ನ್ಯಾಯಾಲಯದ ಜವಾನ ಹುದ್ದೆಗೆ ಅಮಾನ್ಯ ಅಂಕಪಟ್ಟಿ ಸಲ್ಲಿಸಿದಾತನ ವಿರುದ್ಧ ಎಫ್‌ಐಆರ್‌ ದಾಖಲು

Fake-marks-card
Published on

ಕಾರವಾರ: ನಕಲಿ ಅಂಕಪಟ್ಟಿ ಹಾವಳಿ ಹೆಚ್ಚುತ್ತಿದೆ. ಅಂಚೆ ಇಲಾಖೆಯ ಗ್ರಾಮೀಣ ಅಂಚೆ ಸೇವಕ ಹುದ್ದೆಗಳ ನೇಮಕಾತಿಗಳಿಗೆ ನಕಲಿ ಅಂಕಪಟ್ಟಿ ನೀಡಿ ವಂಚಿಸಲೆತ್ನಿಸಿದ 14 ಜನರ ವಿರುದ್ಧ ಶಿರಸಿಯಲ್ಲಿ ಜ.9 ರಂದು ದೂರು ದಾಖಲಾಗಿತ್ತು. ಈಗ ಮತ್ತೊಂದು ಅದೇ ಮಾದರಿಯ ಪ್ರಕರಣ ಬಯಲಾಗಿದೆ.

ನ್ಯಾಯಾಲಯದ ಜವಾನರ ನೇಮಕಾತಿಯಲ್ಲಿ ಅಕ್ರಮ ಅಂಕಪಟ್ಟಿ ಕಂಡುಬಂದಿದೆ. ಕಾರವಾರದ ಜಿಲ್ಲಾ ನ್ಯಾಯಾಲಯದಿಂದ ಕರೆಯಲಾದ 13 ಜವಾನರ ಹುದ್ದೆ ನೇಮಕಾತಿಗಾಗಿ ಒಬ್ಬ ವ್ಯಕ್ತಿ ಅರ್ಜಿಯೊಂದಿಗೆ ನಕಲಿ ಅಂಕಪಟ್ಟಿ ಸಲ್ಲಿಸಿರುವುದು ಪತ್ತೆಯಾಗಿದೆ. ಈ ಸಂಬಂಧ ಇಲ್ಲಿನ ಶಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಜಿಲ್ಲಾ ಪ್ರಧಾನ ಮತ್ತು ಸೆಶನ್ಸ್ ನ್ಯಾಯಾಲಯದ ಪ್ರಭಾರ ಆಡಳಿತಾಧಿಕಾರಿ ರವೀಂದ್ರ ಆರ್.ನಾಯ್ಕ ಅವರು ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಚಂಬನೂರ್‌ನ ಆನಂದ ಎಂ.ಪಾಟೀಲ ಎಂಬಾತನ ವಿರುದ್ಧ ದೂರು ದಾಖಲಿಸಿದ್ದಾರೆ. ಆತ ದೆಹಲಿಯ ಸೆಕೆಂಡರಿ ಸ್ಕೂಲ್ ಡೆವಲಪ್‌ಮೆಂಟ್ ಆ್ಯಂಡ್ ಸರ್ಟಿಫಿಕೇಶನ್ ಕೌನ್ಸಿಲ್ ನ ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ ನೀಡಿದ್ದ ಎನ್ನಲಾಗಿದೆ. ಆದರೆ, ಅದನ್ನು ಶಾಲಾ ಶಿಕ್ಷಣ ಇಲಾಖೆಯ (ಪ್ರೌಢ ಶಿಕ್ಷಣ)ಆಯುಕ್ತಾಲಯ ಕಚೇರಿಯು ಪರಿಶೀಲನೆ ನಡೆಸಿ, ಸೆಕೆಂಡರಿ ಸ್ಕೂಲ್ ಡೆವಲಪ್‌ಮೆಂಟ್ ಆ್ಯಂಡ್ ಸರ್ಟಿಫಿಕೇಶನ್ ಕೌನ್ಸಿಲ್ ಸರ್ಕಾರಿ ಸುತ್ತೋಲೆಯ ಪಟ್ಟಿಯಲ್ಲೇ ಇಲ್ಲ ಎಂಬದನ್ನು ಖಚಿತಪಡಿಸಿದೆ. ಈ ಹಿನ್ನೆಲೆಯಲ್ಲಿ ಆತ ಮಾನ್ಯತೆ ಇಲ್ಲದ ಅಂಕಪಟ್ಟಿ ನೀಡಿ, ಇತರ ಅಭ್ಯರ್ಥಿಗಳಿಗೆ ಉದ್ಯೋಗ ತಪ್ಪಿಸಿದ ಎಂಬ ಕಾರಣಕ್ಕೆ ಆತನ ವಿರುದ್ಧ ದೂರು ದಾಖಲಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net