ಕಾರವಾರ: ಸರ್ಕಾರಿ ಭೂಮಿಯನ್ನು ಸಂರಕ್ಷಣೆ ಮಾಡುವಲ್ಲಿ ಉತ್ತರ ಕನ್ನಡ ಜಿಲ್ಲೆ ರಾಜ್ಯಲ್ಲಿ ಮೊದಲನೇ ಸ್ಥಾನದಲ್ಲಿದೆ.
ಜಿಲ್ಲೆಯಲ್ಲಿ ಒಟ್ಟು 1,04,192 ಸರ್ಕಾರಿ ಆಸ್ತಿಗಳಿದ್ದು, ಅವುಗಳ ಪೈಕಿ 79,628 ಆಸ್ತಿಗಳಿಗೆ ಗ್ರಾಮ ಆಡಳಿತ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದು, ಜಿಯೋ ಫೆನ್ಸಿಂಗ್ ಮಾಡುವ ಕಾರ್ಯ ಪ್ರಗತಿಯಲ್ಲಿದೆ. ಇದು, ರಾಜ್ಯದಲ್ಲೇ ಅಧಿಕ ಸಂಖ್ಯೆಯದ್ದಾಗಿದೆ ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ತಿಳಿಸಿದ್ದಾರೆ.
ಸರ್ಕಾರಿ ಆಸ್ತಿಗಳು ಖಾಸಗಿ ಪಾಲಾಗುವುದನ್ನು ತಡೆಯಲು ರಾಜ್ಯ ಸರ್ಕಾರ ಜಾರಿಗೆ ತಂದಿರುವ `ಲ್ಯಾಂಡ್ ಬೀಟ್’ ಎಂಬ ಮೊಬೈಲ್ ಆ್ಯಪ್ ಬಳಸಿಕೊಂಡು ಭೂಮಿಗಳನ್ನು ಜಿಯೋ ಫೆನ್ಸಿಂಗ್ ಮಾಡುವ ಕಾರ್ಯ ರಾಜ್ಯಾದ್ಯಂತ ಪ್ರಗತಿಯಲ್ಲಿದೆ. ಕಂದಯ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಜಮೀನುಗಳಾದ ಗೋಮಾಳ, ಹುಲ್ಲು ಬನ್ನಿ ಖರಾಬು, ಸರ್ಕಾರಿ ಪಡಾ, ಸರ್ಕಾರಿ ಖರಾಬು, ಸರ್ಕಾರಿ ಬೀಳು, ದನಗಳಿಗೆ ಮುಫತ್ತು, ಸರ್ಕಾರಿ ದಾರಿ, ಗುಂಡು ತೋಪು ಇತ್ಯಾದಿ ಹಾಗೂ ಸರ್ಕಾರಿ ಕೆರೆ ಮತ್ತು ಸರ್ಕಾರಿ ಸ್ಮಶಾನಗಳನ್ನು ಗ್ರಾಮ ಆಡಳಿತ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಬೇಕಾಗಿದೆ. ಅತಿಕ್ರಮಣವಾಗಿದ್ದರೆ, ಅದನ್ನು ವರದಿ ಮಾಡಿ ತೆರವಿಗೆ ಕ್ರಮ ವಹಿಸಬೇಕು. ಇಲ್ಲದಿದ್ದಲ್ಲಿ ಜಿಯೋ ಫೆನ್ಸಿಂಗ್ ಮಾಡಬೇಕು. ಜಿಲ್ಲೆಯಲ್ಲಿ ಇದುವರೆಗೆ 62,163 ಸರಕಾರಿ ಆಸ್ತಿಗಳಿಗೆ ಸಂಪೂರ್ಣ ಜಿಯೋ ಫೆನ್ಸಿಂಗ್ ಮಾಡಿ ತಂತ್ರಾಂಶದಲ್ಲಿ ಅಳವಡಿಸಲಾಗಿದೆ.
ಸರ್ಕಾರಿ ಜಮೀನುಗಳ ಪೈಕಿ ಅರಣ್ಯ ಜಮೀನುಗಳು, ಇತರೆ ಯೋಜನೆಗಳಿಗೆ ಸ್ವಾಧೀನಪಡಿಸಿಕೊಂಡ ಜಮೀನುಗಳು (ಭೂಸ್ವಾಧೀನ), ಶಾಲೆಗಳು ಮತ್ತು ಆಸ್ಪತ್ರೆಗಳು ಇತ್ಯಾದಿಗಳಂತಹ ಇತರ ಇಲಾಖೆಗಳ ಜಮೀನುಗಳನ್ನು ಒಳಗೊಂಡಿದ್ದು, ಇಂತಹ ಜಮೀನುಗಳನ್ನು ಕ್ಷೇತ್ರ ಪರಿಶೀಲನೆಗಾಗಿ ಮುಂದಿನ ದಿನಗಳಲ್ಲಿ ಆಯಾ ಇಲಾಖೆಗಳಿಗೆ ಕಳುಹಿಸಲು ತಂತ್ರಾಂಶದಲ್ಲಿ ಅಗತ್ಯ ತಾಂತ್ರಿಕ ಬದಲಾವಣೆ ಮಾಡಲಾಗುತ್ತಿದೆ.
.
ಜಿಲ್ಲೆಯಲ್ಲಿ ಶೇ.80 ರಷ್ಟು ಅರಣ್ಯ ಪ್ರದೇಶವಿದ್ದು, ಸರ್ಕಾರದ ವಿವಿಧ ಯೋಜನೆಗಳಿಗೆ ವಸತಿ ಯೋಜನೆ ಫಲಾನುಭವಿಗಳಿಗೆ ನೀಡಲು ಭೂಮಿಯನ್ನು ಕೊರತೆ ಇದೆ. ಈ ಜಿಯೋ ಫೆನ್ಸಿಂಗ್ ಕಾರ್ಯದ ಬಳಿಕ ಜಿಲ್ಲೆಯಲ್ಲಿ ಎಷ್ಟು ಸರ್ಕಾರಿ ಆಸ್ತಿಯಿದೆ ಎಂಬುದು ಖಚಿತವಾಗಲಿದ್ದು, ನಂತರ ಅತಿಕ್ರಮಣ ತಡೆಗೆ ಹಾಗೂ ಸರ್ಕಾರಿ, ಸಾರ್ವಜನಿಕ ಉದ್ದೇಶಗಳಿಗೆ ಮಂಜೂರು ಮಾಡಲು ಅನುಕೂಲವಾಗಲಿದೆ.
ಗಂಗೂಬಾಯಿ ಮಾನಕರ್
ಜಿಲ್ಲಾಧಿಕಾರಿ ಉತ್ತರ ಕನ್ನಡ