

ಅರಸೀಕೆರೆ: ವಿಧಾನ ಪರಿಷತ್ತಿಗೆ ನಡೆಯುವ ನಾಮ ನಿರ್ದೇಶನ ವಿಷಯದಲ್ಲಿ ಪಕ್ಷದ ವರಿಷ್ಠರು ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧನಿದ್ದೇನೆ ಎಂದು ಮಾಜಿ ಸಚಿವ ಬಿ.ಶಿವರಾಮು ಹೇಳಿದರು.
ಅಮ್ಮನಹಟ್ಟಿ ಗ್ರಾಮದ ಶ್ರೀ ಗಂಗಾಮಾಳಿಕಾ ದೇವಿಯ ಜಾತ್ರೆಗೆ ತೆರಳುವ ಮುನ್ನ ಸೋಮವಾರ ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ದಶಕಗಳಿಂದ ಜಿಲ್ಲೆಯಲ್ಲಿ ಪಕ್ಷ ಸಂಘಟನೆ ಮಾಡಿಕೊಂಡು ಬಂದಿದ್ದೇನೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋಲು ಕಂಡಿದ್ದು, ಪರಿಷತ್ತಿನ ಆಯ್ಕೆ ನಿರೀಕ್ಷೆ ಇಟ್ಟುಕೊಂಡಿಲ್ಲ. ಮೇಲ್ಮನೆ ಸದಸ್ಯರನ್ನಾಗಿ ಯಾರನ್ನು ಆಯ್ಕೆ ಮಾಡಬೇಕೆನ್ನುವ ನಿರ್ಧಾರ ವರಿಷ್ಠರು ಹಾಗೂ ಹೈಕಮಾಂಡ್ ತೆಗೆದುಕೊಳ್ಳಲಿದೆ. ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ನಮ್ಮ ನಾಯಕರು ವಿಧಾನ ಪರಿಷತ್ ಸದಸ್ಯರಾಗಿ ಮಂತ್ರಿ ಸ್ಥಾನ ಪಡೆಯಲಿ ಎಂದು ಬಯಸುತ್ತಾರೆ. ಆದರೆ ಪಕ್ಷದ ತೀರ್ಮಾನ ಅಂತಿಮ ಎಂದು ಹೇಳಿದರು.
ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಕ್ಷೇತ್ರಗಳ ಮೀಸಲಾತಿ ಪಟ್ಟಿ ಅಂತಿಮವಾದ ನಂತರವೇ ಚುನಾವಣೆ ನಡೆಯುವ ಸಾಧ್ಯತೆಗಳಿವೆ. ಅಧಿಕಾರ ವಿಕೇಂದ್ರೀಕರಣ ವ್ಯವಸ್ಥೆ ಅಡಿಯಲ್ಲಿ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಅವಕಾಶ ದೊರೆಯಬೇಕು. ಗ್ಯಾರಂಟಿ ಅನುಷ್ಠಾನ ಸಮಿತಿ ತಮಗಿರುವ ಅಧಿಕಾರ ಬಳಸಿ ಸರ್ಕಾರದ ಸವಲತ್ತುಗಳನ್ನು ಫಲಾನುಭವಿಗಳಿಗೆ ತಲುಪಿಸುವ ಕೆಲಸ ಮಾಡಿದರೆ ರಾಜಕೀಯದಲ್ಲಿ ದೊಡ್ಡ ಶಕ್ತಿಯಾಗಿ ಬೆಳೆಯಬಹುದು. ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷರ ಆಯ್ಕೆ ಯಾವ ಕಾರಣಕ್ಕೆ ತಡೆ ಹಿಡಿಯಲಾಗಿದೆ ಗೊತ್ತಿಲ್ಲ ಎಂದರು.
ಎನ್.ಆರ್. ಸಂತೋಷ್ ಭೇಟಿ: ಪ್ರವಾಸಿ ಮಂದಿರದಲ್ಲಿ ವಿಶ್ರಾಂತಿ ಪಡೆಯಲು ಬಂದಿದ್ದ ಮಾಜಿ ಸಚಿವ ಬಿ.ಶಿವರಾಮು ಅವರನ್ನು ಜೆಡಿಎಸ್ ಮುಖಂಡ ಎನ್. ಆರ್. ಸಂತೋಷ್ ಭೇಟಿಯಾಗಿ ಕೆಲ ಕಾಲ ಮಾತುಕತೆ ನಡೆಸಿದರು. ಉಭಯ ಮುಖಂಡರು ಮಾತನಾಡುತ್ತಿದ್ದ ವೇಳೆ ಗೃಹಮಂಡಳಿ ಅಧ್ಯಕ್ಷ, ಶಾಸಕ ಕೆ.ಎಂ.ಶಿವಲಿಂಗೇಗೌಡ ಇನ್ನೊಂದು ಕೊಠಡಿಗೆ ತೆರಳಿದರು. ಬಿ.ಶಿವರಾಮು ಹಾಗೂ ಎನ್.ಆರ್.ಸಂತೋಷ್ ಒಂದೇ ಕಾರಿನಲ್ಲಿ ಅಮ್ಮನಹಟ್ಟಿ ಗ್ರಾಮಕ್ಕೆ ತೆರಳಿದರು. ಯುಗಾದಿ ಮರುದಿನವೇ ಇಬ್ಬರು ನಾಯಕರ ಒಗ್ಗೂಡುವಿಕೆ ಚರ್ಚೆ ಜತೆಗೆ ಕುತೂಹಲ ಮೂಡಿಸಿದೆ. ಬೇಲೂರು ವಿಧಾನಸಭಾ ಕ್ಷೇತ್ರದ ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ದೇಶಾಣಿ ಆನಂದ್. ಹಂದ್ರಾಳು ಶ್ರೀನಿವಾಸ್, ಎ.ಬಿ.ಗುರುಸಿದ್ದೇಶ್, ಮಾದನಹಳ್ಳಿ ನಾಗರಾಜ್, ಹರ್ಷವರ್ಧನ್ ರಾಜ್, ಅರುಣ್ ಕುಮಾರ್, ಗಗನ್, ಲೋಕೇಶ್, ರಮೇಶ್, ಹುಲ್ಲೇನಹಳ್ಳಿ ರಘು, ಜಯದೇವ್, ಇತರರಿದ್ದರು.