

ಬೆಂಗಳೂರು: ಗೌರಿ-ಗಣೇಶ ಹಬ್ಬ ನಿಮಿತ್ತ ನಗರದಲ್ಲಿ ಸೋಮವಾರ ಮತ್ತು ಮಂಗಳವಾರ ಹಸಿ ಕಸ ಉತ್ಪಾದನೆಯಲ್ಲಿ ಅಂದಾಜು 500 ಟನ್ ತ್ಯಾಜ್ಯ ಹೆಚ್ಚಳವಾಗಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಪ್ರತಿದಿನ 5 ಸಾವಿರ ಟನ್ ಘನತ್ಯಾಜ್ಯ ಉತ್ಪಾದನೆಯಾಗುತ್ತದೆ. ಇದರಲ್ಲಿ 3,500 ಟನ್ಗೂ ಹೆಚ್ಚಿನ ಹಸಿ ಕಸ ಇರುತ್ತದೆ. ಹಬ್ಬ ಹಿನ್ನೆಲೆಯಲ್ಲಿ ಅಂದಾಜು 500 ಟನ್ಗೂ ಹೆಚ್ಚಿನ ಹಸಿ ತ್ಯಾಜ್ಯ (ಬಾಳೆ ಕಂದು, ಹೂವು, ಹಣ್ಣು, ಮಾವಿನ ತೋರಣ, ತರಕಾರಿಗಳು, ಸೊಪ್ಪು ಇತ್ಯಾದಿ) ಹೆಚ್ಚುವರಿಯಾಗಿ ಉತ್ಪಾದನೆಯಾಗಿದೆ. ಪ್ರಮುಖವಾಗಿ ಕೆ.ಆರ್.ಮಾರುಕಟ್ಟೆ, ಯಶವಂತಪುರ, ಮಲ್ಲೇಶ್ವರ, ಬಸವನಗುಡಿ, ಮಡಿವಾಳ ಸೇರಿ ವಿವಿಧ ಮಾರುಕಟ್ಟೆಗಳಲ್ಲಿ ತ್ಯಾಜ್ಯದ ಪ್ರಮಾಣ ಹೆಚ್ಚಾಗಿತ್ತು. ವ್ಯಾಪಾರಿಗಳು ಹೆಚ್ಚಿನ ಪ್ರಮಾಣದಲ್ಲಿ ತಂದಿದ್ದ ಬಾಳೆಕಂದು ಹಾಗೂ ಮಾವಿನ ತೊರಣಗಳು ಮಾರಾಟವಾಗದೆ ಕೆ.ಆರ್.ಮಾರುಕಟ್ಟೆ ಸೇರಿ ಇತರ ಕಡೆಗಳಲ್ಲಿ ರಾಶಿ ರಾಶಿಯಾಗಿ ಬಿದ್ದಿವೆ.
ಗಣೇಶ ಹಬ್ಬ ಹಲವು ದಿನಗಳವರೆಗೆ ನಡೆಯುತ್ತದೆ. ಈ ಹಿನ್ನೆಲೆಯಲ್ಲಿ ಇನ್ನೂ ಎರಡು ದಿನಗಳು ಹಸಿ ತ್ಯಾಜ್ಯ ಉತ್ಪಾದನೆ ಪ್ರಮಾಣದಲ್ಲಿ ಸಾಮಾನ್ಯ ದಿನಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಇನ್ನು ಕಳೆದೆರಡು ದಿನಗಳಿಂದ ನಗರದಲ್ಲಿ ಮಳೆಯ ಪ್ರಮಾಣ ಹೆಚ್ಚಿರುವ ಕಾರಣ ತ್ಯಾಜ್ಯ ಸಂಗ್ರಹದಲ್ಲೂ ವ್ಯತ್ಯಯವಾಗಿದೆ. ಮಾರುಕಟ್ಟೆ ಹಾಗೂ ಗಣೇಶ ಮೂರ್ತಿ ವಿಸರ್ಜಿಸುವ ಸ್ಥಳಗಳಲ್ಲಿ ತ್ಯಾಜ್ಯ ಸಂಗ್ರಹದಲ್ಲಿ ತೊಡಕಾಗಿತ್ತು. ತ್ಯಾಜ್ಯ ನಿರ್ವಹಣೆ ಗುತ್ತಿಗೆದಾರರ ಬಳಿ ಕೆಲಸ ಮಾಡುವ ಪೌರಕಾರ್ಮಿಕರಲ್ಲಿ ಬಹುತೇಕರು ಹಬ್ಬಕ್ಕೆ ರಜೆಯಲ್ಲಿದ್ದರು. ಹೀಗಾಗಿ,ಮಂಗಳವಾರ ಸಮರ್ಪಕವಾಗಿ ತ್ಯಾಜ್ಯ ಸಂಗ್ರಹ ಮತ್ತು ವಿಲೇವಾರಿಯಾಗಿಲ್ಲ.
ಕೆರೆಗಳಲ್ಲೂ ತ್ಯಾಜ್ಯ:
ಪಾಲಿಕೆಯಿಂದ ಗಣೇಶ ಮೂರ್ತಿಗಳ ವಿಸರ್ಜನೆಗೆ ವ್ಯವಸ್ಥೆ ಮಾಡಲಾಗಿದ್ದ ಕಲ್ಯಾಣಿಗಳು, ಸಂಚಾರಿ ಟ್ಯಾಂಕ್ಗಳ ಬಳಿ ಹೆಚ್ಚಿನ ತ್ಯಾಜ್ಯ ಉತ್ಪಾದನೆ ಆಗಿರುವುದು ಕಂಡುಬಂದಿತು. ಗಣೇಶ ಮೂರ್ತಿಗಳ ವಿಸರ್ಜನೆಯಿಂದ ಬರುವ ಮಣ್ಣು, ಪೂಜಾ ಹೂಗಳು, ಪ್ಲಾಸ್ಟಿಕ್ ಇತ್ಯಾದಿ ವಸ್ತುಗಳ ತ್ಯಾಜ್ಯದ ರಾಶಿಯೇ ಕೆರೆ ಆವರಣದಲ್ಲಿ ಕಂಡುಬಂತು. ಕೆಲವಡೆ ಹಸಿ ತ್ಯಾಜ್ಯವನ್ನು ಸಂಸ್ಕರಣಾ ಘಟಕಗಳಿಗೆ, ಒಣತ್ಯಾಜ್ಯವನ್ನು ಸಂಗ್ರಹಣಾ ಕೇಂದ್ರಗಳಿಗೆ ರವಾನಿಸಲು ಪಾಲಿಕೆ ವ್ಯವಸ್ಥೆ ಮಾಡಿದ್ದರೂ ಪ್ರಯೋಜನವಾಗಲಿಲ್ಲ.