

ದೇವದುರ್ಗ: ನಗರ ಸೇರಿ ಗ್ರಾಮೀಣ ಭಾಗದ ಮಕ್ಕಳ ಲಾಲನೆ ಪಾಲನೆ ಜತೆ ಶಿಕ್ಷಣ ನೀಡುವ ಅಂಗನವಾಡಿ ಕಾರ್ಯಕರ್ತೆಯರ ಕಾರ್ಯ ಶ್ಲಾಘನೀಯ ಎಂದು ಹಿರೇಬೂದೂರು ಗ್ರಾಪಂ ಅಧ್ಯಕ್ಷ ಬೂದೆಪ್ಪ ಕ್ಯಾದಗಿ ಹೇಳಿದರು.
ಇದನ್ನೂ ಓದಿ: ಆಶಾ ಕಾರ್ಯಕರ್ತೆಯರ ಕಾರ್ಯ ಶ್ಲಾಘನೀಯ
ತಾಲೂಕಿನ ಹದ್ದಿನಾಳ ಗ್ರಾಮದಲ್ಲಿ ನರೇಗಾ ಯೋಜನೆಡಿ ನಿರ್ಮಾಣಗೊಂಡ ಅಂಗನವಾಡಿ ಕಟ್ಟಡವನ್ನು ಉದ್ಘಾಟಿಸಿ ಸೋಮವಾರ ಮಾತನಾಡಿದರು. ಸರ್ಕಾರದ ಪ್ರತಿಯೊಂದು ಯೋಜನೆಯ ಯಶಸ್ವಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಪಾತ್ರ ಹಿರಿದಾಗಿದೆ.
ಮಕ್ಕಳು ಹಾಗೂ ಗರ್ಭಿಣಿ, ತಾಯಂದಿರಲ್ಲಿ ಅಪೌಷ್ಟಿಕತೆ, ಕಡಿಮೆ ತೂಕ ಸೇರಿ ವಿವಿಧ ರೋಗಗಳು ಬಾರದಂತೆ ತಡೆಯುವಲ್ಲಿ ಯಶ್ವಸ್ವಿಯಾಗಿದ್ದಾರೆ. ಪೌಷ್ಟಿಕ ಆಹಾರಧಾನ್ಯ ಸಮರ್ಪಕವಾಗಿ ವಿತರಣೆ ಮಾಡುತ್ತಿದ್ದಾರೆ ಎಂದರು.
ಕೇಂದ್ರಕ್ಕೆ ಆಗಮಿಸುವ ಗರ್ಭಿಣಿ ಹಾಗೂ ತಾಯಂದಿರ ಕಷ್ಟ ಸುಖ ಕೇಳುವ ಜತೆಗೆ ಅವರಿಗೆ ಆಹಾರದೊಂದಿಗೆ ಆತ್ಮವಿಶ್ವಾಸ ತುಂಬವಂಥ ಕೆಲಸ ಕಾರ್ಯಕರ್ತೆಯರು ಮಾಡುತ್ತಿದ್ದಾರೆ.
ಸರ್ಕಾರ ಇವರ ಬೇಡಿಕೆಗಳಿಗೆ ಸ್ಪಂದಿಸುವ ಮೂಲಕ ಅಂಗನವಾಡಿ ಕೇಂದ್ರಗಳ ಬಲವರ್ಧನೆಗೆ ಯೋಜನೆ ರೂಪಿಸಬೇಕು ಎಂದು ಒತ್ತಾಯಿಸಿದರು.
ಭೂಧಾನಿ, ನಿವೃತ್ತ ಉಪನ್ಯಾಸಕ ಎಂ.ಶೇಖರಪ್ಪಗೌಡ, ಗ್ರಾಪಂ ಸದಸ್ಯರಾದ ಬಂದಪ್ಪಗೌಡ, ಪಿಡಿಒ ಫಯಾಜ್ ಅಲಿ, ಕಾರ್ಯಕರ್ತೆ ಮೀರಾ ಇದ್ದರು.