ಗೋಕರ್ಣದಲ್ಲಿ ತಮ್ಮ ಆಪ್ತ ಮಿತ್ರನ ಹೆಸರಿನಲ್ಲಿ ಪೂಜೆ ಮಾಡಿಸಿದ ನಟ ರಿಷಬ್‌ ಶೆಟ್ಟಿ

Rishab-Shetty-at-Gokarna-
Published on

ಗೋಕರ್ಣ:ಖ್ಯಾತ ಚಿತ್ರ ನಿರ್ದೇಶಕ ಮತ್ತು ನಟ ರಿಷಭ ಶೆಟ್ಟಿ ಗುರುವಾರ ತಮ್ಮ ಕುಟುಂಬದವರೊಂದಿಗೆ ವಿವಿಧ ಧಾರ್ಮಿಕ ಕಾರ್ಯ ಕೈಗೊಂಡರು.ಅಮಾವಾಸ್ಯೆ ನಿಮಿತ್ತ ಇಲ್ಲಿನ ಕೋಟಿತೀರ್ಥ ಬಳಿಯ ದುರ್ಗಾಲಯದಲ್ಲಿ ಕ್ಷೇತ್ರ ಪುರೋಹಿತ ವೇ.ರಾಜಗೋಪಾಲ ಅಡಿ ಅವರ ನೇತೃತ್ವದಲ್ಲಿ ತಮ್ಮ ಪಿತೃ ಪ್ರೀತ್ಯರ್ಥವಾಗಿ ನಾರಾಯಣಬಲಿ,ಪಿಂಡಪ್ರದಾನ ಮತ್ತು ಶಾಸ್ತ್ರೋಕ್ತ ಶಾಂತಿಹೋಮಗಳನ್ನು ನೆರವೇರಿಸಿದರು.ಕರ್ಮಾಂಗದ ತರುವಾಯ ಇಲ್ಲಿನ ಪಶ್ಚಿಮ ಸಾಗರದಲ್ಲಿ ಪಿಂಡ ವಿಸರ್ಜನೆ ನೆರವೇರಿಸಿದರು.

ಪೂಜಾಭಿಷೇಕ:ಪಿತೃಕಾರ್ಯದ ನಂತರ ಪುರಾಣ ಪ್ರಸಿದ್ಧ ಮಂದಿರಕ್ಕೆ ಭೇಟಿಯಿತ್ತು ವಿಶೇಷ ಪೂಜೆ ಸಲ್ಲಿಸಿದರು.ಶ್ರೀಮಹಾಗಣಪತಿಗೆ ಪ್ರಥಮ ಪೂಜೆ ಕೈಗೊಂಡ ಅವರು ಶ್ರೀಮಹಾಬಲೇಶ್ವರ ದೇಗುಲದಲ್ಲಿ ಮಂದಿರದ ಪ್ರಧಾನ ಅರ್ಚಕ ರಾಜಗೋಪಾಲ ಅಡಿ ಮತ್ತು ಉಪಾಧಿವಂತರ ನೇತೃತ್ವದಲ್ಲಿ ಆತ್ಮಲಿಂಗಕ್ಕೆ ವೇದೋಕ್ತ ಪೂಜಾಭಿಷೇಕಗಳನ್ನು ಸಮರ್ಪಿಸಿದರು.ಅಲ್ಲಿಂದ ಶ್ರೀಪಾರ್ವತಿ ಮಂದಿರದಲ್ಲಿ ಮಹಾಮಂಗಳಾರತಿ ಮತ್ತು ಪ್ರಾರ್ಥನೆ ಮತ್ತು ಶಕ್ತಿಸನ್ನಿಧಾನ ಶ್ರೀರುದ್ರಕಾಳಿ ದೇವಾಲಯಕ್ಕೆ ಭೇಟಿಯಿತ್ತು ಅರ್ಚನೆ ಮಾಡಿದರು.

ಜನ್ಮದಿನ ಆಚರಣೆ:ಇದೇ ವೇಳೆ ಇಂದು ತಮ್ಮ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿರುವ ತಮ್ಮ ಆತ್ಮೀಯ ಮಿತ್ರ ರಕ್ಷಿತ ಶೆಟ್ಟಿ ಅವರ ಹೆಸರಿನಲ್ಲಿ ಪೂಜೆ ನಡೆಸುವ ಮೂಲಕ ಅವರ ಉತ್ತರೋತ್ತರ ಯಶೋಕೀರ್ತಿಗೆ ಪ್ರಾರ್ಥಿಸಿ ಅವರ ಹುಟ್ಟುಹಬ್ಬಕ್ಕೆ ಶುಭ ಕೋರಿದರು. ಇಲ್ಲಿನ ಪುಣ್ಯಾಶ್ರಮಕ್ಕೆ ಭೇಟಿಯಿತ್ತ ಅವರು ವೈದಿಕ ಆರಾಧನೆ ಮತ್ತು ಸಂತರ್ಪಣೆ ಮಾಡಿ ಕ್ಷೇತ್ರ ವಿಧಿಯನ್ನು ಸಂಪನ್ನಗೊಳಿಸಿದರು.

ಈ ವೇಳೆ ಮಾತನಾಡಿದ ರಿಷಭ ಶೆಟ್ಟಿ ಸಿದ್ಧಿಕ್ಷೇತ್ರವಾದ ಗೋಕರ್ಣಕ್ಕೆ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಮಧ್ಯೆ ಕ್ಷೇತ್ರವಿಧಿ ಮತ್ತು ಪಿತೃಕಾರ್ಯಗಳನ್ನು ನಡೆಸುವ ಬಗ್ಗೆ ಹಲವು ತಲೆಮಾರಿನ ಅವಿನಾ ಸಂಬಂಧವಿದೆ.ಪರಂಪರೆಯಿಂದ ಅನೂಚಾನವಾಗಿ ಮುಂದುವರಿದು ಬಂದಿರುವ ಈ ಅನ್ಯೋನ್ಯತೆಯನ್ನು ಇವತ್ತಿಗೂ ಗೋಕರ್ಣದ ಕ್ಷೇತ್ರ ಪುರೋಹಿತರು ಶ್ರೇಷ್ಠ ರೀತಿಯಲ್ಲಿ ಮುನ್ನಡೆಸುತ್ತಿರುವುದು ಒಂದು ಸಾರ್ವಕಾಲಿಕ ದಾಖಲೆಯಾಗಿದೆ ಎಂದರು.ಬೆಳಗಿನಿAದ ನಾನಾ ಕರ್ಮಾಂಗ ಪೂಜಾವಿಧಿಗಳಲ್ಲಿ ಭಾಗಿಗಳಾದ ಅವರು ಸಂಜೆ ಇಲ್ಲಿಂದ ತೆರಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net