More

    ಆಶಾ ಕಾರ್ಯಕರ್ತೆಯರ ಕಾರ್ಯ ಶ್ಲಾಘನೀಯ

    ಗದಗ: ಕರೊನಾ ನಿಯಂತ್ರಣಕ್ಕಾಗಿ ಆಶಾ ಕಾರ್ಯಕರ್ತೆಯರು ಹಗಲಿರುಳು ಶ್ರಮಿಸುತ್ತಿದ್ದಾರೆ. ರಾಜ್ಯದಲ್ಲಿ ಒಟ್ಟು 42 ಸಾವಿರ ಆಶಾ ಕಾರ್ಯಕರ್ತೆಯರಿದ್ದು, ಅವರೆಲ್ಲರಿಗೂ ಸಹಕಾರ ಇಲಾಖೆಯ ವತಿಯಿಂದ ತಲಾ 3 ಸಾವಿರ ರೂ. ಪ್ರೋತ್ಸಾಹ ಧನ ವಿತರಿಸಲಾಗುತ್ತಿದೆ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ ಹೇಳಿದರು.

    ನಗರದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಸಹಕಾರ ಇಲಾಖೆ, ಜಿಲ್ಲಾ ಸಹಕಾರ ಯೂನಿಯನ್, ಕೆ.ಸಿ.ಸಿ ಬ್ಯಾಕ್, ದಾರವಾಡ ಹಾಲು ಒಕ್ಕೂಟ, ಕಾಸ್ಕಾರ್ಡ್ ಬ್ಯಾಂಕ್, ಜಿಲ್ಲೆಯ ವಿವಿಧ ಸಹಕಾರ ಸಂಘಗಳ ಆಶ್ರಯದಲ್ಲಿ ಶನಿವಾರ ಆಯೋಜಿಸಿದ್ದ ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹಧನದ ಚೆಕ್ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

    ಆಶಾ ಕಾರ್ಯಕರ್ತೆಯರು ಕರೊನಾ ವೈರಾಣು ಕುರಿತು ಪ್ರತಿ ಮನೆ ಮನೆಗೆ ತೆರಳಿ ಜಾಗೃತಿ ಮೂಡಿಸುತ್ತಿದ್ದು, ಅವರ ಕಾರ್ಯ ಶ್ಲಾಘನೀಯವಾಗಿದೆ. ಕೋವಿಡ್-19 ನಿಯಂತ್ರಣ ಕಾರ್ಯದಲ್ಲಿ ತೊಡಗಿಸಿಕೊಳ್ಳುವುದರೊಂದಿಗೆ ತಮ್ಮ ಆರೋಗ್ಯದ ಕಡೆಗೂ ಗಮನ ನೀಡಬೇಕು ಎಂದು ಸಲಹೆ ನೀಡಿದರು.

    ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಎಚ್.ಕೆ. ಪಾಟೀಲ, ಕೋವಿಡ್-19 ಸೋಂಕು ನಿಯಂತ್ರಣದಲ್ಲಿ ಶ್ರಮಿಸುತ್ತಿರುವ ಆಶಾ ಕಾರ್ಯಕರ್ತೆಯರನ್ನು ಗುರುತಿಸಿ ಪ್ರತಿಯೊಬ್ಬರಿಗೂ ತಲಾ 3 ಸಾವಿರ ಪ್ರೋತ್ಸಾಹಧನ ನೀಡುತ್ತಿರುವುದು ಶ್ಲಾಘನೀಯ ಎಂದರು.

    ರಾಜ್ಯದ ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಗದಗ ಜಿಲ್ಲೆಯಲ್ಲಿ ಕೊವಿಡ್-19 ನಿಯಂತ್ರಣದಲ್ಲಿದೆ. ಕರೊನಾ ನಿಯಂತ್ರಣಕ್ಕಾಗಿ ಶ್ರಮಿಸಿದ ಜಿಲ್ಲಾಡಳಿತದ ಕಾರ್ಯವೈಖರಿ ಶ್ಲಾಘನೀಯ ಎಂದರು.

    ಶಾಸಕ ರಾಮಣ್ಣ ಲಮಾಣಿ, ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ, ಜಿಪಂ ಅಧ್ಯಕ್ಷ ರಾಜೂಗೌಡ ಕೆಂಚನಗೌಡ್ರ, ಜಿ.ಪಂ. ಉಪಾಧ್ಯಕ್ಷೆ ಮಲ್ಲವ್ವ ಬಿಚ್ಚೂರ, ಕೆಸಿಸಿ ಬ್ಯಾಂಕ್ ಅಧ್ಯಕ್ಷ ಬಾಪುಗೌಡ ಪಾಟೀಲ, ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಶಿವಕುಮಾರಗೌಡ ಪಾಟೀಲ, ರಾಜ್ಯ ಸಹಕಾರ ಗ್ರಾಹಕರ ಮಹಾಮಂಡಳ ಅಧ್ಯಕ್ಷ ಜಿ.ಪಿ. ಪಾಟೀಲ, ಕೆ.ಎಂ.ಎಫ್ ಅಧ್ಯಕ್ಷ ಬಸವರಾಜ ಅರಬಗೊಂಡ, ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಆನಂದ್.ಕೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್, ಡಿಎಚ್​ಒ ಡಾ. ಸತೀಶ ಬಸರಿಗಿಡದ ಉಪಸ್ಥಿತರಿದ್ದರು.

    ಶೂನ್ಯ ಬಡ್ಡಿ ದರದಲ್ಲಿ ಸಾಲ: ಶೂನ್ಯ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ನೀಡುವ ಬಗ್ಗೆ ಆಶಾ ಕಾರ್ಯಕರ್ತೆಯರಿಂದ ಜಿಲ್ಲಾವಾರು ಅಭಿಪ್ರಾಯ ಪಡೆಯಲಾಗುತ್ತಿದೆ. ಮುಂದಿನ ದಿನಗಳಲ್ಲಿ ಆಶಾ ಕಾರ್ಯಕರ್ತೆಯರಿಗೆ ಆರ್ಥಿಕ ನೆರವು ನೀಡುವ ಬಗ್ಗೆ ರ್ಚಚಿಸಲಾಗುತ್ತದೆ ಎಂದು ಸಚಿವ ಎಸ್.ಟಿ. ಸೋಮಶೇಖರ್ ಹೇಳಿದರು.

    ಎಚ್.ವಿಶ್ವನಾಥ ಅನಾಥರಲ್ಲ

    ಗದಗ: ಮಾಜಿ ಸಚಿವ ಎಚ್.ವಿಶ್ವನಾಥ ಅನಾಥರಲ್ಲ. ಅನಾಥರಾಗಿದ್ದಾರೆ ಎಂದು ಹೇಳಿದವರಾರು? ಮುಖ್ಯಮಂತ್ರಿ ಯಡಿಯೂರಪ್ಪ ಅವರು ನುಡಿದಂತೆ ನಡೆಯುತ್ತಾರೆ. ಮುಂದಿನ ದಿನಗಳಲ್ಲಿ ಅವರಿಗೂ ಅವಕಾಶ ಸಿಗಲಿದೆ ಎಂಬ ವಿಶ್ವಾಸವಿದೆ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ ಹೇಳಿದರು.

    ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಶ್ವನಾಥ ನಮ್ಮ ಜತೆಯಲ್ಲಿ ಇದ್ದಾರೆ. ಬಿಜೆಪಿ ಸೇರ್ಪಡೆಗೊಂಡವರಿಗೆ ಹಂತಹಂತವಾಗಿ ಅವಕಾಶ ನೀಡುವುದು ಖಚಿತ ಎಂದರು.

    ಬಿಜೆಪಿ ಸೇರ್ಪಡೆಗೊಂಡ 15 ಜನರ ಪೈಕಿ 10 ಜನರಿಗೆ ಈಗಾಗಲೇ ಅವಕಾಶ ಸಿಕ್ಕಿದೆ. ಇದೀಗ ಎಂಟಿಬಿ ನಾಗರಾಜ್, ಆರ್.ಶಂಕರ್ ಅವರಿಗೆ ಅವಕಾಶ ಮಾಡಿಕೊಡಲಾಗಿದೆ. ಮುನಿರತ್ನ, ಪ್ರತಾಪಗೌಡ ಮತ್ತು ಎಚ್.ವಿಶ್ವನಾಥ ಅವರಿಗೂ ಸ್ಥಾನಮಾನ ಸಿಗಲಿದೆ ಎಂದರು.

    ವಿಶ್ವನಾಥ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಅವರು ಭರವಸೆ ನೀಡಿದ್ದು, ಇದಕ್ಕೆ ವಿಶ್ವನಾಥ ಸಹ ಒಪ್ಪಿಗೆ ಸೂಚಿಸಿದ್ದಾರೆ ಎಂದು ಅವರು ವಿವರಿಸಿದರು.

    ಮಾಜಿ ಸಿಎಂಗಳಾದ ಸಿದ್ದರಾಮಯ್ಯ, ಕುಮಾರಸ್ವಾಮಿ ಅವರಿಂದ ಅವಕಾಶ ತಪ್ಪಿತು ಎಂದು ವಿಶ್ವನಾಥ ಮಾಡಿರುವ ಆರೋಪ ಅವರ ವೈಯಕ್ತಿಕ ಹೇಳಿಕೆಯಾಗಿದೆ. ಬಿಜೆಪಿ ಸರ್ಕಾರ ವಿಶ್ವನಾಥ ಅವರ ಜತೆಗಿರುತ್ತದೆ ಎಂದು ಅವರು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts