

ಕಲಬುರಗಿ: ಜಿಲ್ಲೆಯ ಸಾರ್ವಜನಿಕರು ತಮ್ಮ ಆಧಾರ್ ಕಾರ್ಡ್ ನವೀಕರಣ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ತಿಳಿಸಿದ್ದಾರೆ.
ಹತ್ತು ವರ್ಷಗಳ ಹಿಂದೆ ಆಧಾರ್ ಕಾರ್ಡ್ ಪಡೆದು ಆ ವಿಳಾಸದಲ್ಲಿ ಈಗಲೂ ಮುಂದುವರಿದರೂ ಅಂತಹ ಕಾರ್ಡ್ಗಳು ನಿಷ್ಕ್ರೀಯವಾಗುತ್ತಿವೆ. ಕಾರ್ಡ್ ಪಡೆದು ೧೦ವರ್ಷ ಮೇಲ್ಪಟ್ಟ ಹಾಗೂ ಈವರೆಗೂ ಆಧಾರ್ ನವೀಕರಿಸದಿರುವವರು ತಮ್ಮ ವೈಯಕ್ತಿಕ ಗುರುತು ಹಾಗೂ ವಿಳಾಸದ ದಾಖಲೆಗಳೊಂದಿಗೆ ಹತ್ತಿರದ ಆಧಾರ್ ನೋಂದಣಿ ಕೇಂದ್ರದಲ್ಲಿಯ ಐಡಿಎಐ ಸಂಸ್ಥೆ ಅಭಿವೃದ್ಧಿಪಡಿಸಿರುವ ಹೊಸ ವಿಶಿಷ್ಠ ದಾಖಲಾತಿ ನವೀಕರಣ ತಂತ್ರಾಂಶದಲ್ಲಿ ನವೀಕರಣ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.
ಹೊಸದಾಗಿ ಆಧಾರ್ ನೋಂದಣಿ ಮತ್ತು ೫ ವರ್ಷ ಮೇಲ್ಪಟ್ಟು ೭ ವರ್ಷದೊಳಗಿನ ಎಲ್ಲ ಮಕ್ಕಳ ಬಯೋಮೆಟ್ರಿಕ್ ನವೀಕರಣ ಉಚಿತವಾಗಿದೆ. ಹೆಸರು, ಲಿಂಗ, ವಯಸ್ಸು, ವಿಳಾಸ ಹಾಗೂ ಮೊಬೈಲ್ ನಂಬರ್‌ಗಳ ವಿವರ (ಡೆಮೋಗ್ರಾಫಿಕ್) ನವೀಕರಣಕ್ಕೆ ೫೦ ರೂ. ಮತ್ತು ಕಣ್ಣು, ಮುಖ, ಕೈ ಬೆರಳುಗಳ ವಿವರ (ಡೆಮೋಗ್ರಾಫಿಕ್) ನವೀಕರಣಕ್ಕೆ ೧೦೦ ರೂ. ಸೇವಾ ಶುಲ್ಕ ಇದೆ ಎಂದು ಮಾಹಿತಿ ನೀಡಿದ್ದಾರೆ.