

ವಿಜಯವಾಣಿ ಸುದ್ದಿಜಾಲ ಗಂಗೊಳ್ಳಿ
ಅತ್ಯಂತ ಹಿಂದುಳಿದ ಪ್ರದೇಶವಾದ ಬಂಟ್ವಾಡಿಯಲ್ಲಿ ಪ್ರಾರಂಭಗೊಂಡ ನ್ಯೂ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ 75 ವರ್ಷಗಳಲ್ಲಿ ಅನೇಕ ಏಳುಬೀಳುಗಳನ್ನು ಕಂಡಿದ್ದರೂ ಬಹಳಷ್ಟು ಅಭಿವೃದ್ಧಿ ಹೊಂದಿದೆ. ಸರ್ಕಾರದ ಅನುದಾನ ಹಾಗೂ ಶಿಕ್ಷಕರ ನೇಮಕಾತಿ ಸ್ಥಗಿತಗೊಂಡಿರುವುದರಿಂದ ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗಬಾರದೆಂಬ ಉದ್ದೇಶದಿಂದ ಗೌರವ ಶಿಕ್ಷಕಿಯರನ್ನು ನೇಮಿಸಲಾಗಿದೆ ಎಂದು ಶಾಲೆ ಸಂಚಾಲಕ ಬಿ.ಅರುಣ್ ಕುಮಾರ್ ಶೆಟ್ಟಿ ಹೇಳಿದರು.
ಸೇನಾಪುರ ಗ್ರಾಮದ ಬಂಟ್ವಾಡಿಯ ನ್ಯೂ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಅಮೃತ ಮಹೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅಮೃತ ಮಹೋತ್ಸವ ಸಮಿತಿ ಅಧ್ಯಕ್ಷ ಶ್ರೀಕಾಂತ ಶ್ಯಾನುಭಾಗ್, ಸಿಆರ್‌ಪಿ ಸತೀಶ್ ಶೆಟ್ಟಿ, ಉದ್ಯಮಿಗಳಾದ ಅಜಿತ್ ಪ್ರಸಾದ್ ಶೆಟ್ಟಿ ಬೆಂಗಳೂರು, ಚಿತ್ತರಂಜನ್ ಹೆಗ್ಡೆ ಹರ್ಕೂರು, ಶಿಕ್ಷಕ-ರಕ್ಷಕ ಸಮಿತಿ ಅಧ್ಯಕ್ಷೆ ಜಯಲಕ್ಷ್ಮೀ, ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ನರಸಿಂಹ ಮೊಗವೀರ ಉಪಸ್ಥಿತರಿದ್ದರು. ಆದರ್ಶ ದೇವಾಡಿಗ ಸ್ವಸ್ತಿವಾಚನಗೈದರು. ಉಪಪ್ರಾಂಶುಪಾಲ ಚಂದ್ರಶೇಖರ ಶೆಟ್ಟಿ ಸ್ವಾಗತಿಸಿದರು. ಮುಖ್ಯ ಶಿಕ್ಷಕ ಶ್ರೀಧರ ಆಚಾರ್ಯ ವರದಿ ವಾಚಿಸಿದರು. ಶಂಭು ಗುಡ್ಡಮ್ಮಾಡಿ ಸನ್ಮಾನಿತರನ್ನು ಪರಿಚಯಿಸಿದರು. ನಾಗೇಶ ಶ್ಯಾನುಭಾಗ್ ಕಾರ್ಯಕ್ರಮ ನಿರ್ವಹಿಸಿದರು.
ಶಾಲೆಯಲ್ಲಿ ಸೇವೆ ಸಲ್ಲಿಸಿದ ಶಿಕ್ಷಕರು, ಗೌರವ ಶಿಕ್ಷಕರು, ಯಕ್ಷಗುರುಗಳಾದ ಐರಬೈಲು ಆನಂದ ಶೆಟ್ಟಿ ಮತ್ತು ಹೆಮ್ಮಾಡಿ ಪ್ರಭಾಕರ ಆಚಾರ್ಯ ಅವರನ್ನು ಸನ್ಮಾನಿಸಲಾಯಿತು. ನಮ್ಮ ಶಾಲೆ ನಮ್ಮ ಹೆಮ್ಮೆ ಅಭಿಯಾನದಲ್ಲಿ ಕೈಜೋಡಿಸಿದ ವಿದ್ಯಾಭಿಮಾನಿಗಳನ್ನು ಗೌರವಿಸಲಾಯಿತು.