ಸೈಬರ್ ವಿಕೃತಿ ವಿರುದ್ಧ ನಟಿ ಸುಷ್ಮಾ ವೀರ್ ದೂರು

Sushma veer
Published on

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹೆಣ್ಣು ಮಕ್ಕಳನ್ನು ಹಾಗೂ ಸೆಲೆಬ್ರಿಟಿಗಳನ್ನು ಅಸಭ್ಯವಾಗಿ ಟ್ರೋಲ್ ಮಾಡುತ್ತಿರುವುದನ್ನು ಖಂಡಿಸಿ ನಟಿ ಸುಷ್ಮಾ ವೀರ್ ಮಹಿಳಾ ಆಯೋಗ ಮತ್ತು ಸೈಬರ್ ಕ್ರೈಂಗೆ ದೂರು ನೀಡಿದ್ದಾರೆ.

ಜಾಲತಾಣಗಳಲ್ಲಿ ಹೆಣ್ಣು ಮಕ್ಕಳ ಮನಸ್ಸಿಗೆ ಹಾಗೂ ಚರಿತ್ರೆಗೆ ಕುಂದು ತರುವ ನಿಟ್ಟಿನಲ್ಲಿ ಅಶ್ಲೀಲವಾಗಿ ಅಸಭ್ಯವಾಗಿ ಪೋಸ್ಟ್‌ಗಳನ್ನು ಮಾಡುವ ಮೂಲಕ ತಮ್ಮ ವಿಕೃತಿ ಮೆರೆಯುತ್ತಿದ್ದಾರೆ. ಎಲ್ಲಿ ತಮ್ಮ ಮನಸ್ಥಿತಿ ಬಯಲಿಗೆ ಬರುತ್ತದೆಯೋ ಎಂದು ಹೆದರಿ ನಕಲಿ ಖಾತೆಗಳನ್ನು ತೆರೆದು ತಮ್ಮ ಗುರುತು ಮರೆಮಾಚಿ ತಮ್ಮ ಮನಬಂದಂತೆ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಅವರು, ಈ ಕುರಿತು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಸದ್ಯದ ಮನಸ್ಥಿತಿಯ ಜನರಿಂದ ಅನೇಕ ಹೆಣ್ಣು ಮಕ್ಕಳ ಜೀವನ ಹಾಗೂ ಅವರ ಕುಟುಂಬದ ಮರ್ಯಾದೆ ಹಾಳಾಗಿದೆ. ಇದರಿಂದ ಖಿನ್ನತೆಗೆ ಒಳಗಾಗಿ ಎಷ್ಟೋ ಮಂದಿ ಆತ್ಮಹತ್ಯೆ ಮಾಡಿಕೊಂಡಿರುವ ಉದಾಹರಣೆಗಳು ಸಾಕಷ್ಟಿವೆ. ಅಲ್ಲದೆ ಇಂತಹ ಟ್ರೋಲ್ ಮಾಡುವವರಿಗೆ ಸೆಲೆಬ್ರಿಟಿಗಳು ಅದರಲ್ಲೂ ಹೆಣ್ಣು ಮಕ್ಕಳು ಮೊದಲ ಹಾಗೂ ಪ್ರಮುಖ ಟಾರ್ಗೆಟ್. ಜಾಲತಾಣಗಳಲ್ಲಿ ಅವರ ಕುರಿತು ಕೆಟ್ಟ ಕೆಟ್ಟ ಕಾಮೆಂಟ್‌ಗಳನ್ನು ಮಾಡುವ ಮೂಲಕ ಅವರ ಗೌರವಕ್ಕೆ ಧಕ್ಕೆ ಉಂಟು ಮಾಡುತ್ತಿದ್ದಾರೆ.

ಇದು ಹೆಣ್ಣು ಮಕ್ಕಳ ಮೇಲೆ ನಡೆಸುತ್ತಿರುವ ಮಾನಸಿಕ ಅತ್ಯಾಚಾರವಾಗಿದೆ. ಇದನ್ನು ಮಹಿಳಾ ಆಯೋಗ ಹಾಗೂ ಸೈಬರ್ ಕ್ರೈಂ ವಿಭಾಗ ಗಂಭೀರವಾಗಿ ಪರಿಗಣಿಸಿ, ಈ ಕೆಟ್ಟ ಮನಸ್ಥಿತಿಯ ದುಷ್ಕರ್ಮಿಗಳನ್ನು ಪತ್ತೆ ಹಚ್ಚಿ ಅಂತಹವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ. ಈ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿನ ಅಶ್ಲೀಲ ಪೋಸ್ಟ್ ಹಾಕುವವರ, ಕಮೆಂಟ್ ಮಾಡುವವರ ಹಾಗೂ ರಿಪೀಟೆಡ್ ಅೆಂಡರರ್ಸ್‌ಗಳ ವಿರುದ್ಧ ದೂರು ದಾಖಲಿಸಿದ್ದಾರೆ.

ಸುಷ್ಮಾ ವೀರ್ ಅವರು, ಇತ್ತೀಚೆಗೆ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ನಿರೂಪಕ ಕೇಳಿದ ಪ್ರಶ್ನೆಗೆ ತಮ್ಮ ವೈಯಕ್ತಿಕ ಅಭಿಪ್ರಾಯ ತಿಳಿಸಿದ್ದರು. ಆದರೆ ಅವರ ಮಾತನ್ನು ತಿರುಚಿ ಮಾನ ಹಾನಿ ಮಾಡಲಾಗಿದೆ. ಇಂತಹವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದೂರು ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net