

ರಟ್ಟಿಹಳ್ಳಿ: ಪಟ್ಟಣದ ಜನತಾಪ್ಲಾಟಿನಲ್ಲಿ ಶಿಥಿಲಾವಸ್ಥೆಯಲ್ಲಿರುವ ಅಂಗನವಾಡಿ ಕೇಂದ್ರ ಸಂಖ್ಯೆ 7ಕ್ಕೆ ಸೋಮವಾರ ಅಧಿಕಾರಿಗಳು ಭೇಟಿ ನೀಡಿ ಸ್ಥಳೀಯ ಪಾಲಕರು ಮತ್ತು ಅಂಗನವಾಡಿ ಕಾರ್ಯಕರ್ತೆಯರೊಂದಿಗೆ ಸಮಾಲೋಚಿಸಿದರು.
ಸಿ.ಡಿ.ಪಿ.ಒ. ಎಂ. ವಿಜಯಕುಮಾರ ಮಾತನಾಡಿ, ಶಿಥಿಲಾವಸ್ಥೆಯಲ್ಲಿರುವ ಅಂಗನವಾಡಿಗಳಿಗೆ ಅತಿವೃಷ್ಟಿಯ ಪರಿಹಾರವಾಗಿ 65 ಸಾವಿರ ರೂ. ಅನುದಾನ ಮಂಜೂರಾಗಿದೆ. ಈ ಕುರಿತು ಇಂಜಿನಿಯರ್ಅನ್ನು ಸ್ಥಳಕ್ಕೆ ಕರೆಯಿಸಿ ಮಾಹಿತಿ ಪಡೆಯಲಾಗಿದೆ. ತಾತ್ಕಾಲಿಕವಾಗಿ ಮೇಲ್ಛಾವಣಿ ಸೋರದಂತೆ ಮತ್ತು ಮುರಿದ ಬಾಗಿಲುಗಳನ್ನು ದುರಸ್ತಿಗೊಳಿಸಲಾಗುವುದು. ಮಳೆಗಾಲದಲ್ಲಿ ಮತ್ತೆ ತೊಂದರೆಯಾದರೆ ಬಾಡಿಗೆ ಕಟ್ಟಡಕ್ಕೆ ಸ್ಥಳಾಂತರಿಸಲಾಗುವುದು. ಸರ್ಕಾರಕ್ಕೆ ಈಗಾಗಲೇ ಈ ಕಟ್ಟಡ ತೆರವಿಗೆ ಮತ್ತು ನೂತನ ಕಟ್ಟಡ ನಿರ್ವಣಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ ಎಂದು ತಿಳಿಸಿದರು.
ಭೂಸೇನಾ ನಿಗಮದ ಸಹಾಯಕ ಇಂಜಿನಿಯರ್ ಸಿದ್ದೇಶ್ವರಯ್ಯ ಮಾತನಾಡಿ, ಸಂಪೂರ್ಣವಾಗಿ ದುರಸ್ತಿಗಳಿಸಲು ಅನುದಾನ ಸಾಲುವುದಿಲ್ಲ. ತಾತ್ಕಾಲಿಕವಾಗಿ ಮಳೆಗಾಲದಲ್ಲಿ ಸೋರದಂತೆ ದುರಸ್ತಿ ಮಾಡಬಹುದಾಗಿದೆ ಎಂದು ಹೇಳಿದರು. ಸ್ಥಳಕ್ಕೆ ಆಗಮಿಸಿದ್ದ ಪಾಲಕರಾದ ಶಂಕರ ಚಲವಾದಿ ಮತ್ತು ರವಿ ಮೂಲಮನಿ ಮಾತನಾಡಿ, ಇದನ್ನು ದುರಸ್ತಿ ಮಾಡುವುದಕ್ಕಿಂತ ನೂತನ ಕಟ್ಟಡ ನಿರ್ವಣಕ್ಕೆ ಕ್ರಮ ಕೈಗೊಳ್ಳುವುದು ಒಳಿತು ಎಂದರು.
ವಿಜಯವಾಣಿ ವರದಿಗೆ ಸ್ಪಂದನೆ: ಕಟ್ಟಡದ ಅವ್ಯವಸ್ಥೆ ಕುರಿತು ಜ. 29ರಂದು ‘ವಿಜಯವಾಣಿ’ ಯಲ್ಲಿ ‘ಶಿಥಿಲಗೊಂಡ ಅಂಗನವಾಡಿ ಕಟ್ಟಡ ಮಳೆಗಾಲದಲ್ಲಿ ಸೋರುವ ಮೇಲ್ಛಾವಣಿ ಭೀತಿಯಲ್ಲಿ ಮಕ್ಕಳ ಪಾಲಕರು’ ವಿಸ್ತ್ರತವಾದ ವರದಿ ಪ್ರಕಟಗೊಂಡಿತ್ತು.