ಡಯಾಲಿಸಿಸ್‌ಗೆ ಸರತಿ ಸಾಲು

dayalisis
Published on

ರಾಘವೇಂದ್ರ ಪೈ ಕುಂದಾಪುರ

ಹೆಚ್ಚುತ್ತಿರುವ ಬೇಡಿಕೆಯಿಂದ ಉಡುಪಿ ಜಿಲ್ಲೆಯಲ್ಲಿ ಕಿಡ್ನಿ ಸಮಸ್ಯೆಯಿಂದ ಬಳುತ್ತಿರುವವರು ಡಯಾಲಿಸಿಸ್‌ಗಾಗಿ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತ ಸೌಲಭ್ಯವಿದ್ದರೂ ಬೇಡಿಕೆ ಹೆಚ್ಚಾದ ಕಾರಣ ರೋಗಿಗಳು ಕಾಯಬೇಕಾದ ಸ್ಥಿತಿ ಇದೆ.

ಕುಂದಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಸಕ್ತ 63 ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಇನ್ನೂ 44 ಮಂದಿ ಹೆಸರು ನೋಂದಾಯಿಸಿ ತಮ್ಮ ಸರದಿಗೆ ಕಾಯುತ್ತಿದ್ದಾರೆ. ಒಬ್ಬ ವ್ಯಕ್ತಿ ಚಿಕಿತ್ಸೆ ಆರಂಭಿಸಿದರೆ ವಾರದಲ್ಲಿ 2 ಬಾರಿ ಚಿಕಿತ್ಸೆ ಪಡೆಯಬೇಕು. ಹಾಗಾಗಿ ಒಂದು ನಿರ್ದಿಷ್ಟ ಸಂಖ್ಯೆಯ ರೋಗಿಗಳಿಗೆ ಮಾತ್ರವೇ ಸೌಲಭ್ಯ ಸಿಗುತ್ತದೆ. ಇದರಿಂದ ಕಾಯುವವರ ಸಂಖ್ಯೆ ಹೆಚ್ಚಾಗುತ್ತಿದೆ. ರಾಜ್ಯಾದ್ಯಂತ 219 ಸರ್ಕಾರಿ ಆಸ್ಪತ್ರೆಗಳಲ್ಲಿ 800 ಯಂತ್ರಗಳಲ್ಲಿ ಡಯಾಲಿಸಿಸ್ ನಡೆಯುತ್ತಿದೆ. ರೋಗಿಗಳಿಗೆ ಇದು ಉಚಿತವಾಗಿದ್ದು, ಒಬ್ಬ ರೋಗಿಗೆ ಇಂತಿಷ್ಟು ಎಂದು ನಿಗದಿತ ಮೊತ್ತವನ್ನು ಸರ್ಕಾರ ಪಾವತಿಸುತ್ತದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಇದಕ್ಕೆ ಅನುದಾನ ನೀಡುತ್ತವೆ. ಈ ಹಿಂದೆ ಬಿಆರ್‌ಎಸ್ ಸಂಸ್ಥೆ ಬಳಿಕ ಸಂಜೀವಿನಿ, ಈಗ ನೆಪ್ರೊ ಪ್ಲಸ್ ಎಂಬ ಸರ್ಕಾರೇತರ ಸಂಸ್ಥೆ ನಿರ್ವಹಿಸುತ್ತಿದೆ.

ಮೊದಲು ಮೂರು ಪಾಳಿಯ ಇತ್ತು ಸೇವೆ

ಈ ಹಿಂದೆ ಕುಂದಾಪುರದಲ್ಲಿ 24 ತಾಸು ಕೂಡ 3 ಪಾಳಿಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ರೋಗಿಗಳಿಗೆ ಪ್ರಯಾಣ ಭತ್ಯೆ ಇತ್ಯಾದಿಯನ್ನು ಸರ್ಕಾರಿ ಆಸ್ಪತ್ರೆ ಮೂಲಕ ನೀಡಲಾಗುತ್ತಿತ್ತು. ಈಗಲೂ ರಾತ್ರಿ ಪಾಳಿಯಲ್ಲಿ ಚಿಕಿತ್ಸೆ ನೀಡಲು ಇಲ್ಲಿನ ಸಿಬ್ಬಂದಿ ಸಿದ್ಧರಿದ್ದಾರೆ. ಆದರೆ 16 ಮಂದಿ ರೋಗಿಗಳು ಒಪ್ಪಬೇಕು ಆದರೆ 2 ಮಂದಿ ಮಾತ್ರ ಸಿದ್ಧರಿದ್ದಾರೆ.

ಪರಿಹಾರವೇನು?

ಈ ಹಿಂದಿನ ಸಂಸ್ಥೆ ಸರಿಯಾಗಿ ಕಾರ್ಯನಿರ್ವಹಿಸದೇ ಇದ್ದಾಗ ಆಸ್ಪತ್ರೆ ಸಿಬ್ಬಂದಿಯೇ ಸೇರಿ ಚಿಕಿತ್ಸೆ ನೀಡುತ್ತಿದ್ದರು. ದಾನಿಗಳು ಡಯಾಲಿಸಿಸ್ ಯಂತ್ರ ಕೊಡಿಸಿದ್ದಾರೆ. ಆದ್ದರಿಂದ ದಾನಿಗಳ ಅವಶ್ಯವಿಲ್ಲ. ಆದರೆ ಸ್ಥಳಾವಕಾಶದ ಕೊರತೆಯಿದೆ. ಇನ್ನೂ ಹಾಸಿಗೆಗಳ ಸಂಖ್ಯೆ ಹೆಚ್ಚಳಕ್ಕೆ ಆಸ್ಪತ್ರೆಯಲ್ಲಿ ಅವಕಾಶ ಮಾಡಿಕೊಡಬೇಕು. ಖಾಸಗಿಯಲ್ಲಿ ಇದಕ್ಕೆ 1,500 ರೂ. ಇದೆ. ಆದರೆ ಇಲ್ಲಿ ಉಚಿತವಾಗಿ ಸಿಗುತ್ತದೆ. ಪ್ರಸ್ತುತ ಬೈಂದೂರು ಹಾಗೂ ಕುಂದಾಪುರ ತಾಲೂಕಿನ ರೋಗಿಗಳಿಗೆ ಇಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬೈಂದೂರಿನ ಸಮುದಾಯ ಆರೋಗ್ಯ ಕೇಂದ್ರದಲ್ಲೂ ಡಯಾಲಿಸಿಸ್ ವ್ಯವಸ್ಥೆ ಆರಂಭಕ್ಕೆ ಅವಕಾಶವಿದೆ. ಅಲ್ಲಿ ಆರಂಭವಾದರೆ ಒತ್ತಡ ಕಡಿಮೆಯಾಗಬಹುದು.

ಸದ್ಯದ ಸ್ಥಿತಿ

ಹಾಸಿಗೆ ಮಂಜೂರು: 10

ಕಾರ್ಯನಿರ್ವಹಣೆ: 08

ಚಿಕಿತ್ಸೆ ಪಡೆಯುತ್ತಿರುವವರು: 63

ಕಾಯುತ್ತಿರುವವರು: 44

ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿ: 09

ಒಬ್ಬರ ಚಿಕಿತ್ಸೆಗೆ ಬೇಕಾದ ಅವಧಿ: 3 ಗಂಟೆ

ಆಯುಷ್ಮಾನ್ ಜೋಡಣೆಗೆ ಬೇಡಿಕೆ

ಡಯಾಲಿಸಿಸ್ ಚಿಕಿತ್ಸೆಯನ್ನು ಆಯುಷ್ಮಾನ್ ಭಾರತ ಆರೋಗ್ಯ ವಿಮೆ ಜತೆಗೆ ಜೋಡಿಸಿದರೆ ಸಾವಿರಾರು ಮಂದಿಗೆ ಲಾಭ ಆಗಲಿದೆ. ಖಾಸಗಿಯಲ್ಲಿ ಚಿಕಿತ್ಸೆ ಪಡೆದರೂ ಆಯುಷ್ಮಾನ್ ದೊರೆತರೆ ರೋಗಿಗಳಿಗೆ ತುಸು ನಿರಾಳವಾಗಲಿದೆ.

ಡಯಾಲಿಸಿಸ್ ಹಾಸಿಗೆಗಳ ಸಂಖ್ಯೆ ಹೆಚ್ಚಿಸಿ ಹೆಚ್ಚಿನ ಮಂದಿಗೆ ಚಿಕಿತ್ಸೆ ದೊರೆಯುವಂತೆ ಮಾಡಲು ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇನೆ. ಕೆ.ಮಹೇಶ್ಚಂದ್ರ ಸರ್ಕಾರಿ ಆಸ್ಪತ್ರೆ ಆರೋಗ್ಯ ರಕ್ಷಾ ಸಮಿತಿ ಅಧ್ಯಕ್ಷ https://www.vijayavani.net/inauguration-of-the-center-of-excellence https://www.vijayavani.net/unification-of-kannada-by-kumaravyas

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net