

ಪಾಂಡವಪುರ: ಪಾಂಡವಪುರ ಕೃಷಿ ಪತ್ತಿ ಸಹಕಾರ ಸಂಘದಲ್ಲಿ ದುರ್ಬಳಕೆಯಾಗಿರುವ ಕೋಟ್ಯಂತರ ಹಣವನ್ನು ಸಂಬಂಧಪಟ್ಟವರಿಂದಲೇ ವಸೂಲಿ ಮಾಡಲು ಕ್ರಮ ಕೈಗೊಳ್ಳಲಾಗಿದ್ದು, ಷೇರುದಾರರು ಆತಂಕ ಪಡಬಾರದು ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿದರು.
ಕಸಬಾ ಸೊಸೈಟಿಯಲ್ಲಿ ಷೇರುದಾರರು ಅಡವಿಟ್ಟಿದ್ದ ಚಿನ್ನಾಭರಣ, ಪಿಗ್ಮಿ ಮತ್ತು ಷೇರುದಾರರ ಡೆಪಾಸಿಟ್ ಹಣ ಸೇರಿದಂತೆ ಇತ್ಯಾದಿ ಹಣ ದುರ್ಬಳಕೆ ಆಗಿದೆ ಎಂಬ ದೂರುಗಳು ಕೇಳಿ ಬಂದ ತಕ್ಷಣ ವಸೂಲಾತಿ ಮತ್ತು ಅಗತ್ಯ ಕ್ರಮಕ್ಕೆ ಮುಂದಾಗಿದ್ದೇನೆ. ಸಹಕಾರ ಇಲಾಖೆಯ ಸಹಾಯಕ ನಿಬಂಧಕರಿಂದಲೂ ಈ ಬಗ್ಗೆ ಮಾಹಿತಿ ಕೇಳಲಾಗಿದೆ. ಪಟ್ಟಣದ ಡಿಸಿಸಿ ಬ್ಯಾಂಕ್ ಲಾಕರ್‌ನಲ್ಲಿ ಷೇರುದಾರರು ಅಡವಿಟ್ಟಿದ್ದ ಚಿನ್ನಾಭರಣಗಳನ್ನು ಲಾಕರ್‌ನಿಂದ ತೆಗೆದು ಖಾಸಗಿ ಹಣಕಾಸು ಸಂಸ್ಥೆಯಲ್ಲಿ ಗಿರವಿ ಇಡಲಾಗಿದೆ ಎಂದು ತಿಳಿದು ಬಂದಿದೆ. ಖಾಸಗಿ ಸಂಸ್ಥೆಗಳು ಸಹಕಾರ ಸಂಘಗಳಿಗಿಂತ ಚಿನ್ನಕ್ಕೆ ಹೆಚ್ಚಿನ ಹಣ ನೀಡುತ್ತವೆ ಎಂಬ ಕಾರಣಕ್ಕೆ ಲಾಕರ್‌ನಲ್ಲಿದ್ದ ಚಿನ್ನವನ್ನು ಬೇರೆಡೆಗೆ ವರ್ಗಾಯಿಸಿ ಅದರಿಂದ ಬಂದ ಹೆಚ್ಚುವರಿ ಹಣವನ್ನು ಕೂಡ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ನಡೆದಿರುವ ಅಕ್ರಮಗಳನ್ನು ವಿವರಿಸಿದರು.
ಕೃಷಿ ಪತ್ತಿನ ಸಹಕಾರ ಸಂಘ ಮಾತ್ರವಲ್ಲ ಹಲವಾರು ಸಂಘ- ಸಂಸ್ಥೆಗಳಲ್ಲಿ ಹಣ ದುರ್ಬಳಕೆ ಆಗುತ್ತಿದೆ. ಹೀಗಾಗಿ ತಾಲೂಕಿನ ಎಲ್ಲ್ಲ ಸಹಕಾರ ಸಂಘಗಳ ಹಣಕಾಸು ವಹಿವಾಟನ್ನು ತನಿಖೆ ಮಾಡಿ ವರದಿ ನೀಡುವಂತೆ ಡಿಆರ್ ಮತ್ತು ಎಆರ್ ಅವರಿಗೆ ಸೂಚಿಸಲಾಗಿದೆ. ಆಡಳಿತ ಮಂಡಳಿ ನಿರ್ದೇಶಕರು ಮತ್ತು ನೌಕರರ ವರ್ಗ ಸಾರ್ವಜನಿಕರ ಹಣವನ್ನು ತಮ್ಮ ಮನೆಯ ಹಣದಂತೆ ಬಳಸಿಕೊಳ್ಳುವುದು ಬಿಡಬೇಕು. ಸಹಕಾರ ಕ್ಷೇತ್ರ ಉಳಿದರೆ ಮಾತ್ರ ಜನರಿಗೆ ಆರ್ಥಿಕ ಬಲ ತುಂಬಲು ಸಾಧ್ಯವಾಗುತ್ತದೆ. ರಾಜಕೀಯವನ್ನು ಬದಿಗಿಟ್ಟು ಸಂಸ್ಥೆಗಳನ್ನು ಉಳಿಸುವ ಕೆಲಸ ಮಾಡಬೇಕಿದೆ. ಕಸಬಾ ಸೊಸೈಟಿಯಲ್ಲಿ ದುರ್ಬಳಕೆಯಾಗಿರುವ ಹಣ ವಸೂಲಾತಿ ಜತೆಗೆ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.
ನಿವೇಶನಗಳ ಅಕ್ರಮ ಕಬಳಿಕೆ ವಿರುದ್ಧ ಸಿಒಡಿ ತನಿಖೆ: ಪುರಸಭೆ ವ್ಯಾಪ್ತಿಯಲ್ಲಿ ಹಂಚಿಕೆಯಾಗಿರುವ ನಿವೇಶನಗಳ ಅಕ್ರಮ ಕಬಳಿಕೆ ಮತ್ತು ಅವ್ಯವಹಾರಗಳನ್ನು ಸರ್ಕಾರ ಸಿಒಡಿ ತನಿಖೆಗೆ ಆದೇಶಿಸಿದ್ದು, ಅದರಂತೆ ಪೊಲಿಸರು ಅಕ್ರಮಕ್ಕೆ ಸಂಬಂಧಿಸಿದಂತೆ ಪ್ರಾಥಮಿಕ ಮಾಹಿತಿ ಕಲೆ ಹಾಕುತ್ತಿದ್ದಾರೆ. ಪಾಂಡವಪುರ ಪಟ್ಟಣ ವ್ಯಾಪ್ತಿಯಲ್ಲಿ 1976 ರಿಂದ ಇಲ್ಲಿವರೆಗೆ ಬಡವರಿಗೆ ಸೂರು ಕಲ್ಪಿಸುವ ಉದ್ದೇಶದಿಂದ ಪುರಸಭೆ ಆಡಳಿತ ಮಂಡಳಿ ಮತ್ತು ಆಶ್ರಯ ಸಮಿತಿ ಮೂಲಕ ಸುಮಾರು 2500ಕ್ಕೂ ಹೆಚ್ಚು ನಿವೇಶನಗಳನ್ನು ವಿತರಿಸಲಾಗಿದೆ. ಆದರೆ ಇದರಲ್ಲಿ ಬಹುತೇಕ ನಿವೇಶನಗಳನ್ನು ಪ್ರಭಾವಿಗಳು ಅಕ್ರಮವಾಗಿ ಕಬಳಿಸಿದ್ದಾರೆ ಮತ್ತು ಒಂದೇ ನಿವೇಶನಕ್ಕೆ ಎರಡ್ಮೂರು ಹಕ್ಕು ಪತ್ರಗಳನ್ನು ವಿತರಿಸುವ ಮೂಲಕ ಫಲಾನುಭವಿಗಳನ್ನು ವಂಚಿಸಲಾಗಿದೆ. ಇದರಿಂದ ಸಾಕಷ್ಟು ಜನರು ಸಮಸ್ಯೆ ಎದುರಿಸುತ್ತಿದ್ದು, ಇಡೀ ಪ್ರಕರಣವನ್ನು ತನಿಖೆ ನಡೆಸುವಂತೆ ಸರ್ಕಾರಕ್ಕೆ ಒತ್ತಾಯಿಸಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ರೈತಸಂಘ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ, ತಾಲೂಕು ಅಧ್ಯಕ್ಷ ನಾಗರಾಜು, ಸರ್ವೋದಯ ಕರ್ನಾಟಕ ಪಕ್ಷದ ತಾಲೂಕು ಅಧ್ಯಕ್ಷ ಎಸ್.ದಯಾನಂದ್, ಮುಖಂಡರಾದ ಚಿಕ್ಕಾಡೆ ಸಿ.ಎನ್.ವಿಜೇಂದ್ರ, ಹರೀಶ್, ಉಮಾಶಂಕರ್ ಇತರರು ಇದ್ದರು.