ಕಾರಜೋಳ ಬಳಿ ನೀರಾವರಿ ಸೌಲಭ್ಯಕ್ಕೆ ಕ್ರಮ

Action for irrigation facility near Karajola
ಬಬಲೇಶ್ವರ ತಾಲೂಕಿನ ಕಾರಜೋಳ ಗ್ರಾಮದ ಶ್ರೀಬೀರಲಿಂಗೇಶ್ವರ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಸಚಿವ ಎಂ.ಬಿ. ಪಾಟೀಲ ಮಾತನಾಡಿದರು. ಸೋಮನಾಥ ಕಳ್ಳಿಮನಿ, ಬಿ.ಡಿ. ಆಸಂಗಿ, ಸುಜಾತಾ ಕಳ್ಳಿಮನಿ, ಮಲ್ಲು ಪರಸಣ್ಣವರ ಮತ್ತಿತರರಿದ್ದಾರೆ.
Published on

ವಿಜಯಪುರ: ಕಾರಜೋಳ ಬಳಿ ಬಾಕಿ ಉಳಿದಿರುವ 500 ಎಕರೆ ಜಮೀನಿಗೆ ನೀರಾವರಿ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಹೇಳಿದರು.

ಬಬಲೇಶ್ವರ ತಾಲೂಕಿನ ಕಾರಜೋಳ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಶ್ರೀಬೀರಲಿಂಗೇಶ್ವರ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಭಾರತ ಗ್ರಾಮಗಳ ದೇಶ. ಹಳ್ಳಿಗಳು ಅಭಿವೃದ್ಧಿಯಾದರೆ ದೇಶ ಅಭಿವೃದ್ಧಿಯಾದಂತೆ.

ಇದರಿಂದ ಗ್ರಾಮ ಸ್ವರಾಜ್ಯ ಸಾಧ್ಯ ಎಂದು ರಾಷ್ಟ್ರಪಿತ ಮಹಾತ್ಮ ಗಾಂಧಿ ಹೇಳಿದ್ದರು. ಅವರ ಆಶಯದಂತೆ ನಮ್ಮ ಸರ್ಕಾರ ರೈತರು, ಬಡವರು ಸೇರಿದಂತೆ ಎಲ್ಲ ಜಾತಿವರ್ಗಗಳ ಕಲ್ಯಾಣಕ್ಕಾಗಿ ಯೋಜನೆಗಳನ್ನು ರೂಪಿಸಿದೆ.

ಪಂಚ ಗ್ಯಾರಂಟಿ ಯೋಜನೆಗಳ ಜಾರಿಯಿಂದಾಗಿ ಸಮಾಜದ ಎಲ್ಲ ವರ್ಗದ ಜನರಿಗೆ ಶಕ್ತಿ ತುಂಬಲಾಗುತ್ತಿದೆ. ಗೃಹಲಕ್ಷ್ಮಿ ಯೋಜನೆಯಲ್ಲಿ ವಿಜಯಪುರ ಜಿಲ್ಲೆ ಮುಂಚೂಣಿಯಲ್ಲಿದೆ. ಗೃಹಲಕ್ಷ್ಮಿ ಯುವನಿಧಿ, ಅನ್ನಭಾಗ್ಯ ಸೇರಿದಂತೆ ಎಲ್ಲ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಕೊಟ್ಟ ಮಾತುಗಳನ್ನು ಉಳಿಸಿಕೊಂಡು, ನುಡಿದಂತೆ ನಡೆಯುತ್ತಿದ್ದೇವೆ ಎಂದು ಅವರು ತಿಳಿಸಿದರು.

ಕಾರಜೋಳ ಬಳಿ ಸಕ್ಕರೆ ಕಾರ್ಖಾನೆ ನಿರ್ಮಾಣಕ್ಕೆ ಭೂಮಿ ನೀಡಿದ ರೈತರ ಕುಟುಂಬಗಳಿಗೆ ಉದ್ಯೋಗ ಕಲ್ಪಿಸಲು ಕ್ರಮ ಕೈಗೊಳ್ಳುತ್ತೇವೆ.

ನಾನು ಜಲಸಂಪನ್ಮೂಲ ಸಚಿವನಾಗಿದ್ದಾಗ ರೂಪಿಸಿದ ನೀರಾವರಿ ಯೋಜನೆಗಳು ಈಗ ಉಂಟಾಗಿರುವ ಬರದ ತೀವ್ರತೆಯನ್ನು ಕಡಿಮೆ ಮಾಡಿವೆ.

ದರಿಂದಾಗಿ ಪ್ರತಿವರ್ಷ ಬಳಸಲಾಗುತ್ತಿದ್ದ ನೀರಿನ ಟ್ಯಾಂಕರ್‌ಗಳ ಬಳಕೆ ಗಣನೀಯವಾಗಿ ಕಡಿಮೆಯಾಗಿದೆ. ಬರಪೀಡಿತ ಜಿಲ್ಲೆ ಎಂದು ಹಣೆಪಟ್ಟಿ ಹೊತ್ತಿದ್ದ ವಿಜಯಪುರದ ಇತಿಹಾಸವನ್ನು ಬದಲಿಸಲಾಗುತ್ತಿದೆ.

ಜಲಸಂಪನ್ಮೂಲ ಇಲಾಖೆಯಲ್ಲಿ ಮಾಡಿರುವಂತೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಇಲಾಖೆಯಲ್ಲಿಯೂ ಛಾಪು ಮೂಡಿಸಲು ಯೋಜನೆಗಳನ್ನು ರೂಪಿಸಿದ್ದೇನೆ. ವಿಜಯಪುರ ಜಿಲ್ಲೆಯಲ್ಲಿ ಕನಿಷ್ಠ 10 ಸಾವಿರ ಉದ್ಯೋಗ ಸೃಷ್ಠಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಫ್ಯಾಕ್ಟರಿ ಪ್ರಾರಂಭಿಸುವ ಗುರಿಯಿದೆ ಎಂದು ಅವರು ತಿಳಿಸಿದರು.

ಗ್ರಾಮಸ್ಥರು ತಮ್ಮ ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಅದರಲ್ಲೂ ಹೆಣ್ಣು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಕಾಳಜಿ ವಹಿಸಬೇಕು ಎಂದು ಅವರು ಹೇಳಿದರು. ಇದಕ್ಕೂ ಮುನ್ನ ಸಚಿವರು ಶ್ರೀ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ದರ್ಶನ ಪಡೆದರು.

ಮುಖಂಡರಾದ ಸೋಮನಾಥ ಕಳ್ಳಿಮನಿ, ಬಿ.ಡಿ. ಆಸಂಗಿ, ಸುಜಾತಾ ಕಳ್ಳಿಮನಿ, ಮಲ್ಲು ಪರಸಣ್ಣವರ, ರಾಜು ಕಂಬಾಗಿ, ಪಾಂಡು ಜಾಧವ, ರಾಚಯ್ಯ ಮಠಪತಿ, ಕಾಂತು ಒಡೆಯರ, ಪರಶುರಾಮ ಮಲಘಾಣ, ಸುರೇಶ ಜಾಧವ, ಬಸವರಾಜ ಪಾಯ್ಣಿ, ಶಿವಪ್ಪ ತಳವಾರ, ಮುದಕಪ್ಪ ಹಳಿಜೋಳ, ಕಲ್ಲಯ್ಯ ಹಿರೇಮಠ, ಯಲ್ಲಪ್ಪ ಆಸಂಗಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net