ಪೌರ ಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸಿ : ಸಫಾಯಿ ಕರ್ಮಚಾರಿ ಆಯೋಗ ನಿರ್ದೇಶನ

ಮೈಸೂರಿನಲ್ಲಿ ಪೌರ ಕಾರ್ಮಿಕರ ಸಮಸ್ಯೆ ಆಲಿಸಿದ ಸಫಾಯಿ ಕರ್ಮಚಾರಿ ಆಯೋಗ
ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಸದಸ್ಯ ಸಿ. ಶಂಕರ ಅಂಕನಶೆಟ್ಟಿಪುರ ಸೋಮವಾರ ಮೈಸೂರು ನಗರ ಪಾಲಿಕೆಯ ಪೌರ ಕಾರ್ಮಿಕರ ಸಮಸ್ಯೆ ಆಲಿಸಿದರು. ನಗರ ಪಾಲಿಕೆ ಆಯುಕ್ತೆ ಎಂ.ಕೆ. ಸವಿತಾ ಇದ್ದರು.
ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಸದಸ್ಯ ಸಿ. ಶಂಕರ ಅಂಕನಶೆಟ್ಟಿಪುರ ಸೋಮವಾರ ಮೈಸೂರು ನಗರ ಪಾಲಿಕೆಯ ಪೌರ ಕಾರ್ಮಿಕರ ಸಮಸ್ಯೆ ಆಲಿಸಿದರು. ನಗರ ಪಾಲಿಕೆ ಆಯುಕ್ತೆ ಎಂ.ಕೆ. ಸವಿತಾ ಇದ್ದರು.
Published on

ಮೈಸೂರು: ಪೌರ ಕಾರ್ಮಿಕರ ಸಮಸ್ಯೆಗಳಿಗೆ ಅಧಿಕಾರಿಗಳು ತಕ್ಷಣ ಸ್ಪಂದಿಸಬೇಕು, ಯಾವುದೇ ಕಾರಣಕ್ಕೂ ವಿಳಂಬ ಮಾಡಬಾರದು. ಸರ್ಕಾರದ ಹಂತದಲ್ಲಿ ಬಗೆಹರಿಯಬೇಕಾಗಿರುವ ಸಮಸ್ಯೆಗಳ ಕುರಿತು ಕೂಡಲೇ ಪ್ರಸ್ತಾವನೆ ಸಲ್ಲಿಸಿ ಎಂದು ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಸದಸ್ಯ ಸಿ. ಶಂಕರ ಅಂಕನಶೆಟ್ಟಿಪುರ ನಗರ ಪಾಲಿಕೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ನಗರ ಪಾಲಿಕೆ ಸಭಾಂಗಣದಲ್ಲಿ ಸೋಮವಾರ ಪೌರ ಕಾರ್ಮಿಕರ ಸಮಸ್ಯೆ ಆಲಿಸಲು ಅಯೋಜಿಸಿದ್ದ ಸಭೆಯಲ್ಲಿ ಅವರು ಪೌರ ಕಾರ್ಮಿಕರ ಸಮಸ್ಯೆ ಆಲಿಸಿ ಮಾತನಾಡಿದರು. ನಗರದಲ್ಲಿ ಖಾಯಂ ಪೌರ ಕಾರ್ಮಿಕರಿಗೆ ಮಾತ್ರ ಎಲ್ಲ ಸೌಲಭ್ಯಗಳು ದೊರೆಯುತ್ತಿದ್ದು, ನಮಗೆ ಆರೋಗ್ಯ ತಪಾಸಣೆ, ನಮ್ಮ ಮಕ್ಕಳಿಗೆ ಪ್ರೋತ್ಸಾಹ ಧನ ಸೇರಿದಂತೆ ಯಾವುದೇ ಸೌಲಭ್ಯಗಳು ದೊರೆಯುತ್ತಿಲ್ಲ ಎಂದು ನೇರ ಪಾವತಿ ಪೌರ ಕಾರ್ಮಿಕರು, ಸ್ವಚ್ಛತಾ ವಾಹನ ಚಾಲಕರು, ಲೋಡರ್, ಕ್ಲೀನರ್, ಒಳಚರಂಡಿ ಕಾರ್ಮಿಕರು ಅಳಲು ತೋಡಿಕೊಂಡಾಗ, ಇವರ ಸಮಸ್ಯೆಗಳಿಗೆ ಸ್ಪಂದಿಸುವಂತೆ ಸಿ. ಶಂಕರ ಅಂಕನಶೆಟ್ಟಿಪುರ ನಿರ್ದೇಶನ ನೀಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ನಗರ ಪಾಲಿಕೆ ಆಯುಕ್ತೆ ಎಂ.ಕೆ. ಸವಿತಾ, ಈಗಾಗಲೇ 800 ಪೌರ ಕಾರ್ಮಿಕರಿಗೆ ಆರೋಗ್ಯ ತಪಾಸಣೆ ನಡೆಸ ಲಾಗಿದ್ದು, ಹಂತ ಹಂತವಾಗಿ ಎಲ್ಲ ಪೌರ ಕಾರ್ಮಿಕರು, ಸ್ವಚ್ಛತಾ ಕಾರ್ಮಿಕರ ಆರೋಗ್ಯ ತಪಾಸಣೆ ನಡೆಸಲಾಗುವುದು. ಅಲ್ಲದೆ, ಪೌರ ಕಾರ್ಮಿಕರು, ಸ್ವಚ್ಛತಾ ಕಾರ್ಮಿಕರಿಗೆ ಕಾನೂನು ಬದ್ಧವಾಗಿ ದೊರೆಯಬೇಕಾಗಿರುವ ಎಲ್ಲ ಸೌಲಭ್ಯಗಳನ್ನು ಒದಗಿಸಲು ಕ್ರಮ ವಹಿಸಲಾಗುವುದು ಎಂದರು.

ಸಿ. ಶಂಕರ ಅಂಕನಶೆಟ್ಟಿಪುರ ಮಾತನಾಡಿ, ನೇರ ಪಾವತಿ ಪೌರ ಕಾರ್ಮಿಕರು, ಸ್ವಚ್ಛತಾ ವಾಹನ ಚಾಲಕರು, ಒಳಚರಂಡಿ ಕಾರ್ಮಿಕರು ಸಹ ನಗರದ ಸ್ವಚ್ಛತೆ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಇವರಿಗೆ ನೀಡುತ್ತಿರುವ ವೇತನ ಹಾಗೂ ಸೌಲಭ್ಯಗಳು ಕಡಿಮೆ ಇದ್ದು, ಈ ಕುರಿತು ಸರ್ಕಾರದ ಗಮನ ಸೆಳೆಯಲಾಗುವುದು ಎಂದರು.

ಖಾಯಂ ಪೌರಕಾರ್ಮಿಕರಿಗೆ ಈಗಾಗಲೇ ಗೃಹ ಭಾಗ್ಯ ಯೋಜನೆಯಡಿ ನಿವೇಶನ ಹಾಗೂ ಮನೆ ಒದಗಿಸುವ ಕೆಲಸವಾಗುತ್ತಿದೆ. ನೇರ ಪಾವತಿ, ಒಳಚರಂಡಿ ಪೌರಕಾರ್ಮಿಕರು, ಲೋಡರ್, ಕ್ಲೀನರ್ ಹಾಗೂ ವಾಹನ ಚಾಲಕರಿಗೂ ಮನೆ ನಿರ್ಮಾಣಕ್ಕಾಗಿ ರಾಜೀವ್ ಗಾಂಧಿ ವಸತಿ ನಿಗಮ ಅಥವಾ ಸರ್ಕಾರದ ಇತರ ವಸತಿ ಯೋಜನೆಗಳ ಅಡಿಯಲ್ಲಿ ವಿಶೇಷ ಅನುದಾನ ಹಾಗೂ ಮನೆ ಮಂಜೂರಾತಿ ಕಲ್ಪಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಿದರು.

ಪೌರಕಾರ್ಮಿಕರ ಮಕ್ಕಳು ಪೌರಕಾರ್ಮಿಕರಾಗಬೇಕು ಎಂಬ ಧೋರಣೆ ಯನ್ನು ತೊರೆಯಬೇಕು. ಪೌರಕಾರ್ಮಿಕರು, ಒಳಚರಂಡಿ, ವಾಹನ ಚಾಲಕರು ಹಾಗೂ ಸಹಾಯಕರು ಇವರ ಮಕ್ಕಳು ವಿದ್ಯಾಭ್ಯಾಸದ ಮಾಹಿತಿಯನ್ನು ಪರಿಸರ ಅಭಿಯಂತರರಿಂದ ಸಂಗ್ರಹಿಸಿ ವಿದ್ಯಾರ್ಥಿಗಳು ಉನ್ನತ ವಿದ್ಯಾಭ್ಯಾಸ ಮಾಡುವಂತೆ ಪ್ರೇರೇಪಿಸಬೇಕು. ಅವರಿಗೆ ನಗರ ಪಾಲಿಕೆಯ ಶೇ 24.10, ಸಮಾಜ ಕಲ್ಯಾಣ ಸೇರಿದಂತೆ ಇನ್ನಿತರೆ ಇಲಾಖೆಯಿಂದ ದೊರಕುವ ಸೌಲಭ್ಯವನ್ನು ಒದಗಿಸಿ ಪೌರಕಾರ್ಮಿಕರ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಬೇಕು ಎಂದು ಸಲಹೆ ನೀಡಿದರು.

ನಗರ ಪಾಲಿಕೆ ಆಯುಕ್ತೆ ಎಂ.ಕೆ.ಸವಿತಾ ಮಾತನಾಡಿ, ಪೌರ ಕಾರ್ಮಿಕರು ತಮ್ಮ ಕುಂದುಕೊರತೆಗಳನ್ನು ಮುಕ್ತವಾಗಿ ಹಂಚಿಕೊಳ್ಳಲು ‘:ಸಿಂಗಲ್ ವಿಂಡೋ’ ವ್ಯವಸ್ಥೆ ಮಾಡಲಾಗಿದೆ. ಪ್ರಥಮ ಹಂತದಲ್ಲಿ ಪರಿಸರ ಇಂಜಿನಿಯರ್ ಹಾಗೂ ಹೆಲ್ತ್ ಇನ್‌ಸ್ಪೆಕ್ಟರ್‌ಗಳಿಗೆ ದೂರು ನೀಡಬಹುದು. ಅಲ್ಲಿ ಬಗೆಹರಿಯದಿದ್ದರೆ ಹೆಚ್ಚುವರಿ ಆಯುಕ್ತರ ಹಂತದಲ್ಲಿ ಪರಿಹರಿಸಲು ಅಧಿಕಾರ ವಿಕೇಂದ್ರೀಕರಣ ಮಾಡಲಾಗಿದೆ ಎಂದು ಹೇಳಿದರು.

ನಗರ ಪಾಲಿಕೆ ಪೌರ ಕಾರ್ಮಿಕರಿಗೆ ನೀಡುತ್ತಿರುವ ಉಪಹಾರ ಸೇವಿಸುವ ರೀತಿಯಲ್ಲಿ ಇರುವುದಿಲ್ಲ. ಹೀಗಾಗಿ ತಿಂಡಿಯ ಬದಲು ಹಣ ನೀಡುವಂತೆ ಪೌರ ಕಾರ್ಮಿಕರು ಒತ್ತಾಯಿಸಿದರು. ಈ ಕುರಿತು ಪ್ರತಿಕ್ರಿಯಿಸಿದ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಉಪ ನಿರ್ದೇಶಕ ಮಹದೇವಸ್ವಾಮಿ, ಪೌರ ಕಾರ್ಮಿಕರು ಹಸಿವಿನಲ್ಲಿ ಕೆಲಸ ಮಾಡಬಾರದು ಎಂಬ ಉದ್ದೇಶದಿಂದ ಉಪಹಾರ ನೀಡಲಾಗುತ್ತಿದೆ. ಒಂದುವೇಳೆ ಉಪಹಾರದ ಬದಲು ಹಣ ನೀಡಿದರೆ ಯಾರೂ ಸಹ ಆ ಹಣದಲ್ಲಿ ಉಪಹಾರ ಖರೀದಿಸಿ ಸೇವಿಸುವುದಿಲ್ಲ. ಹೀಗಾಗಿ ಉಪಹಾರದ ಗುಣಮಟ್ಟ ಸುಧಾರಿಸಲು ಪಾಲಿಕೆ ಕ್ರಮ ವಹಿಸಬೇಕೇ ಹೊರತು ಹಣ ನೀಡುವ ವ್ಯವಸ್ಥೆ ಜಾರಿಗೆ ತರಬಾರದು ಎಂದು ಸಲಹೆ ನೀಡಿದರು.

ಸಭೆಯಲ್ಲಿ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಉಪ ನಿರ್ದೇಶಕ ಮಹದೇವಸ್ವಾಮಿ, ಕಾರ್ಯದರ್ಶಿ ರಘು, ನಗರ ಪಾಲಿಕೆ ಹೆಚ್ಚುವರಿ ಆಯುಕ್ತೆ ವೀಣಾ ಹಾಗೂ ಇತರರು ಇದ್ದರು.

ಖಾಯಂಗೊಳಿಸಲು ಒತ್ತಾಯ

ನೇರ ಪಾವತಿ ಪೌರ ಕಾರ್ಮಿಕರು, ಸ್ವಚ್ಛತಾ ವಾಹನ ಚಾಲಕರು, ಒಳಚರಂಡಿ ಕಾರ್ಮಿಕರನ್ನು ಖಾಯಂಗೊಳಿಸಲು ಕ್ರಮ ಕೈಗೊಳ್ಳಬೇಕು. ನಮಗೆ ಕೇವಲ 15 ಸಾವಿರ ರೂ. ಮಾತ್ರ ವೇತನ ದೊರೆಯುತ್ತಿದ್ದು, ಇಷ್ಟು ಸಣ್ಣ ವೇತನದಲ್ಲಿ ನಾವು ಜೀವನ ನಡೆಸು ವುದು ಹೇಗೆ? 10-15 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವವರಿಗೂ 15 ಸಾವಿರ ರೂ. ಮಾತ್ರ ದೊರೆಯುತ್ತಿದೆ ಎಂದು ಖಾಯಂಗೊಳ್ಳದ ಪೌರ ಕಾರ್ಮಿಕರು ತಮ್ಮ ಅಳಲು ತೋಡಿಕೊಂಡಾಗ, ಸರ್ಕಾರದ ಗಮನ ಸೆಳೆಯಲಾಗುವುದು ಎಂದು ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಸದಸ್ಯ ಸಿ. ಶಂಕರ ಅಂಕನಶೆಟ್ಟಿಪುರ ಭರವಸೆ ನೀಡಿದರು.

ಜನರಲ್ಲಿ ಜಾಗೃತಿ ಮೂಡಿಸಿ

ಸಾರ್ವಜನಿಕರು ಕಸವನ್ನು ಪೌರಕಾರ್ಮಿಕರಿಗೆ ನೀಡುವ ಮೊದಲೇ ಹಸಿ ಮತ್ತು ಒಣ ಕಸವನ್ನು ಬೇರ್ಪಡಿಸುವ ನೀಡುವ ಬಗ್ಗೆ ಜಾಗೃತಿ ಮೂಡಿಸಬೇಕು. ತ್ಯಾಜ್ಯ ವಿಂಗಡಿಸಿ ನೀಡದೆ ಇರುವ ಹಿನ್ನೆಲೆಯಲ್ಲಿ ಪೌರ ಕಾರ್ಮಿಕರು ಸಮಸ್ಯೆ ಎದುರಿಸುತ್ತಿದ್ದು, ನಿಗದಿತ ಸಮಯದಲ್ಲಿ ಅವರ ಕೆಲಸ ಕಾರ್ಯಗಳು ಪೂರ್ಣವಾಗುತ್ತಿಲ್ಲ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಜನರಲ್ಲಿ ಜಾಗೃತಿ ಮೂಡಿಸುವ ಅವಶ್ಯಕತೆ ಇದೆ ಎಂದು ಸಿ. ಶಂಕರ ಅಂಕನಶೆಟ್ಟಿಪುರ ಅಭಿಪ್ರಾಯಪಟ್ಟರು.

ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಸದಸ್ಯ ಸಿ. ಶಂಕರ ಅಂಕನಶೆಟ್ಟಿಪುರ ಸೋಮವಾರ ಮೈಸೂರು ನಗರ ಪಾಲಿಕೆಯ ಪೌರ ಕಾರ್ಮಿಕರ ಸಮಸ್ಯೆ ಆಲಿಸಿದರು. ನಗರ ಪಾಲಿಕೆ ಆಯುಕ್ತೆ ಎಂ.ಕೆ. ಸವಿತಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net