

ನಂಜನಗೂಡು: ನಗರದೆಲ್ಲೆಡೆ ಅಕ್ರಮ ಗಾಂಜಾ ಮತ್ತು ಡ್ರಗ್ಸ್ ಚಟುವಟಿಕೆಗೆ ಕಡಿವಾಣ ಹಾಕಲಾಗುವುದು ಎಂದು ಶಾಸಕ ದರ್ಶನ್ ಧ್ರುವ ನಾರಾಯಣ್ ಭರವಸೆ ನೀಡಿದರು.
ನಗರಸಭೆ ಆವರಣದಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಡ್ರಗ್ಸ್, ಗಾಂಜಾ ತಡೆಗಟ್ಟುವುದು ಪೊಲೀಸರ ಕೆಲಸ ಮಾತ್ರವಲ್ಲ. ನಗರ ಸಭೆಯ ಸದಸ್ಯರು ತಮ್ಮ ತಮ್ಮ ವಾರ್ಡ್‌ಗಳಲ್ಲಿ ಅಕ್ರಮ ಚಟುವಟಿಕೆಗಳು ಕಂಡುಬಂದಲ್ಲಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಬೇಕು. ಹಾಗಾದಾಗ ಮಾತ್ರ ಕಡಿವಾಣ ಹಾಕಲು ಸಾಧ್ಯ. ಈ ಬಗ್ಗೆ ಪೊಲೀಸರಿಗೂ ಸೂಚನೆ ನೀಡಿದ್ದೇನೆ ಎಂದರು.
ಪ್ರತಿ ವಾರ್ಡ್‌ನಲ್ಲಿ ಕ್ಯೂಆರ್ ಕೋಡ್ ಸ್ಕ್ಯಾನ್ ಅಳವಡಿಸಲಾಗುತ್ತದೆ. ಆಯಾ ವಾರ್ಡಿನ ಜನರು ಸಮಸ್ಯೆಗಳನ್ನು ತಿಳಿಸಲು ಸ್ಕ್ಯಾನ್ ಮೂಲಕ ದೂರು ನೀಡಬಹುದಾಗಿದೆ. ಯಾರೇ ದೂರು ನೀಡಿದರೂ ಅಲ್ಲಿ ಅದು ಮಾಹಿತಿ ಲಭ್ಯವಾಗುತ್ತದೆ. ಸಂಬಂಧಪಟ್ಟ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸಮಸ್ಯೆಗಳನ್ನು ಬಗೆಹರಿಸಲು ಅನುಕೂಲವಾಗುತ್ತದೆ ಎಂದರು.
ಈಗಾಗಲೇ ನಗರದಲ್ಲಿ ಪ್ರತ್ಯೇಕವಾಗಿ ಆಹಾರ ವಲಯ ನಿರ್ಮಿಸಲಾಗಿದೆ. ಪ್ರಾರಂಭದಲ್ಲಿ ಈ ಬಗ್ಗೆ ಸ್ವಲ್ಪ ಗೊಂದಲವಿತ್ತು. ವ್ಯಾಪಾರ ವಹಿವಾಟು ಆಗುವುದಿಲ್ಲ ಎಂಬ ಭಯ ಆವರಿಸಿತ್ತು. ಆದರೆ ಈಗ ಈ ಸಮಸ್ಯೆ ತಪ್ಪಿದ್ದು ವ್ಯಾಪಾರ ವಹಿವಾಟು ಚೆನ್ನಾಗಿ ನಡೆಯುತ್ತಿದೆ. ಇದೇ ರೀತಿ ಹಣ್ಣು ತರಕಾರಿ ಮಾರಾಟ ಮಾಡಲು ತಳ್ಳುವ ಗಾಡಿಗಳಿಗೂ ಪ್ರತ್ಯೇಕವಾಗಿ ಒಂದು ಸ್ಥಳ ನಿಗದಿ ಪಡಿಸುವ ಯೋಚನೆಯಲ್ಲಿದ್ದೇವೆ. ಶೀಘ್ರದಲ್ಲೇ ಇದು ಕೂಡ ಬಗೆಹರಿಯುತ್ತದೆ. ಜತೆಗೆ ಆಹಾರ ವಲಯಕ್ಕೆ ನಟ ಪುನೀತ್ ರಾಜಕುಮಾರ್ ಹೆಸರು ಇಡಲು ಚಿಂತನೆ ನಡೆಸಲಾಗಿದೆ ಎಂದರು.
ಆರ್‌ಪಿ ರಸ್ತೆ ಹಾಗೂ ಮಹಾತ್ಮ ಗಾಂಧಿ ರಸ್ತೆಗಳಲ್ಲಿ ಉಂಟಾಗುತ್ತಿದ್ದ ಸಂಚಾರ ಸಮಸ್ಯೆ ಬಗ್ಗೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಇನ್ನು ಅನೇಕ ಕಡೆಗಳಲ್ಲಿ ಸಮಸ್ಯೆ ಇದ್ದು ಮುಂದಿನ ದಿನಗಳಲ್ಲಿ ಅಲ್ಲಿಯೂ ಸಮಸ್ಯೆ ಬಗೆಹರಿಸಲು ಸೂಚಿಸಲಾಗಿದೆ. ನಗರದ ಅಭಿವೃದ್ಧಿಗಾಗಿ ಸರ್ಕಾರದಿಂದ ಮತ್ತಷ್ಟು ಅನುದಾನ ತಂದು ಅಭಿವೃದ್ಧಿ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಯುಜಿಡಿ ಸಮಸ್ಯೆಗೆ ಪರಿಹಾರ ಎಂದು?
ನಗರದಲ್ಲಿ ಯಾವಾಗಲೂ ಪ್ರತಿಧ್ವನಿಸುವ ಸಮಸ್ಯೆ ಎಂದರೆ ಯುಜಿಡಿ ಸಮಸ್ಯೆ. ನಗರದ ಅಶೋಕಪುರಂ ಬಡಾವಣೆಯಲ್ಲಿ ಯುಜಿಡಿ ಸಮಸ್ಯೆ ಇದೆ. ಈ ಬಗ್ಗೆ ಅಧಿಕಾರಿಗಳು ಗಮನ ಹರಿಸುತ್ತಿಲ್ಲ ಎಂದು ಸದಸ್ಯರು ದೂರಿದರು. ಕೈಗಾರಿಕಾ ಪ್ರದೇಶದಲ್ಲಿ ಹೊರ ರಾಜ್ಯದಿಂದ ಬರುವ ಕಾರ್ಮಿಕರು ಡ್ರಗ್ಸ್, ಗಾಂಜಾ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ. ಬಸವನಗುಡಿ ಬಡಾವಣೆ ಮುಡಾ ವ್ಯಾಪ್ತಿಗೆ ಸೇರಿಸಲಾಗಿದ್ದು, ಇಲ್ಲಿಗೆ ಯಾವುದೇ ಸೌಲಭ್ಯಗಳು ದೊರಕುತ್ತಿಲ್ಲ. ಇಲ್ಲಿಂದ ನಗರಸಭೆಗೆ ಯಾವುದೇ ಆದಾಯವು ಬರುತ್ತಿಲ್ಲ ಎಂದು ದೂರಿದರು. ಭಾರ್ಗವಿ ಚಿತ್ರಮಂದಿರದ ಬಳಿ ಇರುವ ಮಟನ್ ಮಾರ್ಕೆಟ್ ಸ್ಥಳವನ್ನು ಸಸ್ಯಕಾಸಿ ಬಳಿ ನಿರ್ಮಾಣ ಮಾಡಿರುವ ಕಟ್ಟಡಕ್ಕೆ ವರ್ಗಾವಣೆ ಮಾಡಬೇಕೆಂದು ಹಲವು ಸದಸ್ಯರು ತಿಳಿಸಿದರು.
ರೈಲ್ವೆ ಕೆಳ ಸೇತುವೆಯ ರಸ್ತೆ ಪ್ರತಿ ಮೂರು ತಿಂಗಳಿಗೊಮ್ಮೆ ಕಿತ್ತು ಬರುತ್ತಿದ್ದು ಸಮಸ್ಯೆ ಉದ್ಭವವಾಗದಂತೆ ಗಮನ ಹರಿಸಬೇಕು ಎಂದರು. ದೇವಸ್ಥಾನದ ಸುತ್ತಲಿನ ಪ್ರದೇಶದಲ್ಲಿ ರಸ್ತೆ ಕಿರಿದಾಗಿದ್ದರೂ ಪಾರ್ಕಿಂಗ್‌ಗೆ ಅವಕಾಶ ನೀಡಲಾಗಿದೆ. ಕೂಡಲೇ ಇದನ್ನ ತೆರವುಗೊಳಿಸುವಂತೆ ಸದಸ್ಯರು ಮನವಿ ಮಾಡಿದರು. ನಂಜನಗೂಡಿನ ರಸ್ತೆಯೊಂದಕ್ಕೆ ಮಾಜಿ ಸಚಿವ ಎಂ.ಮಹದೇವ ಹೆಸರು ನಾಮಕರಣ ಮಾಡಬೇಕು, ನಗರದಲ್ಲಿ ನಾಯಿಗಳ ಹಾವಳಿಗೆ ಬ್ರೇಕ್ ಹಾಕಬೇಕು. ಹಲವು ಭಾಗಗಳಲ್ಲಿ ಡ್ರೈನೇಜ್ ಗಳ ಸ್ಲಾಬ್‌ಗಳು ತೆರೆದಿವೆ. ನಗರದ ಹಲವು ಕಡೆಗಳಲ್ಲಿ ಡಾಂಬರೀಕರಣ ವಾಗಬೇಕು ಎಂದು ಸದಸ್ಯರು ತಿಳಿಸಿದರು.
ಸಭೆಯಲ್ಲಿ ನಗರಸಭೆ ಅಧ್ಯಕ್ಷ ಶ್ರೀಕಂಠ ಸ್ವಾಮಿ, ಪೌರಾಯುಕ್ತ ವಿಜಯ್, ಉಪಾಧ್ಯಕ್ಷ ರಿಯಾನ ಬಾನು, ಸದಸ್ಯರು, ನಗರಸಭಾ ಅಧಿಕಾರಿಗಳು ಇದ್ದರು.