

ಪಡುಬಿದ್ರಿ: ಕಾಪು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸುಮಾರು 6.45 ಕೋಟಿ ರೂ. ವೆಚ್ಚದಲ್ಲಿ 5 ಕೆರೆ ಅಭಿವೃದ್ಧಿಪಡಿಸಲು ಪ್ರಸ್ತಾವನೆ ಇದ್ದು, ಲಭ್ಯತೆಗನುಗುಣವಾಗಿ ಅಭಿವೃದ್ಧಿಪಡಿಸಲು ಕ್ರಮವಹಿಸುವುದಾಗಿ ಸಣ್ಣ ನೀರಾವರಿ ಇಲಾಖೆ ಸಚಿವ ಎನ್.ಎಸ್.ಬೋಸ್ ರಾಜು ತಿಳಿಸಿದ್ದಾರೆ. ಕಾಪು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕೆರೆಗಳ ಅಭಿವೃದ್ಧಿಗೆ ಅನುದಾನ ನೀಡುವ ಬಗ್ಗೆ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಕೇಳಿದ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಪ್ರಸ್ತುತ ಒಂದು ಕೆರೆ ಇದ್ದು, ಸದ್ರಿ ಕೆರೆ ಸುಸ್ಥಿಯಲ್ಲಿರುತ್ತದೆ. ಹಾಗೂ ಜನಪ್ರತಿನಿಧಿಗಳ ಶಿಫಾರಸ್ಸಿನ ಮೇರೆಗೆ ರಾಜ್ಯದಲ್ಲಿ 4702 ಕೆರೆಗಳ ಆಧುನೀಕರಣ ಯೋಜನೆಯಡಿ ಅಭಿವೃದ್ಧಿಪಡಿಸಿ ಅಂತರ್ಜಲ ವೃದ್ಧಿಯೊಂದಿಗೆ ಸುತ್ತಮುತ್ತಲಿನ ರೈತರ ಕೃಷಿ ಭೂಮಿಗಳಿಗೆ ನೀರಾವರಿ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ವಿವರಿಸಿದ್ದಾರೆ.
ಸಮಾಜ ಕಲ್ಯಾಣ ಇಲಾಖೆಯಿಂದ 2022-23 ಹಾಗೂ 2023-24ನೇ ಸಾಲಿನಲ್ಲಿ ಉಡುಪಿ ಜಿಲ್ಲೆಯ ಪರಿಶಿಷ್ಟ ಜಾತಿ ಕಾಲನಿಗಳ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಮಾರ್ಗಸೂಚಿಯನ್ವಯ ಅನುಷ್ಠಾನಗೊಳಿಸುವ ಬಗ್ಗೆ ತಿಳಿಸಲಾಗಿದೆ ಹಾಗೂ ಸದ್ರಿ ಯೋಜನೆ ಬಗ್ಗೆ ಪ್ರಸಕ್ತ ಸಾಲಿನಲ್ಲಿ 108.92 ಕೋಟಿ ರೂ.ಗಳನ್ನು ಮಂಜೂರಾತಿ ನೀಡಿರುವ ಕಾಮಗಾರಿಗಳಿಗೆ ವೆಚ್ಚ ಮಾಡಲಾಗುವುದು ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಗುರ್ಮೆ ಪ್ರಶ್ನೆಗೆ ಉತ್ತರ ನೀಡಿದ್ದಾರೆ.
ಕಾಪು ವಿಧಾನಸಭಾ ಕ್ಷೇತ್ರದಲ್ಲಿ 9 ಅಂಗನವಾಡಿ ಕೇಂದ್ರಗಳು ಬಾಡಿಗೆ ಕಟ್ಟಡದಲ್ಲಿದ್ದು, 27 ಅಂಗನವಾಡಿ ಕೇಂದ್ರಗಳು ಇತರೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿವೆ. ಉಡುಪಿ ಜಿಲ್ಲೆಯಲ್ಲಿ ಬಾಡಿಗೆ ಕಟ್ಟಡದಲ್ಲಿರುವ ಒಟ್ಟು 32 ಅಂಗನವಾಡಿ ಕೇಂದ್ರಗಳಲ್ಲಿ 14 ಅಂಗನವಾಡಿ ಕೇಂದ್ರಗಳಿಗೆ ನಿವೇಶನ ಲಭ್ಯವಿದ್ದು, ಉಳಿದ ಕೇಂದ್ರಗಳಿಗೆ ನಿವೇಶನ ಕಾಯ್ದಿರಿಸುವ ಪ್ರಕ್ರಿಯೆ ಕಂದಾಯ ಇಲಾಖಾಧಿಕಾರಿಗಳ ಹಂತದಲ್ಲಿದೆ. 2024-25ನೇ ಸಾಲಿನಲ್ಲಿ 28 ಅಂಗನವಾಡಿ ಕಟ್ಟಡ ಮಂಜೂರಾಗಿದ್ದು, ಉಳಿದ 4 ಅಂಗನವಾಡಿ ಕೇಂದ್ರಗಳಿಗೆ ಅನುದಾನ ಹಾಗೂ ನಿವೇಶನ ಲಭ್ಯತೆ ಮೇರೆಗೆ ಕಟ್ಟಡ ನಿರ್ಮಾಣ ಮಾಡಲು ಕ್ರಮವಹಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಶಾಸಕರ ಪ್ರಶ್ನೆಗೆ ಉತ್ತರಿಸಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ಪ್ರಸ್ತುತ 18 ಮೆಟ್ರಿಕ್ ಪೂರ್ವ ಮತ್ತು 27 ಮೆಟ್ರಿಕ್ ನಂತರದ ಸೇರಿ 45 ವಿದ್ಯಾರ್ಥಿನಿಲಯ ಕಾರ್ಯನಿರ್ವಹಿಸುತ್ತಿದ್ದು, 4581ವಿದ್ಯಾರ್ಥಿಗಳಿಗೆ ಪ್ರವೇಶಾತಿ ಕಲ್ಪಿಸಲಾಗಿದೆ. ಇತರೆ ಜಿಲ್ಲೆಗಳಿಂದ ವ್ಯಾಸಂಗಕ್ಕೆ ದಾಖಲಾಗಿರುವ ವಿದ್ಯಾರ್ಥಿಗಳನ್ನು ಮನಗಂಡು ಸರ್ಕಾರದ ಆದೇಶ ಸಂಖ್ಯೆ ಬಿಇ.ಸಿ.ಡಬ್ಯುೃ 390 ಬಿ.ಎಂ.ಎಸ್ 2024 ದಿನಾಂಕ ಫೆಬ್ರುವರಿ 16ರಲ್ಲಿ 100 ಸಂಖ್ಯಾ ಬಲದ ಮೆಟ್ರಿಕ್ ನಂತರದ ವಸತಿ ನಿಲಯವನ್ನು ಉಡುಪಿ ಜಿಲ್ಲಾ ಕೇಂದ್ರಕ್ಕೆ 2 ಬಾಲಕಿಯರ ವಿದ್ಯಾರ್ಥಿ ನಿಲಯವನ್ನು ಮಂಜೂರು ಮಾಡಿದ್ದು, ಸದ್ರಿ ವಿದ್ಯಾರ್ಥಿ ನಿಲಯವನ್ನು ಪ್ರಾರಂಭಿಸಿ ಪ್ರವೇಶಾತಿ ಕಲ್ಪಿಸಲಾಗುತ್ತದೆ ಎಂದು ಹಿಂದುಳಿದ ವರ್ಗದ ಕಲ್ಯಾಣ ಸಚಿವರಾದ ಶಿವರಾಜ ಎಸ್.ತಂಗಡಗಿ ಶಾಸಕರ ಪ್ರಶ್ನೆ ಗೆ ಉತ್ತರಿಸಿದ್ದಾರೆ.
ಕಾಪು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬೇಡಿಕೆಗೆ ಅನುಗುಣವಾಗಿ ಮೆಸ್ಕಾಂ ಸರಬರಾಜು ಕಂಪನಿಯಿಂದ ವ್ಯವಸ್ಥೆ ಸುಧಾರಣೆಯಡಿ ಹೆಚ್ಚುವರಿ ಪರಿವರ್ತಕಗಳ ಅಳವಡಿಕೆ ಅಪಾಯಕಾರಿ ತಂತಿಗಳ ಬದಲಾವಣೆ ಮುಂತಾದವುಗಳನ್ನು ಕೈಗೊಳ್ಳಲಾಗುವುದು. ಪಡುಬಿದ್ರಿ, ಮಣಿಪಾಲ, ಶಿರ್ವ ಶಾಖಾ ವ್ಯಾಪ್ತಿಯಲ್ಲಿ ರೀ ಕಂಡಕ್ಟರಿಂಗ್ ಹಾಗೂ ಪರಿವರ್ತಕದ ಉನ್ನತೀಕರಿಸಿದ ಕಾಮಗಾರಿ ಪೂರ್ಣಗೊಂಡಿದ್ದು, ಕಟಪಾಡಿ ಹಾಗೂ ಶಿರ್ವದಲ್ಲಿರುವ ರಿ-ಕಂಡಕ್ಟರಿಂಗ್ ಕಾಮಗಾರಿ ಪ್ರಗತಿಯಲ್ಲಿರುವುದಾಗಿ ಇಂಧನ ಸಚಿವ ಕೆ.ಜೆ.ಜಾರ್ಜ್ ಉತ್ತರ ನೀಡಿದ್ದಾರೆ ಎಂದು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ತಿಳಿಸಿದ್ದಾರೆ.