

ಕೋಟ: ಎಳವೆಯಲ್ಲಿ ಮಕ್ಕಳಿಗೆ ಸಮರ್ಪಕ ವೇದಿಕೆ ಕಲ್ಪಿಸಿಕೊಡಬೇಕು, ಮಕ್ಕಳ ಪ್ರಥಮ ಪ್ರತಿಭೆ ಅನಾವರಣಕ್ಕೆ ಕೃಷ್ಣ ವೇಷ ಸ್ಪರ್ಧೆಗಳೇ ಬುನಾದಿ ಎಂದು ಸಾಂಸ್ಕೃತಿಕ ಚಿಂತಕಿ ಗೀತಾ ಎ.ಕುಂದರ್ ಹೇಳಿದರು.
ಕೋಟದ ಡಾ.ಶಿವರಾಮ ಕಾರಂತ ಥೀಮ್ ಪಾರ್ಕ್‌ನಲ್ಲಿ ಡಾ.ಶಿವರಾಮ ಕಾರಂತ ಹುಟ್ಟೂರ ಪ್ರತಿಷ್ಠಾನ ಕೋಟ, ಡಾ.ಶಿವರಾಮ ಕಾರಂತ ಟ್ರಸ್ಟ್ ಉಡುಪಿ, ಕೋಟತಟ್ಟು ಗ್ರಾಪಂ ಕೋಟತಟ್ಟು ಮಹಿಳಾ ಮಂಡಲ ಕೋಟ, ರೋಟರಿ ಕ್ಲಬ್ ಹಂಗಾರಕಟ್ಟೆ - ಸಾಸ್ತಾನ ಸಹಯೋಗದಲ್ಲಿ ಕಾರಂತ ಹುಟ್ಟೂರ ಪುರಸ್ಕಾರದ ವಿಂಶತಿ ಅಂಗವಾಗಿ, ಕಾರಂತ ಜನ್ಮದಿನದಂದು ಮುದ್ದು ಕೃಷ್ಣ ವೇಷ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.
ಕಾರಂತ ಪ್ರತಿಷ್ಠಾನದ ಟ್ರಸ್ಟಿ ಸುಶೀಲಾ ಸೋಮಶೇಖರ್, ರೋಟರಿ ಕ್ಲಬ್ ಹಂಗಾರಕಟ್ಟೆ- ಸಾಸ್ತಾನದ ಅಧ್ಯಕ್ಷೆ ಲೀಲಾವತಿ ಗಂಗಾಧರ, ಸಾಂಸ್ಕೃತಿಕ ಚಿಂತಕ ವೆಂಕಟೇಶ್ ಭಟ್ ಉಪಸ್ಥಿತರಿದ್ದರು. ಪ್ರತಿಷ್ಠಾನ ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ ಪ್ರಸ್ತಾಪಿಸಿದರು. ಶಿಕ್ಷಕ ಸತೀಶ್ ವಡ್ಡರ್ಸೆ ಕಾರ್ಯಕ್ರಮ ನಿರೂಪಿಸಿದರು.