ಬಡಾವಣೆ ನಿಯಮ ಉಲ್ಲಂಘಿಸಿದರೆ ಕ್ರಮ

FotoJet (3)
Published on

ಅಧಿಕಾರಿಗಳಿಗೆ ಶಾಸಕ ಸಿ.ಪಿ.ಯೋಗೇಶ್ವರ್ ಸೂಚನೆ | ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ

 ಚನ್ನಪಟ್ಟಣ : ನಗರದ ಆಸುಪಾಸು ಸೇರಿ ಗ್ರಾಮೀಣ ಪ್ರದೇಶಗಳಲ್ಲೂ ನಿಯಮಗಳನ್ನು ಉಲ್ಲಂಘಿಸಿ ಲೇಔಟ್‌ಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಇವುಗಳ ಬಗ್ಗೆ ಕಂದಾಯ ಅಧಿಕಾರಿಗಳು ನಿಗಾವಹಿಸಬೇಕು ಎಂದು ಶಾಸಕ ಸಿ.ಪಿ.ಯೋಗೇಶ್ವರ್ ತಿಳಿಸಿದರು.

ತಾಲೂಕು ಪಂಚಾಯಿತಿ ಆವರಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕಿನಲ್ಲಿ ಹಲವು ಅನಧಿಕೃತ ಲೇಔಟ್‌ಗಳು ನಿರ್ಮಾಣವಾಗುತ್ತಿವೆ. ಸರ್ವೇ ನಂಬರ್ ನಲ್ಲಿರುವ ಜಮೀನುಗಳಲ್ಲಿ ಚಿಕ್ಕ ಚಿಕ್ಕ ರಸ್ತೆಗಳನ್ನು ನಿರ್ಮಿಸಿ ಅವುಗಳನ್ನು ಮಾರಾಟ ಮಾಡುವ ಕೆಲಸವಾಗುತ್ತಿದೆ. ಯಾವುದೇ ಬಡಾವಣೆ ನಿರ್ಮಾಣವಾಗಬೇಕಾದರೂ ಸಾಕಷ್ಟು ನಿಯಮಗಳಿವೆ. ಆದರೆ, ಕೆಲವರು ನಿಯಮಗಳನ್ನು ಗಾಳಿಗೆ ತೂರಿ, ಭೂ ವ್ಯವಹಾರದಲ್ಲಿ ತೊಡಗಿದ್ದಾರೆ. ಇದು ಭವಿಷ್ಯದಲ್ಲಿ ಖರೀದಿದಾರರು ಸೇರಿ ಎಲ್ಲರಿಗೂ ಸಮಸ್ಯೆಯಾಗಲಿದೆ. ಈ ನಿಟ್ಟಿನಲ್ಲಿ ಇಂತಹ ಬಡಾವಣೆಗಳ ಮೇಲೆ ಕಂದಾಯ ಅಧಿಕಾರಿಗಳು ಗಮನಹರಿಸಿ ಎಂದು ಸೂಚನೆ ನೀಡಿದರು.

ನಗರಕ್ಕೆ ಹೊಂದಿಕೊಂಡಿರುವ ಹಲವಾರು ಕೃಷಿ ಜಮೀನುಗಳಲ್ಲಿ ಅಕ್ರಮ ಬಡಾವಣೆಗಳು ತಲೆ ಎತ್ತುತ್ತಿವೆ. ಯಾರೋ ಭೂ ವ್ಯವಹಾರಸ್ಥರಿಗೆ ಲಾಭ ಮಾಡಿಕೊಡುವುದು ಬೇಡ. ಬಡಾವಣೆಗಳನ್ನು ನಿರ್ಮಿಸುವುದಾದರೆ ಅದಕ್ಕೆ ಇರುವ ನಿಯಮಗಳನ್ನು ಅನುಸರಿಸಲಿ. ಇಂತಹ ಚಟುವಟಿಕೆಗಳಿಗೆ ಕಂದಾಯ ಅಧಿಕಾರಿಗಳು ಯಾವುದೇ ಕಾರಣಕ್ಕೂ ಸಹಕಾರ ನೀಡಬಾರದು. ಅಂತಹ ಬಡಾವಣೆಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ತಾಕೀತು ಮಾಡಿದರು.

ಸ್ಮಶಾನ ವಿಚಾರ ಮತ್ತೆ ಸುದ್ದಿಯಾಗಬಾರದು!!!

ತಾಲೂಕಿನಲ್ಲಿ ಪದೇಪದೆ ಸ್ಮಶಾನಗಳ ವಿಚಾರ ಸಾಕಷ್ಟು ಸುದ್ದಿಯಾಗುತ್ತಿದೆ. ಸ್ಮಶಾನದ ವಿಚಾರವಾಗಿ ದಲಿತ ಸಮುದಾಯ ಹಲವು ಬಾರಿ ಪ್ರತಿಭಟನೆ ನಡೆಸುತ್ತಿರುವುದು ಒಳ್ಳೆಯ ಬೆಳವಣಿಗೆ ಅಲ್ಲ. ತಾಲೂಕಿನ ಯಾವುದೇ ಗ್ರಾಮಗಳಲ್ಲೂ ಸ್ಮಶಾನಗಳಿಗೆ ಯಾವುದೇ ಸಮಸ್ಯೆಯಾಗಬಾರದು. ದಲಿತರಿಗೆ ನಿಗಧಿಯಾಗಿರುವ ಸ್ಮಶಾನಗಳಿಗೆ ಇರುವ ಸಮಸ್ಯೆ ಕೂಡಲೇ ಸರಿಪಡಿಸಿ. ಜಾಗ ಇಲ್ಲದ ಕಡೆ ಪರ್ಯಾಯ ಜಾಗ ಗುರುತಿಸುವ ಕೆಲಸ ಮಾಡಿ. ಇನ್ನು ಹತ್ತು ದಿನಗಳ ಒಳಗೆ ತಾಲೂಕಿನ ಎಲ್ಲ ಸ್ಮಶಾನಗಳ ಸಮಸ್ಯೆ ಬಗೆಹರಿಸಬೇಕು. ಸರ್ವೇ ಇಲಾಖೆ ಹಾಗೂ ಸ್ಥಳೀಯ ಗ್ರಾಪಂ ಸಹಕಾರದೊಂದಿಗೆ ಕಂದಾಯ ಇಲಾಖೆಯ ಅಧಿಕಾರಿಗಳು ಸ್ಮಶಾನ ವಿಚಾರಗಳ ಬಗ್ಗೆ ಗಮನಹರಿಸಿ ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಆಶ್ರಯ ಮನೆ ಹಾಗೂ ನಿವೇಶನಗಳ ಬಗ್ಗೆ ಮಾಹಿತಿ ಸಂಗ್ರಹಿಸಿದ ಶಾಸಕರು, ಲಾನುಭವಿಗಳ ಆಯ್ಕೆ ಸೇರಿ ಯಾವುದರಲ್ಲೂ ಸಣ್ಣ ಲೋಪ ನಡೆಯಬಾರದು. ಗ್ರಾಮಗಳ ಸಮೀಪ ನಿವೇಶನಗಳನ್ನು ನೀಡಲು ಸಾಧ್ಯವಿರುವ ಸೂಕ್ತ ಜಾಗಗಳನ್ನು ಸಂಬಂಧಿಸಿದ ಅಧಿಕಾರಿಗಳು ಗುರುತಿಸಿಕೊಳ್ಳಿ. ಇದರೊಂದಿಗೆ, ಸಾಗುವಳಿ ಜಮೀನುಗಳ ಇರುವ ಸಮಸ್ಯೆಗಳನ್ನು ಸಂಬಂಧಿಸಿದರಿಗೆ ಶೀಘ್ರವಾಗಿ ಮಾಡಿಕೊಡಿ. ಜನಸಾಮಾನ್ಯರನ್ನು ಯಾವುದಕ್ಕೂ ಅಲೆದಾಡಿಸುವ ಪರಿಪಾಠಬೇಡ ಎಂದು ಸೂಚಿಸಿದರು. ಇದರೊಂದಿಗೆ, ಕಂದಾಯ ಗ್ರಾಮ, ಉಪಗ್ರಾಮ ರಚನೆ, ಪೋಡಿ ಮುಕ್ತ ಗ್ರಾಮ ಸೇರಿ ಕಂದಾಯ ಇಲಾಖೆಗೆ ಸಂಬಂಧಿಸಿದ ಹಲವು ಚರ್ಚೆಗಳು ಸಭೆಯಲ್ಲಿ ನಡೆದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net