

ರಾಮನಗರ: ರೇಣುಕಸ್ವಾಮಿ ಹತ್ಯೆ ಪ್ರಕರಣದಲ್ಲಿ (Renukaswamy Murder Case) ಜೈಲು ಸೇರಿರುವ ನಟ ದರ್ಶನ್ (Darshan) ಜಾಮೀನು ಕೋರಿ ಕೋರ್ಟ್ ಮೊರೆ ಹೋಗಿದ್ದು, ಸೆಪ್ಟೆಂಬರ್ 30ರಂದು ಅರ್ಜಿ ವಿಚಾರಣೆ ನಡೆಯಲಿದೆ. ನಿಜಜೀವನದಲ್ಲಿ ಮಾದರಿಯಾಗಬೇಕಿದ್ದ ಸ್ಟಾರ್ ನಟನೊಬ್ಬನ ಈ ಕರಾಳ ಕೃತ್ಯ ಪರ-ವಿರೋಧದ ಚರ್ಚೆಗೆ ಆಸ್ಪದ ಮಾಡಿಕೊಟ್ಟಿದ್ದು, ಹಲವರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಆದರೆ ದರ್ಶನ್ ಫ್ಯಾನ್ಸ್ ಮಾತ್ರ ತಮ್ಮ ನೆಚ್ಚಿನ ನಟ ಯಾವುದೇ ತಪ್ಪನ್ನು ಮಾಡಿಲ್ಲ ಎಂದು ಬೆಂಬಲಕ್ಕೆ ನಿಂತಿದ್ದು, ಹತ್ಯೆ ಪ್ರಕರಣವನ್ನು ಖಂಡಿಸಿದಂತಹ ನಟ-ನಟಿಯರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡುವುದು ಚಾಲ್ತಿಯಲ್ಲಿದೆ. ಆದರೆ, ಇದೀಗ ಕೊಲೆ ಮಾಡುವ ಹಂತಕ್ಕೆ ತಲುಪಿದ್ದು, ನಟನ ಹೆಸರಿಗೆ ಮತ್ತೊಂದು ಕಳಂಕ ಅಂಟಿಕೊಂಡಂತಾಗಿದೆ.
ಇದೀಗ ದರ್ಶನ್ ಹೆಸರು ಜೋರಾಗಿ ಕೂಗುವ ವಿಚಾರವಾಗಿ ಗಲಾಟೆ ನಡೆದು ವ್ಯಕ್ತಿಯ ಕುತ್ತಿಗೆಗೆ ಚಾಕುವಿನಿಂದ ಇರಿದಿರುವ ಘಟನೆ ರಾಮನಗರ ಜಿಲ್ಲೆ ಕುಂಬಳಗೋಡು ಪೊಲೀಸ್ ಠಾಣೆ ವ್ಯಾಪ್ತಿಯ ಸೂಲಿಕೆರೆ ಪಾಳ್ಯ ಗ್ರಾಮದಲ್ಲಿ ನಡೆದಿದೆ. ಗಾಯಾಳುವನ್ನು ವೆಂಟಸ್ವಾಮಿ ಎಂದು ಗುರುತಿಸಲಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ರಾಮನಗರ ತಾಲ್ಲೂಕಿನ ದೊಡ್ಡಮಣ್ಣುಗುಡ್ಡೆ ಗ್ರಾಮದ ಕಟ್ಟಡದ ಮೇಸ್ತ್ರಿ ಸುರೇಶ್ ಎಂಬುವವರು ಸೂಲಿಕೆರೆ ಎಂಬಲ್ಲಿ ಮನೆ ನಿರ್ಮಾಣದ ಕೆಲಸಕ್ಕೆ ವೆಂಕಟಸ್ವಾಮಿ ಕರೆದುಕೊಂಡು ಬಂದಿದ್ದರು. ಕೆಲಸ ನಡೆಯುವ ಜಾಗದಲ್ಲೇ ಸಣ್ಣದೊಂದು ಶೆಡ್ ನಿರ್ಮಾಣ ಮಾಡಿಕೊಂಡು ಅಲ್ಲಿಯೇ ವಾಸವಿದ್ದರು. ಹೀಗಿರುವಾಗ ಗುರುವಾರ ರಾತ್ರಿ ವೆಂಕಟಸ್ವಾಮಿ ಹಾಗೂ ಇತರರು ವಾಸವಿರುವ ಶೆಡ್ ಬಳಿ ಬಂದ ಮೂವರು ದರ್ಶನ್ ಬಗ್ಗೆ ಮಾತನಾಡುತ್ತ ಜೋರಾಗಿ ಡಿ ಬಾಸ್ ಎಂದು ಘೋಷಣಗಳನ್ನು ಕೂಗಲು ಶುರು ಮಾಡಿದ್ದಾರೆ.
ಆರೋಪಿಗಳು ಘೋಷಣೆ ಕೂಗಿದ್ದರಿಂದ ಶೆಡ್ನಲ್ಲಿ ಮಲಗಿದ್ದ ವೆಂಕಟಸ್ವಾಮಿ ಅಕ್ಕಪಕ್ಕ ಮನೆಗಳಿಗೆ ದಯವಿಟ್ಟು ಕೂಗಬೇಡಿ ಎಂದು ಹೇಳಿದ್ದಾರೆ. ಇದರಿಂದ ಕುಪಿತಗೊಂಡ ಆರೋಪಿ ಕಿರಣ್ ಎಂಬಾತ ನಮ್ಮ ಡಿಬಾಸ್ ಬಗ್ಗೆ ನಿನಗೆ ಏನ್ ಗೊತ್ತು ಎಂದು ಗಲಾಟೆ ತೆಗೆದಿದ್ದು, ವೆಂಕಟಸ್ವಾಮಿಯ ಕತ್ತು ಕೊಯ್ದಿದ್ದಾನೆ. ಇದಲ್ಲದೆ ಆರೋಪಿ ಕಿರಣ್ ಜೊತೆಗಿದ್ದ ಮಹದೇವ ಎಂಬಾತನು ಕೂಡ ಮಹದೇವಸ್ವಾಮಿ ಮೇಲೆ ಹಲ್ಲೆ ನಡೆಸಿದ್ದು, ಅಕ್ಕಪಕ್ಕದವರು ಬಂದು ಕೂಡಲೇ ಬಂದು ವೆಂಕಟಸ್ವಾಮಿ ಅವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಘಟನೆ ಸಂಬಂಧ ವೆಂಕಟಸ್ವಾಮಿ ಅವರ ಪತ್ನಿ ಘಟನೆ ಕುರಿತು ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ದೂರು ದಾಖಲಾಗುತ್ತಿದ್ದಂತೆ ಆರೋಪಿಗಳಾದ ಕಿರಣ್ ಹಾಗೂ ಮಹದೇವ ತಲೆಮಾರಿಸಿಕೊಂಡಿದ್ದಾರೆ. ಆರೋಪಿಗಳ ಬಂಧನಕ್ಕೆ ಬಲೆ ಬೀಸಿರುವ ಪೊಲೀಸರು ಶೀಘ್ರದಲ್ಲೇ ಬಂದಿಸುವ ಭರವಸೆ ನೀಡಿದ್ದಾರೆ.