ಮಧ್ಯವರ್ತಿಗಳಿಗೆ ಕಡಿವಾಣ ಹಾಕಲು ಅದಾಲತ್

web 1
Published on

ತಹಸೀಲ್ದಾರ್ ಸುದರ್ಶನ್ ಯಾದವ್ ಹೇಳಿಕೆ

ಚಿಂತಾಮಣಿ : ತಾಲೂಕಿನ ಅಂಬಾಜಿದುರ್ಗ ಹೋಬಳಿ ಕಂಗಾನಹಳ್ಳಿಯಲ್ಲಿ ಕಂದಾಯ ಇಲಾಖೆ ಮತ್ತು ತಾಲೂಕು ಆಡಳಿತ ವತಿಯಿಂದ ಹಮ್ಮಿಕೊಂಡಿದ್ದ ಪೌತಿ ಖಾತೆ ಆಂದೋಲನ ಹಾಗೂ ಪಿಂಚಣಿ ಅದಾಲತ್ ಗುರುವಾರ ಯಶಸ್ವಿಯಾಗಿ ನಡೆಯಿತು.
ತಾಲೂಕು ದಂಡಾಧಿಕಾರಿಗಳಾದ ಸುದರ್ಶನ್ ಯಾದವ್ ಮಾತನಾಡಿ, ಸರ್ಕಾರ ಹಾಗೂ ಜನರ ನಡುವೆ ಮಧ್ಯವರ್ತಿಗಳಿರಬಾರದು. ಸರ್ಕಾರದ ಸೌಲಭ್ಯಗಳು ನೇರವಾಗಿ ಅರ್ಹ ಲಾನುಭವಿಗಳಿಗೆ ತಲುಪಿಸಲು ಕಂದಾಯ ಇಲಾಖೆ ಅಧಿಕಾರಿಗಳು ಕಾರ್ಯ ನಿರ್ವಹಿಸಬೇಕು. ಈ ನಿಟ್ಟಿನಲ್ಲಿ ಆಯೋಜಿಸಿರುವ ಪೌತಿ ಖಾತೆ ಆಂದೋಲನ ಮತ್ತು ಪಿಂಚಣಿ ಅದಾಲತ್‌ನ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದರು.

ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಸವಲತ್ತುಗಳು ತಲುಪಬೇಕು. ಈ ನಿಟ್ಟಿನಲ್ಲಿ ಜವಾಬ್ದಾರಿಯುತ ಪ್ರತಿಯೊಬ್ಬರು ಕೈಜೋಡಿಸಿ ಯೋಜನೆಗಳ ಸಾಕಾರಕ್ಕೆ ಮುಂದಾಗಬೇಕು. ಕಂದಾಯ ಇಲಾಖೆಯಿಂದ ಅಂಗವಿಕಲ, ವಿಧವಾ, ಸಂಧ್ಯಾ ಸುರಕ್ಷಾ ವೇತನ ಮತ್ತಿತರ ಪಿಂಚಣಿ ಯೋಜನೆಗಳನ್ನು ಅರ್ಹರಿಗೆ ತಲುಪಿಸಬೇಕು ಎಂದು ಹೇಳಿದರು.

ಪಿಂಚಣಿ ಅದಾಲತ್‌ನಲ್ಲಿ ಸ್ಥಳೀಯ ಹಾಗೂ ಸುತ್ತಲಿನ ಗ್ರಾಮೀಣ ಪ್ರದೇಶದ ಹಲವಾರು ಅರ್ಹ ಫಲಾನುಭವಿಗಳಿಗೆ ವಿವಿಧ ಯೋಜನೆಗಳ ಮಂಜೂರಾತಿ ಪತ್ರಗಳನ್ನು ವಿತರಿಸಲಾಯಿತು.

ಗ್ರಾಪಂ ಅಧ್ಯಕ್ಷೆ ಕೆ.ಎಂ. ಮಮತಾ, ಗ್ರಾಪಂ ಮಾಜಿ ಸದಸ್ಯರಾದ ಹಾಲು ನಾರಾಯಣಸ್ವಾಮಿ, ಕೃಷಿಕ ಸಮಾಜದ ಸದಸ್ಯ ಆಂಜನೇಯರೆಡ್ಡಿ. ಮುಖಂಡರಾದ ಮಂಜುನಾಥ್‌ರೆಡ್ಡಿ. ಫೋಟೋ ನಾರಾಯಣಪ್ಪ, ಟಿಎಪಿಎಂಸಿ ಅಧ್ಯಕ್ಷ ನಾಗೇಶ್, ಗ್ರಾಪಂ ಸದಸ್ಯ ವೆಂಕಟಸ್ವಾಮಿರೆಡ್ಡಿ, ಉಪಾಧ್ಯಕ್ಷ ಹನುಮಂತರಾಯಪ್ಪ, ಉಪತಹಸೀಲ್ದಾರ್ ಮೋಹನ್ ಕುಮಾರ್, ರೆವಿನ್ಯೂ ಇನ್‌ಸ್ಪೆಕ್ಟರ್ ನರಸಿಂಹಮೂರ್ತಿ, ಶಿರಸ್ತೇದಾರ್‌ಗಳಾದ ರವೀಶ್, ನಾರಾಯಣಸ್ವಾಮಿ, ಗ್ರಾಮ ಆಡಳಿತ ಅಧಿಕಾರಿಗಳಾದ ನಿರಂಜನ್, ಸುಪ್ರಿಯ, ತಸ್ಲಿಂತಾಜ್, ನೀಲಮ್ಮ, ಅರವಿಂದ್, ದಿವಾಕರ್ ಮತ್ತಿತರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net