

ಹನೂರು: ಅರಬಗೆರೆ ಗ್ರಾಮದ ಪ್ರತಿ ಬಡಾವಣೆಗೂ ಮುಂದಿನ ದಿನಗಳಲ್ಲಿ ಸಿ.ಸಿ.ರಸ್ತೆ, ಚರಂಡಿ ಸೇರಿದಂತೆ ಇನ್ನಿತರ ಅಗತ್ಯ ಮೂಲ ಸೌಕರ್ಯ ಒದಗಿಸಲು ಕ್ರಮ ವಹಿಸುವುದಾಗಿ ಶಾಸಕ ಎಂ.ಆರ್.ಮಂಜುನಾಥ್ ಭರವಸೆ ನೀಡಿದರು.
ತಾಲೂಕಿನ ಅರಬಗೆರೆ ಗ್ರಾಮದಲ್ಲಿ ಭಾನುವಾರ ಆಯೋಜಿಸಿದ್ದ ಸಭೆಯಲ್ಲಿ ಗ್ರಾಮಸ್ಥ ಸಮಸ್ಯೆ ಆಲಿಸಿ ಮಾತನಾಡಿದ ಅವರು, ಗ್ರಾಮದಲ್ಲಿ ಜನರು ಹಲವು ದಶಕದಿಂದಲೂ ವಾಸಿಸುತ್ತಿದ್ದರೂ ಅಗತ್ಯ ಮೂಲ ಸೌಕರ್ಯಗಳಿಲ್ಲದಿರುವುದು ಗಮನಕ್ಕೆ ಬಂದಿದೆ. ಹಾಗಾಗಿ ಈ ಸೌಕರ್ಯಗಳನ್ನು ಒದಗಿಸುವುದು ನನ್ನ ಆದ್ಯ ಕರ್ತವ್ಯ. ಈ ನಿಟ್ಟಿನಲ್ಲಿ ಅಗತ್ಯ ಮುತುವರ್ಜಿ ವಹಿಸಿ ಸಿ.ಸಿ.ರಸ್ತೆ, ಚರಂಡಿ ಹಾಗೂ ಇನ್ನಿತರ ಅಗತ್ಯ ಮೂಲ ಸೌಕರ್ಯವನ್ನು ಒದಗಿಸಲಾಗುವುದು. ಸಮರ್ಪಕ ಬಸ್ ಸೌಕರ್ಯ ಒದಗಿಸುವ ಸಂಬಂಧ ಅಧಿಕಾರಿಗಳಿಗೆ ಸೂಚಿಸಲಾಗುವುದು. ಅಲ್ಲದೇ ಮುಂದಿನ ದಿನಗಳಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಅನುದಾನ ನೀಡುವುದಾಗಿ ಭರವಸೆ ನೀಡಿದರು, ಇದಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದರು.
ಗ್ರಾಮಸ್ಥರಿಂದ ಮನವಿ: ಇದಕ್ಕೂ ಮೊದಲು ಗ್ರಾಮಸ್ಥರು ಮಾತನಾಡಿ, ಗ್ರಾಮವು ಕಾಡಂಚಿನಲ್ಲಿದ್ದು, ಹೆಚ್ಚು ಬಡ ವರ್ಗದ ಜನರು ಹಲವು ದಶಕದಿಂದಲೂ ವಾಸಿಸುತ್ತಿದ್ದೇವೆ. ಆದರೆ ಸಮರ್ಪಕ ರಸ್ತೆ, ಚರಂಡಿ ಇಲ್ಲ. ಇದರಿಂದ ಮಳೆ ಬಂದ ವೇಳೆ ತುಂಬಾ ತೊಂದರೆ ಎದುರಿಸುವುದು ಒಂದೆಡೆಯಾದರೆ, ಕೊಳಚೆ ನೀರು ರಸ್ತೆಯಲ್ಲಿ ಹರಿಯುತ್ತದೆ. ಇದರಿಂದ ರೋಗ ರುಜಿನಗಳ ಭೀತಿ ನಮ್ಮನ್ನು ಆವರಿಸಿದೆ. ಆದ್ದರಿಂದ ಸಿ.ಸಿ.ರಸ್ತೆ, ಚರಂಡಿ ನಿರ್ಮಿಸಿ ಕೊಡಬೇಕು. ಜತೆಗೆ ಸಭೆ, ಸಮಾರಂಭ ಹಾಗೂ ಇನ್ನಿತರ ಕಾರ್ಯ ಚಟುವಟಿಕೆ ಕೈಗೊಳ್ಳಲು ಸಮುದಾಯಕ್ಕೆ ಯಾವುದೇ ಪ್ರತ್ಯೇಕ ಕಟ್ಟಡ ಇಲ್ಲ. ಇದರಿಂದ ತುಂಬಾ ತೊಂದರೆ ಅನುಭವಿಸುತ್ತಿದ್ದೇವೆ. ಆದ್ದರಿಂದ ಡಾ.ಬಾಬು ಜಗಜೀವನ ರಾಮ್ ಸಮುದಾಯ ಭವನ ನಿರ್ಮಿಸಿಕೊಡಬೇಕು. ಅಲ್ಲದೇ ಸಮರ್ಪಕ ಬಸ್ ಸೌಕರ್ಯ ಒದಗಿಸುವಂತೆ ಮನವಿ ಮಾಡಿದರು.
ರಿಪೇರಿಗೆ ಕ್ರಮವಹಿಸಿ: ಬಳಿಕ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದ ಶಾಸಕರು, ಶಾಲಾ ಕೊಠಡಿ ಛಾವಣಿ, ಅಡುಗೆ ಕೊಠಡಿ, ಕುಡಿಯುವ ನೀರು ಪೂರೈಕೆಯಾಗುವ ಟ್ಯಾಂಕ್ ಹಾಗೂ ಶೌಚಗೃಹಗಳು ದುರಸ್ತಿಯಾಗಿರುವುದು ಗಮನಕ್ಕೆ ಬಂತು. ಈ ಬಗ್ಗೆ ಅಗತ್ಯ ಕ್ರಮ ಕೈಗೊಂಡು ಶೀಘ್ರವೇ ರಿಪೇರಿ ಪಡಿಸುವ ಕೆಲಸವಾಗಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಗ್ರಾಪಂ ಉಪಾಧ್ಯಕ್ಷ ಸಿದ್ದರಾಜು, ಮುಖಂಡರಾದ ಪರಶಿವ, ಗೋವಿಂದ, ಮುತ್ತುರಾಜೇಗೌಡ, ರಾಜು, ಚಿನ್ನವೆಂಕಟ, ಮಂಜೇಶ್‌ಗೌಡ, ತಂಗವೇಲು, ಗೋಪಾಲ್‌ನಾಯ್ಕ, ಲಿಂಗರಾಜು, ಮಹಾದೇವ, ವೆಂಕಟೇಶ್ ಮತ್ತಿತರರಿದ್ದರು.