

ಮುಂಡಗೋಡ: ತಾಲೂಕಿನ ಉಮ್ಮಚಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರತಿಯೊಬ್ಬ ವಿದ್ಯಾರ್ಥಿ ಒಂದೊಂದು ಅಡಕೆ ಸಸಿಯನ್ನು ದತ್ತು ಪಡೆದು ಬೆಳೆಸುತ್ತಿದ್ದಾರೆ. ವಿದ್ಯಾರ್ಥಿಗಳ ಕಾರ್ಯ ಇತರ ಶಾಲೆಗಳಿಗೆ ಮಾದರಿಯಾಗಿದೆ.
ಶಾಲೆಯಲ್ಲಿ 1ರಿಂದ 7ನೇ ತರಗತಿವರೆಗೆ ಒಟ್ಟು 67 ವಿದ್ಯಾರ್ಥಿಗಳಿದ್ದಾರೆ. ಶಾಲೆಯ ಹಿಂಬದಿಯಲ್ಲಿ ಅರ್ಧ ಎಕರೆಯಷ್ಟು ಖಾಲಿ ಜಾಗದಲ್ಲಿ ವಿದ್ಯಾರ್ಥಿಗಳು ಗಿಡಗಳನ್ನು ಬೆಳೆಸುತ್ತಿದ್ದಾರೆ. ಮಕ್ಕಳಿಗೆ ಕೃಷಿಯ ಪರಿಜ್ಞಾನ ನೀಡಿದರೆ ಭವಿಷ್ಯದಲ್ಲಿ ಸ್ವಾವಲಂಬಿಗಳಾಗಲು ಅನುಕೂಲವಾಗುತ್ತದೆ ಎಂಬ ದೃಷ್ಟಿಯಿಂದ ಮುಖ್ಯ ಶಿಕ್ಷಕ ನಾರಾಯಣ ಶೆರುಗಾರ ಅವರು ಗ್ರಾಮಸ್ಥರೊಂದಿಗೆ ರ್ಚಚಿಸಿದಾಗ ಮೊದಲು ಸಹಕಾರ ಸಿಗದಾಯಿತು. ನಂತರ ಸೆಪ್ಟೆಂಬರ್ನಲ್ಲಿ ಶಿಕ್ಷಕರ ಜತೆಗೂಡಿ ಸಸಿ ನೆಡಲು ಹೊಂಡ ತೆಗೆಯಲು ಆರಂಭಿಸಿದ ನಂತರ ಇಡೀ ಗ್ರಾಮದ ಚಿತ್ರಣ ಬದಲಾಗಿ ಎಲ್ಲರ ಸಹಕಾರ ದೊರೆಯಿತು.
ಪಾಲಕರು ಸ್ವಯಂ-ಪ್ರೇರಣೆಯಿಂದ ತಮ್ಮ-ತಮ್ಮ ಮನೆಗಳಿಂದ ಒಂದೊಂದು ಅಡಕೆ ಸಸಿಗಳನ್ನು ತಂದರು. ಅದೇ ರೀತಿ ಅರಣ್ಯ ಇಲಾಖೆಯವರು ನೀಡಿದ ಹುಣಸೆ, ನೆಲ್ಲಿಕಾಯಿ ಸಸಿ ಸೇರಿದಂತೆ ಇನ್ನಿತರ 80 ಗಿಡಗಳನ್ನು ನೆಡಲಾಗಿದೆ. ನಂತರ ಪ್ರತಿಯೊಬ್ಬ ವಿದ್ಯಾರ್ಥಿಯೂ ಒಂದೊಂದು ಅಡಕೆ ಗಿಡವನ್ನು ಜವಾಬ್ದಾರಿಯಿಂದ ಬೆಳೆಸಲು ಮುಂದಾದರು.
ಶಾಲೆಯ ಆವರಣದಲ್ಲಿ ಬಾವಿ ಇದ್ದು, ಸ್ವತಃ ಶಿಕ್ಷಕರೇ ತಮ್ಮ ಖರ್ಚಿನಿಂದ ಡ್ರಿಪ್ ಮಾಡಿಸಿದ್ದಾರೆ. ನಂತರದ ಮತ್ತು ಈಗಿನ ಲಾಕ್ಡೌನ್ ಸಮಯದಲ್ಲಿ ಶಿಕ್ಷಕರಾದ ಬಿ.ಎಂ. ಸಂತೋಷ, ಅನುಪಮಾ ಡಿ., ರೇಖಾ ಹೆಗಡೆ ಅವರು ಸರದಿಯಾಗಿ ಶಾಲೆಗೆ ಹೋಗಿ ಡ್ರಿಪ್ ಮೂಲಕ ಗಿಡಗಳಿಗೆ ನೀರುಣಿಸಿ ಆರೈಕೆ ಮಾಡುತ್ತ ಬಂದಿದರು. ‘ಹಸಿರು ಸತ್ವ ಸಂಗಮ’, ‘ನಂದನ’, ‘ಚೈತ್ರ ಚಿಗುರು’, ‘ನೀರನ್ನು ಪೋಲು ಮಾಡಬಾರದು’ ಎಂಬ ನಾಮಫಲಕಗಳನ್ನು ಅಳವಡಿಸಿದ್ದಾರೆ. ಯಾರು ಗಿಡಗಳನ್ನು ಚೆನ್ನಾಗಿ ಬೆಳೆಸುತ್ತಾರೊ ಅವರಿಗೆ ಬಹುಮಾನ ನೀಡುವುದಾಗಿ ಹೇಳಿ ಮಕ್ಕಳನ್ನು ಹುರಿದುಂಬಿಸಲಾಗಿದೆ. ಕರೊನಾ ದೂರವಾಗಿ ಮಕ್ಕಳು ಆದಷ್ಟು ಬೇಗ ಶಾಲೆ ಬರಲಿ ಎಂಬುದು ಇವರ ಆಶಯ.
ನಮಗೆ ಇದೊಂದು ಸದವಕಾಶ. ಸಸಿಗಳನ್ನು ನೆಡುವ ಮೂಲಕ ಪರಿಸರ ರಕ್ಷಣೆ ಮಾಡಿದಂತಾಗುತ್ತದೆ. ಸಸಿಯನ್ನು ಪೋಷಿಸುವ ಜವಾಬ್ದಾರಿ ನಮ್ಮ ಮೇಲಿದೆ.| ವಿನಾಯಕ ಗೌಡ7ನೇ ತರಗತಿ ವಿದ್ಯಾರ್ಥಿಕೇವಲ ನೌಕರಿಗಾಗಿ ಅಲೆದಾಡದೆ, ಡಿಗ್ರಿ ಸಲುವಾಗಿ ಓದದೆ ಶಿಕ್ಷಣವನ್ನು ಪರಿಪಕ್ವವಾಗಿ ಪೂರೈಸಿ ಮಾನವತೆಯ ಕಲ್ಪನೆ ಇಟ್ಟುಕೊಂಡು ಮಾನವ ಶ್ರೇಷ್ಠವಾಗಬೇಕು. ದೇಶಕ್ಕಾಗಿ ಅಥವಾ ಸಮಾಜಕ್ಕಾಗಿ ಕೈಲಾದ ಸೇವೆ ಮಾಡಬೇಕು.| ನಾರಾಯಣ ಶೆರುಗಾರ, ಮುಖ್ಯಶಿಕ್ಷಕಇದೊಂದು ಉತ್ತಮ ಪರಿಕಲ್ಪನೆ. ಶಾಲಾ ಆವರಣದಲ್ಲಿ ಔಷಧ ಸಸ್ಯಗಳನ್ನು ಕೂಡ ಬೆಳೆಸಿದ್ದಾರೆ. ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ನಾಲ್ವರು ಶಿಕ್ಷಕರ ಹೊಂದಾಣಿಕೆಯಿಂದ ಇದೆಲ್ಲ ಸಾಧ್ಯವಾಗಿದೆ. ಈ ಶಾಲೆ ಇತರ ಶಾಲೆಗಳಿಗೂ ಪ್ರೇರಣೆಯಾಗಲಿ.| ವಿ.ವಿ. ನಡುವಿನಮನಿ, ಬಿಇಒ