ವಿಜಯವಾಣಿ ಸುದ್ದಿಜಾಲ ಕುಂದಾಪುರ
ಸೌಪರ್ಣಿಕಾ ನದಿಗೆ ಅಡ್ಡಲಾಗಿ ಕುಂದಾಪುರ- ಬೈಂದೂರು ರಾಷ್ಟ್ರೀಯ ಹೆದ್ದಾರಿ-66ರ ಮುಳ್ಳಿಕಟ್ಟೆ ಸಮೀಪದ ಅರಾಟೆಯಲ್ಲಿ 54 ವರ್ಷ ಹಿಂದೆ ನಿರ್ಮಿಸಿದ ಹಳೇ ಸೇತುವೆ ಶಿಥಿಲಗೊಂಡಿದ್ದು, ಈ ಕುರಿತು ಅಧಿಕೃತ ವರದಿ ಬಂದ ಹಿನ್ನೆಲೆಯಲ್ಲಿ ಸೇತುವೆ ಮೇಲೆ ಸಂಚಾರ ವಾಹನ ಸಂಚಾರ ನಿಷೇಧಿಸಲಾಗಿದೆ.
ಹಳೇ ಸೇತುವೆಯಲ್ಲಿ ಸಂಚಾರ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಕನ್ನಡಕುದ್ರು (ಮೂವತ್ತುಮುಡಿ) ಕ್ರಾಸ್ ಬಳಿಯಿಂದ ಅರಾಟೆ ತನಕ ಹಳೇ ಸೇತುವೆ ಇರುವ ಭಾಗದಲ್ಲಿ ಸಂಚಾರ ಸ್ಥಗಿತಗೊಳಿಸಲಾಗಿದ್ದು, ಪಕ್ಕದಲ್ಲಿರುವ ಹೊಸ ಸೇತುವೆಯಲ್ಲಿ ದ್ವಿಮುಖ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ವಾಹನ ಚಾಲಕರು ಎಚ್ಚರಿಕೆಯಿಂದ ವಾಹನ ಚಲಾಯಿಸಬೇಕಿದ್ದು, ಸೇತುವೆ ಮೇಲೆ ಅತಿ ವೇಗ, ವಾಹನಗಳ ಓವರ್‌ಟೇಕ್ ಸಹಿತ ಅನಾವಶ್ಯಕ ತಪ್ಪುಗಳಿಗೆ ಅವಕಾಶ ನೀಡಬಾರದು.
ಡಿವೈಡರ್‌ನಲ್ಲಿ ತಿರುವು ಅವೈಜ್ಞಾನಿಕ
ಸುರಕ್ಷತಾ ಕ್ರಮಗಳನ್ನೂ ಅನುಸರಿಸದೆ, ಸೂಕ್ತ ವ್ಯವಸ್ಥೆಗಳೂ ಇಲ್ಲದೇ ಹೊಸ ಸೇತುವೆಯಲ್ಲಿ ದ್ವಿಮುಖ ಸಂಚಾರಕ್ಕೆ ಅವಕಾಶ ನೀಡಿದ್ದು, ಅಪಾಯಕ್ಕೆ ಆಹ್ವಾನ ನೀಡಿದಂತಾಗಿದೆ. ಡಿವೈಡರ್ ಸಮೀಪ ಹಂಪ್ ನಿರ್ಮಿಸಲಾಗಿದ್ದು, ತ್ರಾಸಿ ಮತ್ತು ಕುಂದಾಪುರ ಕಡೆಯಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಏಕಮುಖ ಸಂಚಾರ ವ್ಯವಸ್ಥೆ ಅಡಿಯಲ್ಲಿ ಅತಿ ವೇಗದಿಂದ ಬರುತ್ತಿರುವ ವಾಹನಗಳು ಅರಾಟೆ ಸೇತುವೆ ಬಳಿ ದ್ವಿಮುಖ ಸಂಚಾರ ವ್ಯವಸ್ಥೆಗೆ ಬದಲಾಯಿಸುವಾಗ ನಿಯಂತ್ರಣ ಕಳೆದುಕೊಂಡು ಅಪಘಾತ ನಡೆಯುವ ಸಾಧ್ಯತೆಗಳಿವೆ.
ಜಿಲ್ಲೆಯ ಅತಿ ಉದ್ದದ ಸೇತುವೆ
ಜಿಲ್ಲೆಯ ಅತೀ ಉದ್ದದ ಸೇತುವೆ ಇದಾಗಿದ್ದು, 615 ಮೀ. ಉದ್ದವಿದೆ. ಹಳೇ ಸೇತುವೆಯ ಧಾರಣ ಸಾಮರ್ಥ್ಯದ ಬಗ್ಗೆ ಕೆಲವು ವರ್ಷಗಳಿಂದ ಅನುಮಾನಗಳಿದ್ದವು. ಕಳೆದ ಸೆಪ್ಟೆಂಬರ್‌ನಲ್ಲಿ ಹೆದ್ದಾರಿ ಪ್ರಾಧಿಕಾರದ ವತಿಯಿಂದ ಕುಂದಾಪುರ – ಬೈಂದೂರು ಹೆದ್ದಾರಿಯ ಎಲ್ಲ ಸೇತುವೆಗಳ ಧಾರಣಾ ಸಾಮರ್ಥ್ಯ ಯಂತ್ರದ ಮೂಲಕ ತಪಾಸಣೆ ನಡೆಸಲಾಗಿತ್ತು. ಕಳೆದ ಮಳೆಗಾಲದಲ್ಲಿ ಇದೆ ರಾ.ಹೆ. 66ರ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕಾಳಿ ನದಿಗೆ ನಿರ್ಮಿಸಲಾಗಿದ್ದ ಹಳೇ ಸೇತುವೆ ಕುಸಿದು ಬಿದ್ದು ಸಂಪರ್ಕವೇ ಕಡಿತಗೊಂಡಿತ್ತು.
ಅರಾಟೆ ಸೇತುವೆ ಶಿಥಿಲಗೊಂಡಿದೆ ಎಂಬ ತಜ್ಞರ ವರದಿ ಆಧರಿಸಿ ಸಾರ್ವಜನಿಕ ಹಿತದೃಷ್ಟಿಯಿಂದ ಕೇಂದ್ರ ಮೋಟಾರು ಕಾಯ್ದೆ ಅನ್ವಯ ಅರಾಟೆ ಸೇತುವೆ ಮೇಲೆ ವಾಹನ ಸಂಚಾರ ನಿಷೇಧಿಸಿ, ಈ ಹೊಸ ಸೇತುವೆ ಮೇಲೆ ವಾಹನ ಸಂಚಾರಕ್ಕೆ ಬದಲಿ ವ್ಯವಸ್ಥೆ ಕಲ್ಪಿಸಲಾಗಿದೆ. ವಾಹನ ಸವಾರರು ಎಚ್ಚರಿಕೆ ವಹಿಸಿ ವಾಹನ ಚಲಾಯಿಸಬೇಕು.
-ಡಾ.ಕೆ.ವಿದ್ಯಾಕುಮಾರಿ ಜಿಲ್ಲಾಧಿಕಾರಿhttps://www.vijayavani.net/national-highway-169a-indrali-railway-flyover-work-progress-review-meeting