ಅವಧಿ ಮೀರಿದ ಔಷಧ ನೀಡಿದರೆ ಕ್ರಮ: ಎಚ್ಚರಿಕೆ ನೀಡಿ ಡಿಸಿ ಯಶವಂತ್

12-07-rama-dc meeting
Published on

ರಾಮನಗರ: ಜಿಲ್ಲೆಯಲ್ಲಿ ಅವಧಿ ಮೀರಿದ ಔಷಧಗಳ ಬಳಕೆ ಅಥವಾ ವಿತರಣೆ ಮಾಡಿದರೆ ಸಂಬಂಧಿಸಿದವರನ್ನು ಮುಲಾಜಿಲ್ಲದೆ ಅಮಾನತು ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಮಟ್ಟದ ಲಸಿಕೆ ಕಾರ್ಯಪಡೆ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ರಾಮನಗರದ ಕೂಗಳತೆಯಲ್ಲಿರುವ ರಾಜಧಾನಿ ಬೆಂಗಳೂರಿನಿಂದ ಆರೋಗ್ಯ ಇಲಾಖೆಗೆ ಅಗತ್ಯವಿರುವ ಔಷಧ, ಮಾತ್ರೆಗಳನ್ನು ತರಲು ಕಷ್ಟವಾದರೂ ಏನಿದೆ. ಅವಧಿ ಮೀರಿದ ಔಷಧ ಮಾತ್ರೆಗಳಿದ್ದರೆ ನನ್ನ ಗಮನಕ್ಕೆ ತರಬೇಕು, ಅದರಲ್ಲೂ ಮುಖ್ಯವಾಗಿ ಮಕ್ಕಳಿಗೆ ನೀಡುವ ಲಸಿಕೆಯನ್ನು ಎರಡೆರಡು ಬಾರಿ ಪರೀಕ್ಷಿಸಿಯೇ ನೀಡಬೇಕು. ಅವಧಿ ಮೀರಿದ ಔಷಧಗಳ ಬಳಕೆ ಸಲ್ಲ, ಈ ಬಗ್ಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ ವೈಯಕ್ತಿಕ ಗಮನ ಹರಿಸಬೇಕು ಎಂದರು.

ಲಸಿಕೆಗಳು, ಔಷಧಿಗಳು, ಮಾತ್ರೆ ಸೇರಿದಂತೆ ಮೆಡಿಕಲ್ ಸರಂಜಾಮುಗಳನ್ನು ದಾಸ್ತಾನಿಗೆ ತೆಗೆದುಕೊಳ್ಳುವ ಸಮಯದಲ್ಲಿ ಅವುಗಳ ಅವಧಿಯನ್ನು ಸಹ ಪರಿಶೀಲಿಸಬೇಕು, ಒಂದು ವೇಳೆ ದಾಸ್ತಾನಿರಿಸಿದ ಔಷಧ ಮಾತ್ರೆಗಳ ಅವಧಿ ಮುಕ್ತಾಯಗೊಂಡಿದ್ದರೆ ವಿಲೇವಾರಿಗೆ ಕ್ರಮ ವಹಿಸಬೇಕು. ಮಾಗಡಿಯಲ್ಲಿ ಅವಧಿ ಮೀರಿದ ಗ್ಲುಕೋಸ್ ನೀಡಿಕೆ ಪ್ರಕರಣವನ್ನು ಉದಾಹರಿಸಿ ಮಾತನಾಡಿದ ಅವರು ಇನ್ನು ಮುಂದೆ ಈ ರೀತಿಯ ಯಾವುದೇ ಘಟನೆಗಳು ಮರುಕಳಿಸಿದರೆ ಸಂಬಂಧಿಸಿದವರನ್ನೇ ಹೊಣೆಗಾರರನ್ನಾಗಿಸಿ ಅಮಾನತು ಮಾಡಲಾಗುವುದು ಎಂದು ಹೇಳಿದರು.

ಜಿಲ್ಲೆಯ ಆಸ್ಪತ್ರೆಗಳಲ್ಲಿ ಹಾವು ಕಡಿತ ಔಷಧಿಗಳನ್ನು ಸಿದ್ಧಪಡಿಸಿಟ್ಟು ಕೊಂಡಿರಬೇಕು. ಖಾಲಿಯಾದಾಗ ಮರುದಾಸ್ತಾನಿಗೆ ಕ್ರಮ ವಹಿಸಬೇಕು ಇಲಾಖೆಗೆ ಸಂಬಂಧಿಸಿದ ಮಾಹಿತಿಗಳು ಅಧಿಕಾರಿಗಳ ಕೈ ಬೆರಳಿನಲ್ಲಿರಬೇಕು ಎಂದರು.

ಇದೂವರೆಗೂ ಜಿಲ್ಲೆಯಲ್ಲಿ ಒಟ್ಟು 93 ಡೆಂಗ್ಯೂ ಪ್ರಕರಣಗಳು ವರದಿಯಾಗಿದ್ದು, ರೋಗಿಗಳಲ್ಲಿ ಡೆಂಗ್ಯೂ ಲಕ್ಷಣಗಳು ಪತ್ತೆಯಾದರೆ ರಾಮನಗರ ಜಿಲ್ಲಾ ಆಸ್ಪತ್ರೆಯಲ್ಲಿ ತೆರೆಯಲಾಗಿರುವ ವಾರ್ ರೂಮ್ ಸಂಖ್ಯೆ 9449843266ಗೆ ಸಾರ್ವಜನಿಕರು ಸಂಪರ್ಕಿಸಬಹುದು, ಇದು ದಿನದ 24 ಗಂಟೆ ಕಾರ್ಯನಿರ್ವಹಿಸುತ್ತದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಿರಂಜನ್ ಅವರು ತಿಳಿಸಿದರು.

ಆರ್‌ಸಿಎಚ್ ಅಧಿಕಾರಿ ಡಾ. ರಾಜು, ಜಿಲ್ಲಾ ಶಸ್ತಚಿಕಿತ್ಸಕರಾದ ಡಾ. ಮಂಜುನಾಥ್, ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ. ಶಶಿಧರ್, ಜಿಲ್ಲಾ ಕ್ಷಯರೋಗ ನಿಯಂತ್ರಣಧಿಕಾರಿ ಡಾ. ಕುಮಾರ್, ಚನ್ನಪಟ್ಟಣ, ರಾಮನಗರ, ಕನಕಪುರ, ಮಾಗಡಿ ತಾಲ್ಲೂಕು ಆರೋಗ್ಯಾಧಿಕಾರಿಗಳು ಹಾಗೂ ಸಂಬಅಧಿಸಿದವರು ಸಭೆಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net