

ಚಿಕ್ಕಬಳ್ಳಾಪುರ: ಆರ್‌ಬಿಐ ಮಾರ್ಗಸೂಚಿ ಕ್ರಮಗಳನ್ನು ಚಾಚೂ ತಪ್ಪದೇ ಪಾಲಿಸಲು ಜಿಲ್ಲಾಡಳಿತವು ಜಿಲ್ಲೆಯಲ್ಲಿನ ಮೈಕ್ರೋ ಫೈನಾನ್ಸ್ ಸಂಸ್ಥೆಗಳಿಗೆ ಸೂಚಿಸಿದೆ.
ಸಾಲವನ್ನು ನೀಡುವಾಗ ಬಡ್ಡಿದರ, ಹಿಂಪಡೆಯುವ ಅವಧಿ, ಪ್ರಕ್ರಿಯೆ ಶುಲ್ಕ ಹಾಗೂ ಹೆಚ್ಚುವರಿ ಶುಲ್ಕಗಳು ಏನೇ ಇದ್ದರೂ ಸಾಲ ಪಡೆಯುವವರಿಗೆ ಮೊದಲೇ ತಿಳಿಸಬೇಕು. ಯಾವುದೇ ಶುಲ್ಕಗಳ ಮಾಹಿತಿ ಮುಚ್ಚಿಡುವಂತಿಲ್ಲ. ಹಾಗೆಯೇ ಹಣ ವಸೂಲಿ ನೆಪದಲ್ಲಿ ಕಿರುಕುಳ ನೀಡುವಂತಿಲ್ಲ. ನಿಯಮಾನುಸಾರ ಕಾರ್ಯ ನಿರ್ವಹಿಸಬೇಕು ಎಂದು ಮೈಕ್ರೋ ಫೈನಾನ್ಸ್ ಕಂಪನಿಗಳ ಪ್ರತಿನಿಧಿಗಳು, ಲೇವಾದೇವಿದಾರರು ಹಾಗೂ ಗಿರಿವಿದಾರರಿಗೆ ಸೂಚಿಸಲಾಯಿತು.
ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ನೇತೃತ್ವದಲ್ಲಿ ಶನಿವಾರ ಕೈಗೊಂಡಿದ್ದ ಸಭೆಯಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನಿರ್ದೇಶನಗಳನ್ನು ಹಣಕಾಸಿನ ವ್ಯವಹಾರ ನಡೆಸುವ ಸಂಸ್ಥೆಗಳು ಪಾಲಿಸುತ್ತಿರುವ ವೈಖರಿಯನ್ನು ಪರಿಶೀಲಿಸಲಾಯಿತು.
ಸಾಲ ಪಡೆಯಲು ಇಚ್ಚಿಸಿ ಅರ್ಜಿ ಸಲ್ಲಿಸುವವರ ಆದಾಯದ ಸಾಮರ್ಥ್ಯವನ್ನು ಮೊದಲು ತಿಳಿದುಕೊಳ್ಳಬೇಕು. ಪ್ರತಿ ತಿಂಗಳ ಹಣ ಕಟ್ಟುವ ಸಾಮರ್ಥ್ಯವನ್ನು ಮೀರಿದ ಸಾಲವನ್ನು ವಿತರಿಸಬಾರದು. ಇದಕ್ಕೆ ಮಾಸಿಕ ವೇತನ ಹಾಗೂ ಆದಾಯದ ಮೂಲವನ್ನು ಪರಿಗಣಿಸಬೇಕು. ಅತಿ ಹೆಚ್ಚಿನ ಇಎಂಐ ಪಾವತಿಸಲು ಸೂಚಿಸಬಾರದು ಎಂದು ಡಿಸಿ ತಿಳಿಸಿದರು.
ಸಂಜೆ 6 ರಿಂದ ಬೆಳಗ್ಗೆ 9ರವರೆಗೆ ಸಾಲ ಹಿಂಪಡೆಯುವ ಯಾವುದೇ ಕೆಲಸವನ್ನು ಕೈಗೊಳ್ಳಬಾರದು. ಬೆದರಿಕೆ ಹಾಕುವುದು, ಕೆಟ್ಟ ಪದಗಳಲ್ಲಿ ನಿಂದನೆ, ಆಸ್ತಿಪಾಸ್ತಿಗೆ ಹಾನಿ, ಗೂಂಡಾಗಳ ಬಳಕೆ, ಸಾಲ ಪಡೆದ ಸಂಬಂಧಿಕರು, ಸ್ನೇಹಿತರು ಹಾಗೂ ಸಹೋದ್ಯೋಗಿಗಳ ಮೇಲೆ ಒತ್ತಡ ಹಾಕುವುದು, ಅವಹೇಳನಕಾರಿ ಪ್ರಚಾರ ಸೇರಿ ಕೆಟ್ಟ ಪ್ರಕ್ರಿಯೆಗಳಿಗೆ ಅವಕಾಶ ನೀಡಬಾರದು. ಕಡ್ಡಾಯವಾಗಿ ಸಾಲ ಪಡೆದವರ ಮಾಹಿತಿಯನ್ನು ಗೌಪ್ಯವಾಗಿಡಬೇಕು ಎಂದರು.
ಒಂದು ವೇಳೆ ನಿಯಮ ಉಲ್ಲಂಘನೆಯ ಪ್ರಕರಣ ಕಂಡು ಬಂದಲ್ಲಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸಭೆಯಲ್ಲಿ ಜಿ.ಪಂ.ಸಿಇಒ ಪ್ರಕಾಶ್ ಜಿ.ಟಿ.ನಿಟ್ಟಾಲಿ, ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕ ನಾಗರಾಜು, ಸಹಕಾರ ಸಂಘಗಳ ಉಪನಿಬಂಧಕ ಡಾ.ಶಂಕರ್ ಇದ್ದರು.
ಸಹಾಯವಾಣಿ ಸ್ಥಾಪನೆ
ಮೈಕ್ರೋ ಫೈನಾನ್ಸ್ ಹಾಗೂ ಹಣಕಾಸಿನ ವ್ಯವಹಾರಸ್ಥರು ಕಿರುಕುಳ ನೀಡಿದರೆ (ಸಹಕಾರ ಸಂಘಗಳ ಉಪನಿಬಂಧಕರ ದೂ.ಸಂ: 9844329790), (ಸಹಕಾರ ಸಂಘಗಳ ಸಹಾಯಕ ನಿಬಂಧಕರ ದೂ.ಸಂ 9379862426) ಸಹಾಯವಾಣಿಗೆ ಕರೆ ಮಾಡಿ, ಮಾಹಿತಿ ನೀಡಬಹುದು. ದೂರುಗಳಿಗೆ ಸ್ಪಂದಿಸಿ, ಸಾಲಗಾರರಿಗೆ ನೆರವು ನೀಡಲಾಗುತ್ತದೆ ಎಂದು ಜಿಲ್ಲಾಡಳಿತ ತಿಳಿಸಿದೆ.