ಮದ್ಯ, ಮಾದಕ ವಸ್ತುಗಳ ಮಾಯಾಜಾಲಕ್ಕೆ ವಿದ್ಯಾರ್ಥಿಗಳು ಸಿಲುಕಬಾರದು

Madya_Vysana
Published on

ತುಮಕೂರು: ವಿದ್ಯಾರ್ಥಿಗಳು ಮದ್ಯ ಮತ್ತು ಮಾದಕ ವಸ್ತುಗಳ ಮಾಯಾಜಾಲಕ್ಕೆ ಒಳಗಾಗಬಾರದು, ಇದರ ದುಷ್ಪರಿಣಾಮದ ಬಗ್ಗೆ ಅರಿವು ಬೆಳಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಶುಭಕಲ್ಯಾಣ್​ ಹೇಳಿದರು.

ಡಾ.ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆ ಅಂಗವಾಗಿ ಜಿಲ್ಲಾಡಳಿತ, ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಪಿಯು ಶಿಕ್ಷಣ ಇಲಾಖೆ, ಅಂಬೇಡ್ಕರ್​ ಯುವಜನ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ, ಅಚರ್ಡ್​ ಸಂಸ್ಥೆ ಸಹಯೋಗದಲ್ಲಿ ನಗರದ ಬಿಜಿಎಸ್​ ವೃತ್ತದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವ್ಯಸನಮುಕ್ತ ದಿನಾಚರಣೆಯಲ್ಲಿ ಮಾತನಾಡಿದ ಅವರು, ಮದ್ಯ ಮತ್ತು ಮಾದಕ ವಸ್ತುಗಳಿಂದ ಉಂಟಾಗುವ ದುಷ್ಪರಿಣಾಮ ಕುರಿತು ಜನಜಾಗೃತಿ ಮೂಡಿಸಲು ರಾಜ್ಯದಾದ್ಯಂತ ಇಂದು ವ್ಯಸನಮುಕ್ತ ದಿನಾಚರಣೆ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ದೇಶದಲ್ಲಿ ಶೇ.2ರಷ್ಟು ಮಂದಿ ವಿವಿಧ ರೀತಿಯ ಮಾದಕ ದ್ರವ್ಯಗಳ ವ್ಯಸನಕ್ಕೊಳಗಾಗುತ್ತಿದ್ದಾರೆ. ಮಾದಕ ವಸ್ತುಗಳ ಸೇವನೆ ಆರೋಗ್ಯಕ್ಕೆ ಹಾನಿಕಾರಕವಲ್ಲದೆ ಇಡೀ ಕುಟುಂಬಕ್ಕೂ ಮಾರಕವಾಗಲಿದೆ ಎಂದರು.

ಆಧುನಿಕ ಜಗತ್ತಿನಲ್ಲಿ ಮಾದಕ ವಸ್ತುಗಳ ಬಳಕೆ ಪ್ರಮಾಣ ದಿನೇ ದಿನೇ ಹೆಚ್ಚಾಗುತ್ತಿದೆ. ಮಾದಕ ವಸ್ತುಗಳ ಬಳಕೆ ನಿಯಂತ್ರಿಸುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಈ ಮಾದಕ ವಸ್ತುಗಳ ಮೋಹಕ ಮಾಯಾಜಾಲಕ್ಕೆ ಒಳಗಾದ ಶೇ.50ರಷ್ಟು ಜನರಿಗೆ ಸೂಕ್ತ ಚಿಕಿತ್ಸೆ ದೊರೆಯದೆ ಜೀವ ಹಾನಿಯಾಗುವ ಸಾಧ್ಯತೆಯಿದೆ ಎಂದು ಎಚ್ಚರಿಸಿದರು.

ಪದೆಪದೇ ಮಾದಕ ದ್ರವ್ಯ ಸೇವಿಸುವವರಲ್ಲಿ ಜಡತ್ವ, ಭಯ, ನರಮಂಡಲ ಮಂಕಾಗುವಿಕೆ, ಹೃದಯಸಂಬಂಧಿ ರೋಗ, ಕ್ಯಾನ್ಸರ್​ನಂತಹ ಮಾರಣಾಂತಿಕ ಖಾಯಿಲೆಗಳಿಗೆ ತುತ್ತಾಗುವ ಸಂಭವ ಹೆಚ್ಚಾಗಿದೆ, ಮಾದಕ ವಸ್ತುಗಳ ಚಟಕ್ಕೆ ಯುವ ಜನರೇ ಹೆಚ್ಚಾಗಿ ಬಲಿಯಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಮಾದಕ ವಸ್ತುಗಳಿಗೆ ದಾಸರಾಗಿರುವವರನ್ನು ವೈದ್ಯಕಿಯ ನೆರವು, ನೈತಿಕ ಹಾಗೂ ಸಾಮಾಜಿಕ ಸಹಾನುಭೂತಿ ತೋರುವ ಮೂಲಕ ವ್ಯಸನದಿಂದ ಮುಕ್ತರನ್ನಾಗಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಮದ್ಯ ಮತ್ತು ಮಾದಕ ವಸ್ತುಗಳ ಬಳಕೆಯಿಂದ ಹೋರಾಡಿ ಆರೋಗ್ಯಕರ ಚಟುವಟಿಕೆ ಬೆಳೆಸಿಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು.

ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಕೆ.ವಿ.ಅಶೋಕ್​ ಮಾತನಾಡಿ, ವಿದ್ಯಾರ್ಥಿಗಳು ಮಾದಕ ವಸ್ತುಗಳ ವ್ಯಸನಕ್ಕೆ ಬೀಳದಿದ್ದರೂ ಮಾದಕ ವಸ್ತುಗಳಿಂದಾಗುವ ಸಾಮಾಜಿಕ ಹಾಗೂ ಆರೋಗ್ಯದ ಮೇಲೆ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಿದಲ್ಲಿ ಸಾಮಾಜಿಕ ಪರಿವರ್ತನೆ ಸಾಧ್ಯವೆಂಬ ದೃಷ್ಟಿಯಿಂದ ವಿನೂತನ ರೀತಿಯಲ್ಲಿ ಈ ಅರಿವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ವಿದ್ಯಾರ್ಥಿಗಳು ಕುಟುಂಬ ಹಾಗೂ ಸ್ನೇಹಿತರಿಗೆ ಮಾದಕ ವಸ್ತುವಿನಿಂದಾಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವ ಮೂಲಕ ಸಾಮಾಜಿಕ ಹೊಣೆಗಾರಿಕೆಯಲ್ಲಿ ಪಾಲ್ಗೊಳ್ಳಬೇಕು ಎಂದು ತಿಳಿಸಿದರು.

ಮದ್ಯ ಹಾಗೂ ಮಾದಕ ವಸ್ತುಗಳಿಗೆ ಗುಲಾಮರಾದಲ್ಲಿ ನಮ್ಮನ್ನು ಅಣು-ಅಣುವಾಗಿ ಕೊಲ್ಲುತ್ತದೆ. ಸಮಾಜ ಘಾತುಕ ಕೃತ್ಯಗಳಲ್ಲಿ ಭಾಗಿಯಾಗುವಂತೆ ಮಾಡುತ್ತದೆ. ಮಾದಕ ವಸ್ತುಗಳನ್ನು ಮಾರಾಟ ಮಾಡುವವರಿಗೆ ಹೆಚ್ಚಿನ ಆದಾಯ ಬರುವುದರಿಂದ ಏನೂ ಅರಿಯದ ಮಕ್ಕಳಲ್ಲೂ ಈ ಚಟಕ್ಕೊಳಪಡಿಸಲಾಗುತ್ತಿದೆ ಎಂದು ಬೇಸರಿಸಿದ ಅವರು, ವ್ಯಸನ ಮುಕ್ತ ಸಮಾಜ ನಿಮಾರ್ಣಕ್ಕೆ ನಾವೆಲ್ಲರೂ ಕೈಜೋಡಿಸಬೇಕು ಎಂದು ತಿಳಿಸಿದರು.

ಮನೋವೈದ್ಯ ಡಾ.ಲೋಕೇಶ್​ಬಾಬು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಆಕರ್ಷಣೆ, ಕುತೂಹಲ, ಉದ್ವೇಗದಿಂದ ಮಹಿಳೆಯರೂ ಸಹ ಮದ್ಯ ಹಾಗೂ ಮಾದಕ ವ್ಯಸನಿಗಳಾಗುತ್ತಿರುವುದು ಆಘಾತಕಾರಿ ಸಂಗತಿಯಾಗಿದೆ. ಹೆಣ್ಣು ಸಮಾಜದ ಕಣ್ಣಾಗಿರಬೇಕೇ ಹೊರತು ಕಂಟಕವಾಗಬಾರದು. ತಮ್ಮ ಕುಟುಂಬ ಸದಸ್ಯರು ಮಾದಕ ವ್ಯಸನಿಗಳಾಗಿದ್ದರೆ ಅದರಿಂದ ಮುಕ್ತಿಗೊಳಿಸಲು ಮಹಿಳೆಯರು ಶ್ರಮಿಸಬೇಕು. ಮಾದಕ ವ್ಯಸನಿಗಳು ಭಾವನಾತ್ಮಕ ಸಮಸ್ಯೆಗಳಿಂದ ಬಳಲುತ್ತಿರುತ್ತಾರೆ. ಅಂತಹವರಿಗೆ ಪ್ರೀತಿ, ವಿಶ್ವಾಸ, ಅನುಕಂಪ ತೋರುವ ಮೂಲಕ ಮಾನವೀಯ ಮೌಲ್ಯ ಬೆಳೆಸಿಕೊಳ್ಳಬೇಕು ಎಂದರು.

ಹೆಚ್ಚುವರಿ ಪೊಲೀಸ್​ ವರಿಷ್ಠಾಧಿಕಾರಿ ಡಾ.ಪುರುಷೋತ್ತಮ್​ ಮಾದಕ ವಸ್ತು ವಿರೋಧಿ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಜಿ.ಹಿಮಂತರಾಜು, ಡಾ.ಬಿ.ಆರ್​.ಅಂಬೇಡ್ಕರ್​ ಯುವಜನ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ರಾಜಶೇಖರ್​ ಇದ್ದರು.

ಡಿಡಿಪಿಯು ಡಾ.ಬಾಲಗುರುಮೂರ್ತಿ, ಡಿಎಚ್​ಒ ಡಾ.ಚಂದ್ರಶೇಖರ್​, ವಾರ್ತಾ ಸಹಾಯಕಿ ಆರ್​.ರೂಪಕಲಾ, ಅಚರ್ಡ್​ ಸಂಸ್ಥೆಯ ಸದಾಶಿವ, ಡಾ.ಅನಿಲ್​ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net