

ಕಾರವಾರ: ಮಮತೆ, ಸಮತೆಗೆ ಮಿಗಿಲಾದ ಆಧ್ಯಾತ್ಮವಿಲ್ಲ ಎಂದು ಖ್ಯಾತ ಸಾಹಿತಿ ಜಯಂತ ಕಾಯ್ಕಿಣಿ ಹೇಳಿದರು.
ಇಲ್ಲಿನ ದಿವೇಕರ್ ವಾಣಿಜ್ಯ ಕಾಲೇಜ್‌ನ ಸಂಸ್ಥಾಪಕ ಪ್ರಾಂಶುಪಾಲರ ಕುರಿತಾದ ಲೇಖನಗಳಿರುವ `ಅದಮ್ಯ ಚೇತನ ಪ್ರೊ.ಜಿ.ವಿ.ಭಟ್' ಎಂಬ ಕೃತಿಯನ್ನು ಕಾಲೇಜ್‌ನ ಸಭಾಭವನದಲ್ಲಿ ಹಳೆಯ ವಿದ್ಯಾರ್ಥಿ ಸಂಘದಿಂದ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಿ ಅವರು ಮಾತನಾಡಿದರು. ಪ್ರೀತಿ, ವಿಶ್ವಾಸ ಮತ್ತು ಸಮಾನತೆಯ ಆಧ್ಯಾತ್ಮಕ್ಕಾಗಿ ನಾವು ಮಂದಿರಕ್ಕೇ ಹೋಗಬೇಕೆಂದಿಲ್ಲ. ಸಂತೆ ಮಾರುಕಟ್ಟೆಯಲ್ಲೂ, ಬಸ್ ನಿಲ್ದಾಣದಲ್ಲೂ ಸಿಗಬಹುದು ಎಂದರು.
ಇಡೀ ಜಗತ್ತೇ ಸೆಲ್ಪಿ ಮೋಡ್‌ನಲ್ಲಿದೆ. ಮನುಷ್ಯ ಲೋಕದ ಸಂಪರ್ಕವೇ ಇಲ್ಲದ ಅವಾಸ್ತವ ಲೋಕದಲ್ಲಿ ನಾವಿದ್ದೇವೆ. ಸುಂದರ ಜೋಗ ಜಲಪಾತ ನೋಡಿ ಆನಂದಿಸುವ ಮೊದಲು ಸೆಲ್ಫಿ ಹೊಡೆದುಕೊಳ್ಳುತ್ತಾರೆ. ಬೆಳಗ್ಗೆ ಎದ್ದು ವಾಟ್ಸ್ಆ್ಯಪ್‌ನಲ್ಲಿ ಗುಡ್ ಮಾರ್ನಿಂಗ್ ಸಂದೇಶ ಕಳಿಸುತ್ತಾರೆ. ಆದರೆ, ಎದುರಿಗೆ ಸಿಕ್ಕರೆ ಮಾತೇ ಆಡುವುದಿಲ್ಲ. ಇಂಥ ಕಾಲಘಟ್ಟದಲ್ಲಿ ಸಮಾಜವನ್ನು ತನ್ನದು ಎನಿಸಿಕೊಂಡು ಅಲ್ಲಿನ ಆಗು ಹೋಗುಗಳಿಗೆ ಸ್ಪಂದಿಸುವ ಮತ್ತು ಎಲ್ಲರನ್ನೂ ಸಮಾನವಾಗಿ ಕಾಣುವ ಮನಸ್ಥಿತಿ ಬೇಕಿದೆ. ಅಂಥ ಅಪರೂಪದ ವ್ಯಕ್ತಿ ಪ್ರೊ.ಜಿ.ವಿ.ಭಟ್ ಅವರು ಎಂದು ಬಣ್ಣಿಸಿದರು.
ಹಿರಿಯ ಪತ್ರಕರ್ತ ಜಿ.ಯು.ಭಟ್ ಮಾತನಾಡಿ, ಅದಮ್ಯ ಚೇತನ ಜಿ.ವಿ.ಭಟ್ ಅವರ ಆದರ್ಶಗಳನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಕಾರ್ಯ ಉತ್ತಮವಾದುದು ಎಂದರು. ಪುಸ್ತಕದ ಸಂಪಾದಕ ಡಾ.ಜಿ.ವಿ.ಜೋಶಿ ಮಾತನಾಡಿ, 157 ಪುಟಗಳ ಕೃತಿಯಲ್ಲಿ ದಿವಂಗತ ಜಿ.ವಿ.ಭಟ್ ಅವರ ಕುರಿತು ಇಂಗ್ಲಿಷ್ ಹಾಗೂ ಕನ್ನಡದಲ್ಲಿ ಬರೆದ ಲೇಖನಗಳಿವೆ, ಕವನಗಳಿವೆ. ಅಲ್ಲದೇ ಜಿ.ವಿ.ಭಟ್ ಅವರೇ ಬರೆದ ಲೇಖನವೂ ಇದೆ ಎಂದರು.
ಕೆನರಾ ವೆಲ್‌ಫೇರ್ ಟ್ರಸ್ಟ್ನ ಅಧ್ಯಕ್ಷ ಎಸ್.ಪಿ.ಕಾಮತ್ ಅಧ್ಯಕ್ಷತೆ ವಹಿಸಿದ್ದರು. ಪುಸ್ತಕದ ಇನ್ನೊಬ್ಬ ಸಂಪಾದಕ ಆರ್.ಎಸ್.ಹಬ್ಬು, ಕಾಲೇಜ್‌ನ ಪ್ರಾಂಶುಪಾಲ ಕೇಶವ ಕೆ.ಜಿ., ದಿ.ಜಿ.ವಿ.ಭಟ್ ಅವರ ಪತ್ನಿ ಅನಸೂಯಾ ಭಟ್, ಕಾಲೇಜ್ ಹಳೆಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಇಮ್ತಿಯಾಜ್ ಸಯ್ಯದ್, ಕಾರ್ಯದರ್ಶಿ ಅಜಯ ಸಾಹುಕಾರ್ ವೇದಿಕೆಯಲ್ಲಿದ್ದರು.