More

    ದಾಂಡೇಲಿಯಲ್ಲಿ ಹಾರ್ನ್​ಬಿಲ್ ಹಬ್ಬಕ್ಕೆ ಚಾಲನೆ

    ದಾಂಡೇಲಿ: ಹಾರ್ನ್​ಬಿಲ್ ಪಕ್ಷಿಗಾಗಿ ದಾಂಡೇಲಿ-ಜೊಯಿಡಾ ಪ್ರದೇಶ ಪ್ರಪಂಚದಲ್ಲಿಯೇ ಪ್ರಸಿದ್ಧಿ ಪಡೆದ ಸ್ಥಳಗಳಾಗಿವೆ. ಹಾರ್ನ್​ಬಿಲ್ ಪಕ್ಷಿಗಳ ರಕ್ಷಣೆ ಅವುಗಳ ಸಂತತಿಯ ಹೆಚ್ಚಳ ಅತಿ ಅವಶ್ಯವಾಗಿದೆ. ಜನರಲ್ಲಿ ಪಕ್ಷಿಗಳ ಮಹತ್ವದ ಬಗ್ಗೆ ಅರಿವು ಮೂಡಿಸುವುದು ಮತ್ತು ಅವುಗಳ ಸಂರಕ್ಷಣೆಯಲ್ಲಿ ಅರಣ್ಯ ಇಲಾಖೆಯ ಜತೆ ಸಾರ್ವಜನಿಕರ ಪಾತ್ರವೂ ಮುಖ್ಯವಾಗಿದೆ ಎಂದು ಬೆಂಗಳೂರಿನ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಪ್ರಚಾರ) ಸ್ಮಿತಾ ಬಿಜ್ಜೂರ ಹೇಳಿದರು.

    ನಗರದ ಹಾರ್ನ್​ಬಿಲ್ ಭವನದಲ್ಲಿ ಶನಿವಾರ ಆಯೋಜಿಸಿದ್ದ ಎರಡು ದಿನಗಳ ಹಾರ್ನ್​ಬಿಲ್ ಹಬ್ಬದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು

    ಪ್ರಾಸ್ತಾವಿಕವಾಗಿ ಮಾತನಾಡಿದ ಹಳಿಯಾಳ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಪ್ರಶಾಂತಕುಮಾರ ಕೆ.ಸಿ., ದಾಂಡೇಲಿಯ ಅರಣ್ಯ ಪ್ರದೇಶದ ಭಾಗವನ್ನು ಹಾರ್ನ್​ಬಿಲ್ ಸಂರಕ್ಷಿತ ಪ್ರದೇಶ ಎಂದು ಕರೆಯಲಾಗುತ್ತದೆ. ಹಾರ್ನ್​ಬಿಲ್ ಪಕ್ಷಿ ಪ್ರಭೇದದ ಪಕ್ಷಿಗಳು ಪರಿಸರಕ್ಕೆ ಹಾಗೂ ಮಾನವನ ಅಸ್ತಿತ್ವಕ್ಕೆ ಧಕ್ಕೆ ಉಂಟಾಗುವುದನ್ನು ತಡೆಗಟ್ಟುತ್ತವೆ. 4 ಬಗೆಯ ಹಾರ್ನ್​ಬಿಲ್​ಗಳು ದಾಂಡೇಲಿ-ಜೊಯಿಡಾ ಸುತ್ತಮುತ್ತಲೂ ಕಂಡು ಬರುತ್ತವೆ. ಅಪರೂಪದ ಈ ಪಕ್ಷಿಗಳ ಬಗ್ಗೆ ಜಾಗೃತಿ ಮೂಡಿಸಲು ಸರ್ಕಾರ ಅರಣ್ಯ ಇಲಾಖೆಗೆ ಹೆಚ್ಚು ಆದ್ಯತೆ ನೀಡುತ್ತಿದೆ ಎಂದರು.

    ಅಧ್ಯಕ್ಷತೆ ವಹಿಸಿದ್ದ ಕೆನರಾ ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ ಕೆ.ವಿ. ವಸಂತರೆಡ್ಡಿ ಮಾತನಾಡಿ, ರಾಜ್ಯ ಸರ್ಕಾರ ರಾಜ್ಯದ ವಿವಿಧೆಡೆ ಪ್ರಾಣಿ ಪಕ್ಷಿಗಳು ಇರುವ ಜಾಗಗಳನ್ನು ಗುರುತಿಸಿ ಅವುಗಳ ಅಭಿವೃದ್ಧಿಗೆ, ಪಕ್ಷಿಧಾಮಗಳನ್ನು ನಿರ್ವಿುಸುವ ನಿಟ್ಟಿನಲ್ಲಿ ಹೆಚ್ಚು ಆಸಕ್ತಿ ತೋರಿಸಿದೆ ಎಂದರು.

    ಎಸಿಎಫ್ ಅರವಿಂದಾಕ್ಷರ ಉತ್ತರ ಕನ್ನಡ ವಿಭಾಗದಲ್ಲಿ ಜರುಗಿದ ಪಕ್ಷಿಗಳ ಪ್ರಭೇದಗಳ ಪರಿಣಿತರ ತಂಡಗಳ ಸರ್ವೆಯಲ್ಲಿ ಒಟ್ಟು 296 ಪಕ್ಷಿಗಳ ಪ್ರಭೇದಗಳನ್ನು ಗುರುತಿಸಲಾಗಿದೆ ಎಂದು ವರದಿ ವಾಚಿಸಿದರು. ಅರಣ್ಯ ಇಲಾಖೆಯಲ್ಲಿ ವಿಶೇಷ ಸೇವೆ ಸಲ್ಲಿಸಿದ ಅರಣ್ಯ ಇಲಾಖೆಯ ಸಿಬ್ಬಂದಿ ಸಂತೋಷ ಗವಾಸ, ಆನಂದ, ಶಂಕರಾನಂದ, ಚಂದ್ರಕಾಂತ ಹುಂಡೆಕಾರ ಅವರನ್ನು ಸನ್ಮಾನಿಸಲಾಯಿತು.

    ಮಾನಸಾ ವಾಸರೆ ಪ್ರಾರ್ಥಿಸಿದರು. ಎಸಿಎಫ್ ಸಂತೋಷ ಚವ್ಹಾಣ, ಮೇಘಾ ಪಾಟೀಲ, ಅರ್ಪಿತಾ ಹಾಗೂ ಕೆ.ಡಿ. ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು. ನಗರಸಭೆಯಿಂದ ಮುಖ್ಯ ರಸ್ತೆಯಲ್ಲಿ ಹಾರ್ನ್​ಬಿಲ್ ಪಕ್ಷಿಯ ಪ್ರತಿಕೃತಿಯನ್ನು ಡೊಳ್ಳು ಕುಣಿತ, ಗೌಳಿ ಸಮುದಾಯ ನೃತ್ಯದ ಜತೆಗೆ ಮೆರವಣಿಗೆ ನಡೆಸಲಾಯಿತು.

    ಹಾರ್ನ್​ಬಿಲ್ ಪಕ್ಷಿ ಕುರಿತು ತಾಂತ್ರಿಕ ಅಧಿವೇಶನದಲ್ಲಿ ಹಾರ್ನ್​ಬಿಲ್ ಪಕ್ಷಿ ಜೀವನದ ಬಗ್ಗೆ ಅವುಗಳ ಸಂರಕ್ಷಣೆಯ ಬಗ್ಗೆ ಹಾರ್ನ್​ಬಿಲ್ ಪಕ್ಷಿ-ಮಾನವ-ಕಾನೂನು, ಹಾರ್ನ್​ಬಿಲ್ ಮತ್ತು ಪ್ರವಾಸೋದ್ಯಮ ಕುರಿತು ನ್ಯಾಗಲ್ಯಾಂಡ್ ಹಾರ್ನ್​ಬಿಲ್ ಮತ್ತು ದಾಂಡೇಲಿ ಹಾರ್ನ್​ಬಿಲ್ ಎಂಬ ವಿಷಯದ ಮೇಲೆ ಪರಿಣತರು ವಿಷಯ ಮಂಡಿಸಿದರು. ರಾಜ್ಯ ಹಾಗೂ ಹೊರ ರಾಜ್ಯದಿಂದ 105ಕ್ಕೂ ಹೆಚ್ಚು ಶಿಬಿರಾರ್ಥಿಗಳು ಭಾಗವಹಿಸಿದ್ದರು. ಶಿಬಿರಾರ್ಥಿಗಳು ತಾಂತ್ರಿಕ ಅಧಿವೇಶನದ ನಂತರ ಪಕ್ಷಿ ವೀಕ್ಷಣೆ ಹಾಗೂ ಸಫಾರಿಯಲ್ಲಿ ಭಾಗವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts