ಪೈಪ್‌ಲೈನ್ ಮೂಲಕ ನೀರು ಒದಗಿಸಲು ಕ್ರಿಯಾಯೋಜನೆ

2
Published on

ಸಾಲಿಗ್ರಾಮ: ಅಚ್ಚುಕಟ್ಟು ಪ್ರದೇಶದ ಸಮಗ್ರ ನೀರು ಆಧುನೀಕರಣ ಅಭಿವೃದ್ಧಿ ಯೋಜನೆಯಡಿ ರೈತರ ಜಮೀನಿಗೆ ಪೈಪ್‌ಲೈನ್ ಮೂಲಕ ನೀರು ಒದಗಿಸಲು ರಾಜ್ಯ ಸರ್ಕಾರದಿಂದ ಕೇಂದ್ರ ಸರ್ಕಾರಕ್ಕೆ ಕ್ರಿಯಾಯೋಜನೆ ಕಳುಹಿಸಲಾಗಿದೆ ಎಂದು ನೀರು ಬಳಕೆದಾರರ ಮಹಾಮಂಡಲದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಂ.ಜೆ.ಕುಮಾರ್ ತಿಳಿಸಿದರು.

ತಾಲೂಕಿನ ತಂದ್ರೆ ಅಂಕನಹಳ್ಳಿಯಲ್ಲಿ ಶುಕ್ರವಾರ ಆಯೋಜಿಸಿದ್ದ ನೀರು ಬಳಕೆದಾರರ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಅವರು, ರೈತರ ಕೊನೆಯ ಭಾಗದ ಜಮೀನಿಗೆ ನೀರು ಒದಗಿಸಲು ಕೇಂದ್ರ ಸರ್ಕಾರ ಸಮಗ್ರ ನೀರು ಆಧುನೀಕರಣ ಅಭಿವೃದ್ಧಿ ಎಂಬ ಹೊಸ ಯೋಜನೆಯನ್ನು ಜಾರಿಗೆ ತಂದಿದ್ದು, ಸಾಲಿಗ್ರಾಮ ತಾಲೂಕಿನಿಂದ ತಂದ್ರೆ ಅಂಕನಹಳ್ಳಿ, ಮುದುಗುಪ್ಪೆ, ಮುಂಜನಹಳ್ಳಿ, ಮುಂಡೂರು, ಸಂಕನಹಳ್ಳಿ ನೀರು ಬಳಕೆದಾರರ ಸಂಘದಿಂದ ಕ್ರಿಯಾ ಯೋಜನೆ ಸಲ್ಲಿಸಲಾಗಿದ್ದು, ಶೀಘ್ರ ಕೇಂದ್ರ ಸರ್ಕಾರದಿಂದ ಹಣ ಬಿಡುಗಡೆಯಾಗಿ ಈ ಯೋಜನೆಗೆ ಚಾಲನೆ ದೊರೆಯಲಿದೆ ಎಂದರು.

ಈ ಭಾಗದಲ್ಲಿ ನೀರು ಬಳಕೆದಾರರ ಸಂಘಗಳ ಅಭಿವೃದ್ಧಿಗೆ ಮತ್ತು ಕೊನೆಯ ಭಾಗದ ಜಮೀನಿಗೆ ನೀರು ತಲುಪಿಸುವ ಕೆಲಸದಲ್ಲಿ ಮಾರ್ಕಂಡೇ ಗೌಡಹೆಚ್ಚು ಆಸಕ್ತಿ ವಹಿಸಿದ್ದಾರೆ. ಹಾಗಾಗಿ ಈ ವ್ಯಾಪ್ತಿಯಲ್ಲಿ ಆಗಬೇಕಾದ ಅಭಿವೃದ್ಧಿ ಕೆಲಸಕ್ಕೆ ಮಹಾಮಂಡಲದಿಂದ ವಿಶೇಷ ಸೌಲಭ್ಯವನ್ನು ಕಲ್ಪಿಸಿಕೊಡಲಾಗುವುದು ಎಂದರು.

ಸಂಘದ ಅಧ್ಯಕ್ಷ ಮಾರ್ಕಂಡೇಗೌಡ ಮಾತನಾಡಿ, ಈ ಭಾಗದಲ್ಲಿರುವ ನೀರಿನ ಸಮಸ್ಯೆ ಬಗೆಹರಿಯಬೇಕಿದೆ. ಇದಕ್ಕಾಗಿ ಸಂಬಂಧಪಟ್ಟ ಸಚಿವರು ಮತ್ತು ಅಧಿಕಾರಿಗಳನ್ನು ಸಂಘದ ಸದಸ್ಯರು ಮತ್ತು ಮಹಾಮಂಡಳದ ನಿರ್ದೇಶಕರೊಂದಿಗೆ ಭೇಟಿ ಮಾಡಲಾಗುವುದು ಎಂದರು.

ಸಭೆಯಲ್ಲಿ ಸಂಘದ ನಿರ್ದೇಶಕರಾದ ಚಂದ್ರಶೇಖರಯ್ಯ, ರುದ್ರೇಶ್, ಮಲ್ಲೇಶ್, ಮಂಜಯ್ಯ, ರಂಗೇಗೌಡ, ಪುಟ್ಟಮ್ಮ, ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಬಸವಣ್ಣ, ದೇವರಾಜ್ ನಾಯಕ, ಶಿವು, ಕೆಂಚನಹಳ್ಳಿ ಸುರೇಶ್, ಕಾರ್ಯದರ್ಶಿ ಶಿವಣ್ಣ, ರಜನಿಕಾಂತನಾಯಕ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net