

ಹೊಸಪೇಟೆ: ನಗರಕ್ಕೆ ಶುದ್ಧ ಹಾಗೂ ಸಮರ್ಪಕ ಕುಡಿವ ನೀರು ಸರಬರಾಜು ಮಾಡಬೇಕು. ಅದು ಸಾಧ್ಯವಾಗದಿದ್ದರೆ ನೌಕರಿ ತೊರೆಯಬೇಕು ಎಂದು ನಗರಸಭೆ ಸಿಬ್ಬಂದಿಗೆ ಪೌರಾಯುಕ್ತ ಮನೋಹರ್ ಕಟ್ಟುನಿಟ್ಟಿನ ಸೂಚನೆ ನೀಡಿದರು.
ನಗರಸಭೆ ಸಭಾಂಗಣದಲ್ಲಿ ಗುರುವಾರ ಅಧ್ಯಕ್ಷೆ ಸುಂಕಮ್ಮ ಅಧ್ಯಕ್ಷತೆಯಲ್ಲಿ ಏರ್ಪಡಿಸಿದ್ದ ವಿಶೇಷ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು. ಕಾಯಂ ನೌಕರರಿದ್ದರೆ ಸೇವೆಯಿಂದ ಅಮಾನತುಗೊಳಿಸಲಾಗುವುದು. ತಾತ್ಕಾಲಿಕವಾಗಿದ್ದರೆ ಸೇವೆಯಿಂದ ಕೈಬಿಡಲಾಗುವುದು. ನೌಕರಿಯಲ್ಲಿ ಮುಂದುವರಿಯುವ ಇಚ್ಛೆಯಿದ್ದರೆ ಪ್ರತಿನಿತ್ಯ ಫೀಲ್ಡ್‌ಗೆ ಹೋಗಿ ಜನರ ಸಮಸ್ಯೆ ಪರಿಹರಿಸಬೇಕು ಎಂದು ಆದೇಶಿಸಿದರು.
ಇದನ್ನೂ ಓದಿ: ಕುಡಿವ ನೀರು, ಒಳಚರಂಡಿ ದೊಡ್ಡ ಸಮಸ್ಯೆ
ಇದಕ್ಕೂ ಮುನ್ನ ಜಲ ಸಮಸ್ಯೆ ಕುರಿತು ಪ್ರಸ್ತಾಪಿಸಿದ ಗುಜ್ಜಲ ರಾಘವೇಂದ್ರ, ಮುನ್ನಿ, ಕೆ.ಗೌಸ್, ರೂಪೇಶ್ ಕುಮಾರ್, ಕಮಲಾ ಸೇರಿ ಮತ್ತಿತರರು, ನಗರಸಭೆ ಸಿಬ್ಬಂದಿ ವಿರುದ್ಧ ಹರಿಹಾಯ್ದರು. ಬೆಳಗಾಗುತ್ತಿದ್ದಂತೆ ವಾರ್ಡ್‌ನ ಜನರು ಫೋನ್ ಮಾಡಿ, ಕುಡಿವ ನೀರಿನ ಸಮಸ್ಯೆ ಕುರಿತು ದೂರು ನೀಡುತ್ತಾರೆ.
ಸಮಸ್ಯೆ ಪರಿಹಾರಕ್ಕಾಗಿ ಕುಡಿವ ನೀರಿನ ವಿಭಾಗದ ಇಂಜಿನಿಯರ್‌ಗಳಿಗೆ ಕರೆ ಮಾಡಿದರೆ, ಫೋನ್ ಸ್ವೀಕರಿಸಲ್ಲ. ಸಮಸ್ಯೆ ಕುರಿತು ಮಾಹಿತಿ ನೀಡಿದರೂ, ಸ್ಪಂದಿಸುತ್ತಿಲ್ಲ. ನಮ್ಮನ್ನು ಆಯ್ಕೆ ಮಾಡಿದ ಜನತೆಗೆ ಮುಖ ತೋರಿಸಲಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಎಚ್.ಮುನ್ನಿ ಮಾತನಾಡಿ, ಸಿದ್ದಲಿಂಗಪ್ಪ ಚೌಕಿಯಲ್ಲಿ ಕಲುಷಿತ ನೀರು ಪೂರೈಕೆಯಾಗುತ್ತಿದೆ. ಸಂಬಂಧಿಸಿದ ಇಂಜಿನಿಯರ್‌ಗೆ ಮಾಹಿತಿ ನೀಡಿದರೆ, ಸ್ಥಳಕ್ಕೆ ಭೇಟಿ ನೀಡುತ್ತಿಲ್ಲ. ಈ ಭಾಗದ ಜನರಿಗೆ ಟ್ಯಾಂಕರ್ ನೀರೇ ಗತಿ ಎನ್ನುವಂತಾಗಿದೆ ಎಂದು ಸಿಬ್ಬಂದಿ ವಿರುದ್ಧ ಕಿಡಿಕಾರಿದರು.
ನಗರಸಭೆ ಉಪಾಧ್ಯಕ್ಷ ಎಲ್.ಎಸ್.ಆನಂದ, ಎಂ.ಮುಮ್ತಾಜ್ ಬೇಗಂ, ಹುಲುಗಪ್ಪ ವಡ್ರು, ಕನಕಮ್ಮ ವಿ., ಜಿ.ಎಸ್.ಹನುಮಂತಪ್ಪ, ಸಂತೋಷ ಕುಮಾರ್, ಕೆ.ಮಹೇಶ ಕುಮಾರ್, ಶೇಕ್ಷಾವಲಿ ಇತರರಿದ್ದರು.
ಮುಖ್ಯಮಂತ್ರಿ ನಗರೋತ್ಥಾನ ಯೋಜನೆಯಡಿ ನಗರದ ಅಂಗವಿಕಲರಿಗೆ 20 ಲಕ್ಷ ರೂ. ಮೊತ್ತದಲ್ಲಿ ಯಂತ್ರಚಾಲಿತ ವಾಹನ ಒದಗಿಸಲು, 10 ಲಕ್ಷ ರೂ. ವೆಚ್ಚದಲ್ಲಿ ಬುದ್ಧಿಮಾಂದ್ಯ ಮಕ್ಕಳಿಗೆ ಕಲಿಕಾ ಸಾಮಗ್ರಿ ಖರೀದಿಗಾಗಿ ವಾಸ್ತವಿಕ ವೆಚ್ಚ ಭರಿಸುವುದು, 50.59 ಲಕ್ಷ ರೂ. ಮೊತ್ತದಲ್ಲಿ ಎಸ್ಸಿ ಮತ್ತು 25.62 ಲಕ್ಷ ರೂ. ಮೊತ್ತದಲ್ಲಿ ಎಸ್ಟಿ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಧನ ಸಹಾಯ ಒದಗಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಮುಖ್ಯಮಂತ್ರಿ ನಗರೋತ್ಥಾನ ಯೋಜನೆಯಡಿ ದ್ವಾರಕಾ ನಗರದ ಖಾಸಗಿ ಲೇಔಟ್‌ನಲ್ಲಿ ಒಎಚ್‌ಟಿ ನಿರ್ಮಿಸುವ ಬಗ್ಗೆ ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರ ನಡುವೆ ವಾಗ್ವಾದ ನಡೆಯಿತು. ದ್ವಾರಕಾ ನಗರದಲ್ಲಿ ಓವರ್ ಹೆಡ್ ಟ್ಯಾಂಕ್ ನಿರ್ಮಾಣದಿಂದ ಎಸಿಯಲ್ಲಿ ಮಲಗುವವರಿಗೆ ಅನುಕೂಲವಾಗುತ್ತದೆ.
ಅದಕ್ಕಿಂತ ಸ್ಲಂಗಳಲ್ಲಿ ನಿರ್ಮಿಸಿದರೆ, ಬಡವರಿಗೆ ಅನುಕೂಲವಾಗುತ್ತದೆ ಎಂಬ ಅಬ್ದುಲ್ ಖದೀರ್ ಹೇಳಿಕೆಗೆ ಬಿಜೆಪಿಯ ರೂಪೇಶ, ಜೀವರತ್ನ, ಜಂಬುನಾಥ ತಾರೀಹಳ್ಳಿ ಆಕ್ಷೇಪಿಸಿದರು. ದ್ವಾರಕಾ ನಗರದಲ್ಲಿ ಓವರ್ ಹೆಡ್ ಟ್ಯಾಂಕ್ ನಿರ್ಮಾಣಕ್ಕೆ ಜಾಗ ಲಭ್ಯವಿದೆ. ಇದರಿಂದ 88 ಮುದ್ಲಾಪುರ, ರಾಣಿ ಪೇಟೆ, ಚಾಪಲಗಟ್ಟ ಮತ್ತು ಹಂಪಿ ರಸ್ತೆಯ ಸ್ಲಂಗಳಿಗೆ ಅನುಕೂಲವಾಗುತ್ತದೆ ಎಂದು ಸಮರ್ಥಿಸಿಕೊಂಡರು.
ಇಲ್ಲಿನ 35ನೇ ವಾರ್ಡ್‌ನಲ್ಲಿ ಎನ್‌ಎ ಮಾಡದೇ ಅಸೆಸಮೆಂಟ್ ಡೋರ್ ನಂಬರ್ ಹಾಕಿದ ಸೈಟ್‌ಗಳಲ್ಲಿ 300ಕ್ಕೂ ಹೆಚ್ಚು ಮನೆಗಳಾಗಿವೆ. ಅಗತ್ಯ ಸೌಕರ್ಯಗಳನ್ನು ಹೊಂದಿದ್ದು, ಸ್ಥಳೀಯರಿಗೆ ಫಾರ್ಮ್ ನಂ.3 ಒದಗಿಸುವ ಕುರಿತ ವಿಷಯಕ್ಕೆ ಅನೇಕ ಸದಸ್ಯರು ಆಕ್ಷೇಪಿಸಿದರು.
ಅಲ್ಲದೇ, ನಗರದ ಇತರ ವಾರ್ಡ್‌ಗಳಲ್ಲೂ ಅಂತಹ ಲೇಔಟ್‌ಗಳಿವೆ. ಎಲ್ಲ ವಾರ್ಡ್‌ಗಳ ಅಕ್ರಮ ಲೇಔಟ್‌ಗಳನ್ನು ಸೇರಿಸಿ, ಸಕ್ರಮಗೊಳಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಗೆ ನಿರ್ಣಯಿಸಲಾಯಿತು.
ಹೊಸಪೇಟೆ: ವಿಜಯನಗರ ಕ್ಷೇತ್ರಕ್ಕೆ ಹೊಸ ಶಾಸಕರ ಆಯ್ಕೆಯಿಂದ ನಗರಸಭೆಯ ಅಧಿಕಾರವೂ ಬದಲಾಗುತ್ತದೆ ಎಂಬುದು ಗಾಳಿ ಸುದ್ದಿ. ಅಂತಹ ಯಾವುದೇ ಬೆಳವಣಿಗೆಗಳು ನಡೆದಿಲ್ಲ ಎಂದು ನಗರಸಭೆ ಅಧ್ಯಕ್ಷೆ ಸುಂಕಮ್ಮ ಹಾಗೂ ಉಪಾಧ್ಯಕ್ಷ ಎಲ್.ಎಸ್.ಆನಂದ ತಿಳಿಸಿದರು.
ಸಾಮಾನ್ಯ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರಸಭೆಯಲ್ಲಿ ಪಕ್ಷೇತರರ ಸೇರ್ಪಡೆಯಿಂದ ಬಿಜೆಪಿ ಸ್ಪಷ್ಟ ಬಹುಮತ ಹೊಂದಿದೆ. ಆಡಳಿತ ಮತ್ತು ವಿರೋಧ ಪಕ್ಷವೆಂಬ ಭೇದವಿಲ್ಲದೇ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು, ಅವರ ಸಲಹೆಯಂತೆ ನಗರದ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇವೆ.
ನಮ್ಮ ಅಧಿಕಾರಾವಧಿ ಮುಕ್ತಾಯಗೊಳ್ಳುವವರೆಗೆ ಬದಲಾವಣೆ ಚಿಂತನೆ ಪಕ್ಷದ ವರಿಷ್ಠರ ಹಂತದಲ್ಲೂ ಇಲ್ಲ. ನಮ್ಮ ಅವಧಿ ಮುಕ್ತಾಯಗೊಳ್ಳುತ್ತಿದ್ದಂತೆ ಸಾಮಾನ್ಯ ಸದಸ್ಯರಾಗಿ ಮುಂದುವರಿಯುತ್ತೇವೆ ಎಂದು ಹೇಳಿದರು.