

ಹರಿಪ್ರಸಾದ್ ನಂದಳಿಕೆ ಕಾರ್ಕಳ
ನಾಲ್ಕು ತಿಂಗಳ ಹಿಂದೆ ಬೀಸಿದ ಜೋರು ಗಾಳಿ ಮಳೆಗೆ ಮರವೊಂದು ಅಂಗನವಾಡಿ ಮೇಲೆ ಬಿದ್ದಿದ್ದರಿಂದ ಕಟ್ಟಡವು ಬಹುತೇಕ ಹಾನಿಗೊಳಗಾಗಿದೆ. ಈ ಕಾರಣಕ್ಕಾಗಿ ಸ್ಥಳೀಯ ಕಟ್ಟಡವೊಂದರಲ್ಲಿ ಮಕ್ಕಳಿಗೆ ವಿದ್ಯಾರ್ಜನೆ ಮಾಡುವುದು ಅನಿವಾರ್ಯವಾಗಿದೆ.
ಕಾರ್ಕಳ ತಾಲೂಕಿನ ಕುಕ್ಕುಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಯ್ಯಪ್ಪ ನಗರದಲ್ಲಿ ಹಲವು ವರ್ಷಗಳ ಹಿಂದೆ ನಿರ್ಮಾಣಗೊಂಡಿದ್ದ ಅಂಗನವಾಡಿ ಕೇಂದ್ರ ದೊಡ್ಡ ಹಾನಿಗೊಳಗಾಗಿದ್ದರೂ ಅಧಿಕಾರಿಗಳು ಮಾತ್ರ ದುರಸ್ತಿಗೊಳಿಸುವ ಕುರಿತು ನೆಪ ಹೇಳುತ್ತಾ ಮುಂದೂಡುತ್ತಲೇ ಇದ್ದಾರೆ. ಇದಕ್ಕೆ ಗ್ರಾಮಸ್ಥರೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಟ್ಟಡ ದುರಸ್ತಿ ಕಾರ್ಯಕ್ಕೆ ಅಪಾರ ಮೊತ್ತದ ಅವಶ್ಯಕತೆಯಿದ್ದು, ಈಗಾಗಲೇ ಕುಕ್ಕುಂದೂರು ಗ್ರಾಪಂ ವತಿಯಿಂದ ನರೇಗಾ ಯೋಜನೆ ಮೂಲಕ 8 ಲಕ್ಷ ರೂ. ಹಾಗೂ ತಾಲೂಕು ಪಂಚಾಯಿತಿಯಿಂದ 10 ಲಕ್ಷ ರೂ. ಅನುದಾನ ಮಂಜೂರು ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದರೂ ಕಟ್ಟಡದ ದುರಸ್ತಿ ಕಾರ್ಯ ಮಾತ್ರ ಇನ್ನೂ ಆರಂಭಗೊಂಡಿಲ್ಲ.
ಅಂಗನವಾಡಿ ಪಕ್ಕದಲ್ಲೇ ಇದ್ದ ಬೃಹತ್ ಗಾತ್ರದ ಮರವೊಂದು ಬೀಳುವ ಸ್ಥಿತಿಯಲ್ಲಿದ್ದರೂ ತೆರವುಗೊಳಿಸಿರಲಿಲ್ಲ. ಜುಲೈನಲ್ಲಿ ಬೀಸಿದ ಭಾರೀ ಗಾಳಿ ಮಳೆಗೆ ಅಂಗನವಾಡಿ ಕೇಂದ್ರದ ಮೇಲೆಯೇ ಮರ ಉರುಳಿದ್ದು, ಆ ಸಂದರ್ಭ ಮಕ್ಕಳು ಕಟ್ಟಡದ ಒಳಗೆ ಇರದೇ ಇದ್ದಿದ್ದರಿಂದ ಅದೃಷ್ಟವಶಾತ್ ಭಾರಿ ಅನಾಹುತ ತಪ್ಪಿದೆ.
ಮಳೆಗಾಲದ ಸಂದರ್ಭ ಅಪಾಯಕಾರಿ ಮರ ತೆರವುಗೊಳಿಸಬೇಕಾಗಿತ್ತು. ಆದರೆ ದೇವರ ದಯೆಯಿಂದ ಯಾರು ಇಲ್ಲದ ಸಂದರ್ಭದಲ್ಲಿ ಮರ ಬಿದ್ದು ಕಟ್ಟಡಕ್ಕೆ ಹಾನಿಯಾಗಿದೆ. ಹಾನಿಯಾಗಿ ನಾಲ್ಕು ತಿಂಗಳು ಕಳೆದರೂ ಕಟ್ಟಡದ ದುರಸ್ತಿ ಕಾರ್ಯ ಮಾತ್ರ ಇನ್ನೂ ನಡೆದಿಲ್ಲ.-ಸುರೇಶ್, ಗ್ರಾಮಸ್ಥ
ಅಂಗನವಾಡಿ ಕೇಂದ್ರದ ಮಕ್ಕಳನ್ನು ತಾತ್ಕಾಲಿಕವಾಗಿ ಸ್ಥಳೀಯ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ. ಕಟ್ಟಡದ ಕಾಮಗಾರಿಗಾಗಿ ಈಗಾಗಲೇ ನರೇಗ ಯೋಜನೆಯಲ್ಲಿ 8ಲಕ್ಷ ಹಾಗೂ ತಾಪಂ ವತಿಯಿಂದ 10 ಲಕ್ಷ ರೂ ಅನುದಾನವನ್ನು ಮಂಜೂರು ಮಾಡಲಾಗಿದ್ದು, ನೀತಿ ಸಂಹಿತೆಯಿಂದ ಕಾಮಗಾರಿ ವಿಳಂಬವಾಗಿದೆ. ಚುನಾವಣೆ ಮುಗಿದ ಕೂಡಲೇ 18 ಲಕ್ಷ ರೂ. ವೆಚ್ಚದಲ್ಲಿ ಕಾಮಗಾರಿ ಆರಂಭವಾಗಲಿದೆ.-ಪ್ರದೀಪ್, ಕುಕ್ಕುಂದೂರು ಪಿಡಿಒ