚಿಸಿ ಎಂದು ಹೇಳಿದರು.

ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಿ

ಹಳಿಯಾಳ: ಗ್ರಾಮೀಣ ಭಾಗದ ಜನರಲ್ಲಿ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಿ ಎಂದು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರೂ ಆಗಿರುವ ಹಳಿಯಾಳದ ಶಾಸಕ ಆರ್.ವಿ.ದೇಶಪಾಂಡೆ ಅಽಕಾರಿಗಳಿಗೆ ಸೂಚಿಸಿದರು.
ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಮಂಗಳವಾರ ತ್ರೈಮಾಸಿಕ ಕೆಡಿಪಿ ಸಭೆ ನಡೆಸಿ ಅವರು ಮಾತನಾಡಿದರು. ಗ್ರಾಮೀಣ ಭಾಗದಲ್ಲಿ ಸಾಂಕ್ರಾಮಿಕ ರೋಗ ಹರಡಲು ವೈಯಕ್ತಿಕ ಹಾಗೂ ಮನೆಗಳ ಸುತ್ತ ಸ್ವಚ್ಛತೆ ಇಲ್ಲದೇ ಇರುವುದೇ ಕಾರಣವಾಗಿದೆ. ಇದರಿಂದ ಅಧಿಕಾರಿಗಳು ಆ ನಿಟ್ಟಿನಲ್ಲಿ ಗಮನ ಹರಿಸಬೇಕು ಎಂದು ಸೂಚಿಸಿದರು.
ಕಾಮಗಾರಿಗಳನ್ನು ಸಕಾಲದಲ್ಲಿ ಮುಗಿಸಬೇಕು. ವಿಳಂಬವಾದಲ್ಲಿ ಖರ್ಚಿನಲ್ಲೂ ಹೆಚ್ಚಿನ ವ್ಯತ್ಯಾಸ ವಾಗುತ್ತದೆ. ಹಾಗಾಗಿ ಎಲ್ಲ ಅಧಿಕಾರಿಗಳು ಸಮನ್ವಯದಿಂದ ಸರ್ಕಾರದ ಯೋಜನೆಗಳನ್ನು ಸಕಾಲದಲ್ಲಿ ಅನುಷ್ಠಾನ ಮಾಡಲು ಕ್ರಮ ವಹಿಸಬೇಕು ಎಂದರು. ವಿಳಂಬ ಮಾಡುವ, ಭ್ರಷ್ಟಾಚಾರ ಮಾಡುವ ಅಧಿಕಾರಿಗಳು ಯಾವುದೇ ಕ್ಷೇತ್ರಗಳಲ್ಲೂ ಕೆಲಸ ಮಾಡಲು ಅವಕಾಶವಿಲ್ಲ ಎಂದು ಎಚ್ಚರಿಸಿದರು.
ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿ, ಸೂಕ್ತ ಮಾರ್ಗದರ್ಶನ ನೀಡಿದರು. ರಸ್ತೆ, ಕುಡಿಯುವ ನೀರು ಮುಂತಾದ ಕಾಮಗಾರಿಗಳಿಗೆ ತೊಂದರೆ ನೀಡದಂತೆ ಅರಣ್ಯಾಽಕಾರಿಗಳಿಗೆ ಮಾರ್ಗದರ್ಶನ ನೀಡಿದರು. ಪ್ರತಿಭಾವಂತ ಮೂವರು ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್, ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತಾಲೂಕಿಗೆ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರೊತ್ಸಾಹಧನದ ಚೆಕ್, ಅಂಗನವಾಡಿ ಕಾರ್ಯಕರ್ತೆಯರಿಗೆ ಮೊಬೈಲ್ ವಿತರಣೆ ಮಾಡಿದರು. ಸರ್ಕಾರಿ ಆಸ್ಪತ್ರೆಯಲ್ಲಿ ಆರೋಗ್ಯ ರಕ್ಷಾ ಸಮಿತಿಯ ಸಭೆ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net