ಒಕ್ಕಲಿಗರಿಗೆ ಮೀಸಲಾತಿ ಹೆಚ್ಚಳ, ಪ್ರಾಧಿಕಾರ ರಚನೆ: ಸಿಎಂಗೆ ಆದಿಚುಂಚನಗಿರಿ ಶ್ರೀಗಳ ಪತ್ರ

adichunchangiri
Published on

ಬೆಂಗಳೂರು: ಆರ್ಥಿಕವಾಗಿ ಸಂಕಷ್ಟದಲ್ಲಿರುವ ರಾಜ್ಯದ ಒಕ್ಕಲಿಗರ ಸರ್ವತೋಮುಖ ಅಭಿವೃದ್ಧಿಗಾಗಿ ಕರ್ನಾಟಕ ರಾಜ್ಯ ಒಕ್ಕಲಿಗರ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಬೇಕು ಎಂದು ಆದಿಚುಂಚನಗಿರಿ ಮಠಾಧ್ಯಕ್ಷರಾದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಈ ಕುರಿತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಅವರು, ಒಕ್ಕಲಿಗ ಸಮುದಾಯಕ್ಕೆ ಪ್ರವರ್ಗ 3ಎ ಅಡಿ ಮೀಸಲಾತಿ ಪ್ರಮಾಣವನ್ನು ಶೇಕಡಾ 10ಕ್ಕೆ ಹೆಚ್ಚಳ ಮಾಡಬೇಕು ಎಂದೂ ಆಗ್ರಹಿಸಿದ್ದಾರೆ. ಈ ಎರಡೂ ವಿಷಯಗಳಿಗೆ ಸಂಬಂಧಿಸಿದ ಪ್ರತ್ಯೇಕ ಮನವಿಪತ್ರಗಳ ಪ್ರತಿಗಳನ್ನು ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಮತ್ತು ಶ್ರೀ ನಂಜಾವಧೂತ ಸ್ವಾಮೀಜಿಯವರು ಉಪಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ, ಸಚಿವ ಆರ್. ಅಶೋಕ್ ಮತ್ತು ಸಚಿವ ಕೆ.ಸಿ. ನಾರಾಯಣಗೌಡ ಅವರಿಗೆ ಸೋಮವಾರ ಹಸ್ತಾಂತರಿಸಿದರು.

‘‘ರಾಜ್ಯದ ಜಾತಿ ಗಣತಿ ಪ್ರಕಾರ ಒಕ್ಕಲಿಗ ಸಮುದಾಯ ಎರಡನೇ ಸ್ಥಾನದಲ್ಲಿದೆ. ಕೆಳಹಂತದಿಂದ ಪ್ರಧಾನಿ ಹುದ್ದೆಯವರೆಗೂ ಹಲವು ಮಹತ್ವದ ಜವಾಬ್ದಾರಿಗಳನ್ನು ನಮ್ಮ ಸಮುದಾಯದವರು ನಿರ್ವಹಿಸಿದ್ದಾರೆ. ಈಗಲೂ ಎಲ್ಲ ರಂಗಗಳಲ್ಲಿ ಅನೇಕ ಹೊಣೆಗಾರಿಕೆಗಳನ್ನು ನಿರ್ವಹಿಸುತ್ತಿದ್ದಾರೆ. ಆದರೂ ಜನಾಂಗದ ಬಹುತೇಕ ಜನರು ಕೃಷಿಯನ್ನೇ ನಂಬಿದ್ದಾರೆ. ರಾಜ್ಯದ ಬೊಕ್ಕಸಕ್ಕೆ ಶೇಕಡಾ 65ರಷ್ಟು ಆದಾಯವನ್ನು ತಂದುಕೊಡುತ್ತಿದ್ದರೂ, ಒಟ್ಟು ಜನಸಂಖ್ಯೆಯ ಶೇಕಡಾ 16ರಷ್ಟು ಇದ್ದರೂ ಇನ್ನೂ ಆರ್ಥಿಕವಾಗಿ ಹಿಂದುಳಿದಿದ್ದಾರೆ. ಸಂಕಷ್ಟದಲ್ಲಿಯೇ ಜೀವನ ಸಾಗಿಸುತ್ತಿದ್ದಾರೆ’’ ಎಂದು ಶ್ರೀಗಳು ಪತ್ರದಲ್ಲಿ ವಿವರಿಸಿದ್ದಾರೆ.

‘‘ಈ ಎಲ್ಲ ಕಷ್ಟಕಾರ್ಪಣ್ಯಗಳು ದೂರವಾಗಬೇಕಿದ್ದರೆ ಈಗಿರುವ ಮೀಸಲಾತಿಯ ಪ್ರಮಾಣ ಹೆಚ್ಚಳವಾಗಬೇಕಾಗಿದೆ. ಜೊತೆಗೆ ತ್ವರಿತವಾಗಿ ಒಕ್ಕಲಿಗರ ಅಭಿವೃದ್ಧಿ ಪ್ರಾಧಿಕಾರ ರಚನೆಯಾಗಬೇಕಾಗಿದೆ. ಸಮುದಾಯದ ಎಲ್ಲ 115 ಉಪಜಾತಿಗಳನ್ನು ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸಿಲ್ಲ. ಹೀಗಾಗಿ ಹಲವು ಉಪಜಾತಿಗಳು ಸವಲತ್ತುಗಳಿಂದ ವಂಚಿತವಾಗಿವೆ. ಅವುಗಳನ್ನೆಲ್ಲ ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸಬೇಕು. ನಗರ ಪ್ರದೇಶದಲ್ಲಿರುವ, ಆರ್ಥಿಕ ಸಂಕಷ್ಟದಲ್ಲಿರುವ ಒಕ್ಕಲಿಗರನ್ನು ಮೀಸಲಾತಿಗೆ ಒಳಪಡಿಸಬೇಕು. ಮೀಸಲಾತಿ ಕೊಡುವಾಗ ಗ್ರಾಮೀಣ ಮತ್ತು ನಗರ ವಾಸಿಗಳೆಂಬ ಭೇದ ಮಾಡಬಾರದು’’ ಎಂದು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net