ಸಾರ್ವಜನಿಕರಿಗೆ ಕಿರುಕುಳ ಕಂಡಲ್ಲಿ ಕ್ರಮ

FotoJet (2)
Published on

ನಗರ ಠಾಣೆ ಸರ್ಕಲ್‌ಇನ್‌ಸ್ಪೆಕ್ಟರ್ ಮಿಧುನ್‌ಶಿಲ್ಪಿ ಎಚ್ಚರಿಕೆ | ಮೈಕ್ರೋ ಫೈನಾನ್ಸ್ ಅಧಿಕಾರಿಗಳೊಂದಿಗೆ ಸಭೆ

 ಕನಕಪುರ: ಮೈಕ್ರೋ ಫೈನಾನ್ಸ್ ಸಿಬ್ಬಂದಿ ಸಾರ್ವಜನಿಕರಿಗೆ ಹಾಗೂ ಮಹಿಳೆಯರಿಗೆ ಕಿರುಕುಳ ನೀಡುವ ದೂರು ಬಂದಲ್ಲಿ ಕಾನೂನಾತ್ಮಕ ಕ್ರಮ ಕೈಗೊಳ್ಳಲಾಗುವುದು ಎಂದು ನಗರ ಠಾಣೆ ಸರ್ಕಲ್‌ಇನ್‌ಸ್ಪೆಕ್ಟರ್ ಮಿಧುನ್‌ಶಿಲ್ಪಿ ಎಚ್ಚರಿಸಿದರು.

ನಗರ ಹಾಗೂ ಗ್ರಾಮಾಂತರ ಠಾಣಾ ಸರ್ಕಲ್ ಇನ್‌ಸ್ಪೆಕ್ಟರ್ ವಿಕಾಸ್, ಎಸ್.ಐ.ಉಷಾನಂದಿನಿ ನೇತೃತ್ವದಲ್ಲಿ ಶುಕ್ರವಾರ ಆಯೋಜಿಸಿದ್ದ ಮೈಕ್ರೋ ಫೈನಾನ್ಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಸಭೆಯಲ್ಲಿ ಮಾತನಾಡಿ, ಮೈಕ್ರೋ ಫೈನಾನ್ಸ್ ಸಂಸ್ಥೆಯ ಉಪಟಳ ಮತ್ತೆಲ್ಲೂ ಮರುಕಳಿಸದಂತೆ ಅಧಿಕಾರಿಗಳು ಮತ್ತು ಸಿಬ್ಬಂದಿ ನಡೆದುಕೊಳ್ಳಬೇಕು, ಈಗಾಗಲೇ ತಾಲೂಕಿನಲ್ಲೂ ತಮ್ಮ ವಿರುದ್ಧ ಸಾರ್ವಜನಿಕರಿಂದ ದೂರುಗಳು ಬಂದಿವೆ. ಇದನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸುವ ಮುನ್ನ ಕಾನೂನಿನ ಚೌಕಟ್ಟಿನಲ್ಲಿಯೇ ನೀವು ಕರ್ತವ್ಯ ನಿರ್ವಹಿಸಬೇಕು ಎಂದು ಎಚ್ಚರಿಸಿದರು.

ಗ್ರಾಮಾಂತರ ಇನ್‌ಸ್ಪೆಕ್ಟರ್ ವಿಕಾಸ್ ಮಾತನಾಡಿ, ತಾಲೂಕಲ್ಲದೆ, ವಿವಿಧ ಜಿಲ್ಲೆಗಳಲ್ಲಿ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಕಿರುಕುಳ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ, ಆತ್ಮಹತ್ಯೆ ಪ್ರಕರಣ ಹಾಗೂ ತಮ್ಮಿಂದ ಸಾಲ ಪಡೆದವರು ಕಿರುಕುಳಕ್ಕೆ ಹೆದರಿ ಊರನ್ನೇ ಖಾಲಿ ಮಾಡುವ ಬಗ್ಗೆ ದೂರುಗಳು ಬಾರದಂತೆ ಎಚ್ಚರಿಕೆ ವಹಿಸಬೇಕು, ತಮಗೆ ನೀಡಿರುವ ಬ್ಯಾಂಕ್ ನಿಯಮಾನುಸಾರ ಸಾಲ ವಸೂಲಾತಿ ಹಾಗೂ ಅವುಗಳ ರಕ್ಷಣೆಗೆ ಕಾನೂನು ಇದೆ ಎನ್ನುವುದನ್ನು ಮನದಲ್ಲಿಟ್ಟು ನೀವು ಕರ್ತವ್ಯ ನಿರ್ವಹಿಸಬೇಕು ಎಂದರು.

ಜಯಕರ್ನಾಟಕ ಜನಪರ ವೇದಿಕೆ ರಾಜ್ಯ ಸಲಹೆಗಾರ ಕುಮಾರಸ್ವಾಮಿ ಮಾತನಾಡಿ, ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಆರ್.ಬಿ.ಐ ನೀತಿ ನಿಯಮಗಳನ್ನು ಗಾಳಿಗೆ ತೂರಿ ವಸೂಲಾತಿ ಮಾಡುತ್ತಿದ್ದಾರೆ, ಅನೇಕ ಕುಟುಂಬಗಳ ಮೇಲೆ ಇವರಿಂದ ಅನೇಕ ಕಿರುಕುಳದ ದೂರುಗಳು ಬಂದಿವೆ, ಸರ್ಕಾರ ಮೈಕ್ರೋ ಪೈನಾನ್ಸ್‌ನ ಕಾನೂನಿಗೆ ಅಗತ್ಯ ತಿದ್ದುಪಡಿ ತರಬೇಕಿದೆ. ತಾಲೂಕಿನಲ್ಲಿ ಕೆಲಸ ನಿರ್ವಹಿಸುತ್ತಿರುವ ಫೈನಾನ್ಸ್‌ಗಳ ದಾಖಲಾತಿ ಬೈಲಾಗಳನ್ನು ಪರಿಶೀಲಿಸಬೇಕು, ಬಹುತೇಕ ವಸತಿ ಬಡಾವಣೆಯಲ್ಲಿಯೇ ಇವರು ಕೆಲಸ ನಿರ್ವಹಿಸುತ್ತಿರುವುದು ನಾಗರಿಕರಿಗೆ ಕಿರಿಕಿರಿಯಾಗುತ್ತಿರುವುದರಿಂದ ಇವರ ಉಪಟಳಕ್ಕೆ ಕಡಿವಾಣ ಹಾಕಬೇಕೆಂದು ಮನವಿ ಮಾಡಿದರು. 35 ವಿವಿಧ ಮೈಕ್ರೋ ಫೈನಾನ್ಸ್‌ನ ಸಿಬ್ಬಂದಿ, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net