

ಗುಡಿಬಂಡೆ: ನೂರಾರು ವರ್ಷಗಳ ಇತಿಹಾಸ ಹೊಂದಿರುವ ಗುಡಿಬಂಡೆ ತಾಲೂಕನ್ನು ಪ್ರವಾಸೋದ್ಯಮ ತಾಣವನ್ನಾಗಿ ಮಾಡಲು ಪ್ರಯತ್ನ ನಡೆಸುತ್ತಿದ್ದು, ಸುಮಾರು 200 ಕೋಟಿ ರೂ. ವೆಚ್ಚದಲ್ಲಿ ಡಿಪಿಆರ್ ತಯಾರಿಸಿ, ಜೂ. 19ರಂದು ಜಿಲ್ಲೆಯ ನಂದಿ ಗಿರಿಧಾಮದಲ್ಲಿ ನಡೆಯಲಿರುವ ಕ್ಯಾಬಿನೆಟ್ ಮೀಟಿಂಗ್ನಲ್ಲಿ ಅನುಮೋದನೆ ಪಡೆಯಲು ಪ್ರಯತ್ನ ಮಾಡುವುದಾಗಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ತಿಳಿಸಿದರು.
ತಾಲೂಕಿನ ವರ್ಲಕೊಂಡ, ಸುರಸದ್ಮಗಿರಿ, ಅಮಾನಿಬೈರಸಾಗರ, ಎಲ್ಲೋಡು ಆದಿನಾರಾಯಣಸ್ವಾಮಿ ಬೆಟ್ಟ ಮೊದಲಾದ ಐತಿಹಾಸಿಕ ತಾಣಗಳಿಗೆ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳೊಂದಿಗೆ ಸೋಮವಾರ ಭೇಟಿ ನೀಡಿದ್ದ ಶಾಸಕ ಸುಬ್ಬಾರೆಡ್ಡಿ ಸ್ಥಳಿಯ ಮಾಹಿತಿ ಸಂಗ್ರಹಿಸಿದರು.
ಸರ್ಕಾರಿ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ಸುಮಾರು 200 ಕೋಟಿ ರೂ. ವೆಚ್ಚದಲ್ಲಿ ಡಿಪಿಆರ್ ತಯಾರಿಸಿ ಜೂ.19ರ ಸಂಪುಟ ಸಭೆಯಲ್ಲಿ ಮಂಡನೆ ಮಾಡುವುದಾಗಿ ಹಾಗೂ ಅನುಮೋದನೆ ಪಡೆಯುವುದಾಗಿ ಶಾಸಕರು ಭರವಸೆ ನೀಡಿದರು.
ಸುದ್ದಿಗಾರರ ಜತೆ ಮಾತನಾಡಿ, ಗುಡಿಬಂಡೆಯನ್ನು ಪ್ರವಾಸೋದ್ಯಮ ತಾಣವನ್ನಾಗಿ ಮಾಡಿ ಅಭಿವೃದ್ಧಿಪಡಿಸುವಂತೆ ತಾಲೂಕಿನ ಜನತೆ ಹಲವು ವರ್ಷಗಳಿಂದ ಬೇಡಿಕೆಯಿಡುತ್ತಿದ್ದಾರೆ. ಕೆಲವೊಂದು ಕಾರಣಗಳಿಂದ ಇದು ತಡವಾಗಿತ್ತು. ಇದೀಗ ಪ್ರವಾಸೋದ್ಯಮ ಇಲಾಖೆ ಸಚಿವರ ಸೂಚನೆಯಂತೆ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು ಗುಡಿಬಂಡೆಗೆ ಭೇಟಿ ನೀಡಿ ಕೆಲವು ತಾಣಗಳನ್ನು ಪರಿಶೀಲನೆ ಮಾಡಿದ್ದಾರೆ.
ಈ ಸಂಬಂಧ ಡಿಪಿಆರ್ ತಯಾರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಜೂನ್ 19ರಂದು ನಂದಿ ಗಿರಿಧಾಮದಲ್ಲಿ ನಡೆಯಲಿರುವ ಸಂಪುಟ ಸಭೆಯಲ್ಲಿ ಅನುಮೋದನೆ ಪಡೆಯಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಗುಡಿಬಂಡೆ ಅಮಾನಿ ಬೈರಸಾಗರ ಕೆರೆಯಲ್ಲಿ ಬೋಟಿಂಗ್, ಸುರಸದ್ಮಗಿರಿ ಅಭಿವೃದ್ದಿ, ವರ್ಲಕೊಂಡ ಬೆಟ್ಟದ ಭಾಗದಲ್ಲಿ ಅಭಿವೃದ್ಧಿ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದರು. ಪ್ರವಾಸೋದ್ಯಮ ಇಲಾಖೆಯ ಜಂಟಿ ನಿರ್ದೇಶಕಿ ಅನುಪಮಾ ತಹಸೀಲ್ದಾರ್ ಸಿಗ್ಬತ್ತುಲ್ಲಾ, ತಾಪಂ ಇಒ ನಾಗಮಣಿ, ಪ್ರವಾಸೋದ್ಯಮ ಇಲಾಖೆಯ ಜಿಲ್ಲಾ ಕೇಂದ್ರದ ಯಶ್ವಂತ್, ಸ್ಥಳಿಯ ಮುಖಂಡರು ಹಾಜರಿದ್ದರು.
ಅಭಿವೃದ್ಧಿಯ ಆಶಯ
ಮೊದಲ ಹಂತವಾಗಿ ಈ ಎಲ್ಲ ಕಾಮಗಾರಿಗಳನ್ನು ಕೈಗೊಂಡ ಬಳಿಕ ನಂತರದಲ್ಲಿ ಸುರಸದ್ಮಗಿರಿ ಬೆಟ್ಟೆದಿಂದ ವಿದ್ಯಾಗಿರಿ ಬೆಟ್ಟಕ್ಕೆ ರೋಪ್ವೇ ಸೇರಿ ಮತ್ತಷ್ಟು ಅಭಿವೃದ್ದಿ ಕಾರ್ಯಕ್ರಮಗಳನ್ನು ಕೈಗೆತ್ತಿಕೊಳ್ಳಲಾಗುತ್ತದೆ. ಈ ಭಾಗದಲ್ಲಿ ಪ್ರವಾಸೋದ್ಯಮ ಅಭಿವೃದ್ದಿಯಾದರೇ, ಗುಡಿಬಂಡೆಯ ಅಭಿವೃದ್ದಿಯಾಗುವುದರ ಜತೆಗೆ ಉದ್ಯೋಗಾವಕಾಶಗಳು, ವ್ಯಾಪಾರ ಅಭಿವೃದ್ದಿ ಅಭಿವೃದ್ದಿಯಾಗುತ್ತದೆ ಎಂದು ಶಾಸಕ ಸುಬ್ಬಾರೆಡ್ಡಿ ಆಶಯ ವ್ಯಕ್ತಪಡಿಸಿದರು.