

ಭಟ್ಕಳ: ಸ್ಟಾರ್ ಚಿತ್ರನಟರು ಎಂದರೆ ಮಾಲ್ ಗಳಲ್ಲಿ ಮಾತ್ರ ಕಾಣಿಸುತ್ತಾರೆ ಎಂಬುದಿದೆ. ಆದರೆ, ಯಶ್ ರಾಧಿಕಾ ಜೋಡಿ ಸಣ್ಣ ಹಳ್ಳಿಯಲ್ಲಿ ಸಣ್ಣ ಕಿರಾಣಿ ಅಂಗಡಿಗೆ ತೆರಳಿ ಐಸ್ ಕ್ಯಾಂಡಿ, ಚಾಕಲೇಟ್ ಖರೀದಿ ಮಾಡಿ ಅಚ್ಚರಿ ಮೂಡಿಸಿದ್ದಾರೆ. ತಾಲ್ಲೂಕಿನ ಚಿತ್ರಾಪುರ ಮಠಕ್ಕೆ ಗುರುವಾರ ರಾತ್ರಿ ಆಗಮಿಸಿದ್ದ ಚಿತ್ರನಟ ಯಶ್ ಚಿತ್ರಾಪುರದಲ್ಲಿರುವ ಸಣ್ಣ ಕಿರಾಣಿ ಅಂಗಡಿಯಿಂದ ಮಗಳಿಗೆ ಚಾಕಲೊಟ್ ಹಾಗೂ ಪತ್ನಿ ರಾಧಿಕಾ ಪಂಡಿತ್ ಅವರಿಗೆ ಐಸ್ ಕ್ಯಾಂಡಿ ಕೊಡಿಸಿದ್ದಾರೆ. ದಂಪತಿಯು ಅಂಗಡಿಯ ಎದುರು ನಿಂತ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ರಾಧಿಕಾ ಪಂಡಿತ ಕುಟುಂಬ ನಡೆದುಕೊಳ್ಳುವ ಮಠ ಇದಾಗಿದ್ದು, ರಾಧಿಕಾ ಅವರ ಸಂಬಂಧಿಕರ ಮನೆಯೂ ಭಟ್ಕಳದಲ್ಲಿದೆ. ಇದರಿಂದ ರಾಧಿಕಾ ಅವರು ಆಗಾಗ ಭಟ್ಕಳಕ್ಕೆ ಭೇಟಿ
ನೀಡುತ್ತಿರುತ್ತಾರೆ.
ಸಿನಿಮಾ ಚಿತ್ರೀಕರಣದ ಒತ್ತಡದ ನಡುವೆಯೂ ವರ್ಷಕ್ಕೆ ಒಮ್ಮೆ ಚಿತ್ರಾಪುರ ಮಠಕ್ಕೆ ಯಶ್ ಕೂಡ ಪತ್ನಿ, ಮಕ್ಕಳೊಂದಿಗೆ ಭೇಟಿ ನೀಡುತ್ತಿದ್ದಾರೆ. ಈ ಬಾರಿಯೂ ಮಠಕ್ಕೆ ಭೇಟಿ ನೀಡಿದ್ದ ಅವರು ಒಂದು ದಿನ ಅಲ್ಲಿಯೇ ತಂಗಿದ್ದರು. ಶುಕ್ರವಾರ ಮಠದಿಂದ ತೆರಳಿದ್ದಾರೆ.
ಗುರುವಾರ ಸಂಜೆ ಬಂದು ಸ್ವಾಮಿಗಳನ್ನು ಭೇಟಿ ಮಾಡಿದ ಅವರು, ನಂತರ ಮಠದ ಎದುರಿನ ಕಿರಾಣಿ ಅಂಗಡಿಯ ಕಟ್ಟೆಯ ಮೇಲೆ ಸ್ಟಾರ್ ನಟಿ ರಾಧಿಕಾ ಕುಳಿತು ಐಸಕ್ರೀಮ್ ಸವಿಯುತ್ತಿದ್ದರೆ, ಯಶ್ ಅಂಗಡಿಯಲ್ಲಿ ವ್ಯವಹರಿಸುತ್ತಿರುವ ಚಿತ್ರವು ತಡವಾಗಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಲಾರಂಭಿಸಿದೆ. ಸ್ಟಾರ್ ನಟನ ಸರಳತೆಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ
ಇದನ್ನೂ ಓದಿ: ದಾಂಡೇಲಿಯಲ್ಲಿ ಹಾರ್ನ್ ಬಿಲ್ ಹಬ್ಬಕ್ಕೆ ಚಾಲನೆ