ಹಡಪದ ಸಮುದಾಯ ಅಭಿವೃದ್ಧಿ ನಿಗಮ ರಚನೆಗೆ ಕ್ರಮ: ಸಚಿವ ಶಿವರಾಜ ಎಸ್​.ತಂಗಡಗಿ ಭರವಸೆ

Raghu_21_Hadapada_Happanna_Jayanthi_@_Ravindra_Kalakshetra-3
Published on

ಬೆಂಗಳೂರು: ಹಡಪದ ಸಮುದಾಯ ಅಭಿವೃದ್ಧಿ ನಿಗಮ ರಚನೆ, ಮೀಸಲಾತಿ ಕಲ್ಪಿಸುವ ಕುರಿತು ಶ್ರೀಘದಲ್ಲೇ ಸಿಎಂ ಸಿದ್ದರಾಮಯ್ಯ ಅವರ ಜತೆ ಚರ್ಚಿಸಿ ಪ್ರಾಮಾಣಿಕವಾಗಿ ಸಮಸ್ಯೆ ಬಗೆಹರಿಸುತ್ತೇನೆ ಎಂದು ಸಚಿವ ಶಿವರಾಜ ಎಸ್​.ತಂಗಡಗಿ ಭರವಸೆ ನೀಡಿದ್ದಾರೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಭಾನುವಾರ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ "ಶಿವಶರಣ ಶ್ರೀ ಹಡಪದ ಅಪ್ಪಣ್ಣ ಜಯಂತಿ' ಕಾರ್ಯಕ್ರಮದಲ್ಲಿ ಮಾತನಾಡಿದರು. ನಿಗಮ ರಚನೆಗೆ ಅಗತ್ಯ ಸಿದ್ಧತೆ ಮಾಡಿಕೊಂಡು ಕನಿಷ್ಠ 5 ಕೋಟಿ ರೂ.ಅನುದಾನ ಮೀಸಲಿಡಬೇಕು. ಆದರೆ, ಹಿಂದಿನ ಸರ್ಕಾರ ಸಮುದಾಯದ ಜನರ ಓಲೈಕೆಗಾಗಿ ತರಾತುರಿಯಲ್ಲಿ ಘೋಷಣೆ ಮಾಡಿತ್ತು. ಆದರೆ, ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ಈ ಬಗ್ಗೆ ಸಿಎಂ ಜತೆ ಚರ್ಚಿಸಿ ಹಡಪದ ಅಭಿವೃದ್ಧಿ ನಿಗಮ ಸ್ಥಾಪನೆ ಜತೆಗೆ ಘೋಷಣೆ ಮಾಡಲಾದ ನಿಗಮಗಳಿಗೆ ಅಗತ್ಯ ಅನುದಾನ ಒದಗಿಸಿ ಪೂರಕ ಯೋಜನೆ ರೂಪಿಸಲು ಕ್ರಮಕೈಗೊಳ್ಳುತ್ತೇನೆ ಎಂದರು.

ಜಾತಿ ಪ್ರಮಾಣ ಪತ್ರದ ಕುರಿತು ಸಮುದಾಯವು ಕೆಲ ಗೊಂದಲಗಳನ್ನು ಎದುರಿಸುತ್ತಿದೆ. ಅಧಿವೇಶನ ಮುಗಿದ ಕೂಡಲೇ ಗೊಂದಲ ನಿವಾರಣೆಗೆ ಸಮಾಜದ ಮುಖ್ಯಸ್ಥರು, ಸ್ವಾಮೀಜಿಗಳು ಸೇರಿ ಇಲಾಖೆ ಕಾರ್ಯದರ್ಶಿಗಳ ಸಭೆ ನಡೆಸಲಾಗುವುದು. ಈ ವೇಳೆ ಸುಪ್ರೀಂ ಕೋರ್ಟ್​ ಆದೇಶ ಗಣನೆಗೆ ತೆಗೆದುಕೊಳ್ಳಲಾಗುವುದು. ತಂಗಡಗಿಯಲ್ಲಿರುವ ಹಡಪದ ಅಪ್ಪಣ್ಣ ಮಹಾಸಂಸ್ಥಾನ ಮಠದ ಅಭಿವೃದ್ಧಿಗೆ ಹಿಂದೆ 3 ಕೋಟಿ ರೂ.ಮಂಜೂರು ಮಾಡಲಾಗಿತ್ತು. ಈಗಾಗಲೇ 75 ಲಕ್ಷ ರೂ. ಬಿಡುಗಡೆಯಾಗಿದೆ. ಹಣದ ಉಪಯೋಗ ಪ್ರಮಾಣ ಪತ್ರ ಒದಗಿಸಿದ ಕೂಡಲೇ ಬಾಕಿ ಅನುದಾನವನ್ನು ಹಂತ ಹಂತವಾಗಿ ಬಿಡುಗಡೆ ಮಾಡಲಾಗುವುದು ಎಂದು ಸಚಿವರು ತಿಳಿಸಿದರು. ಇಲಾಖೆ ಕಾರ್ಯದರ್ಶಿ ಅಜಯ್​ ನಾಗಭೂಷಣ್​, ನಿರ್ದೇಶಕಿ ಧರಣಿದೇವಿ ಮಾಲಗತ್ತಿ, ಜಂಟಿ ನಿರ್ದೇಶಕ ಬಲವಂತರಾವ್​ ಪಾಟೀಲ್​, ಹಡಪದ ಅಪ್ಪಣ್ಣ ಸಮಾಜ ಸೇವಾ ಸಂದ ಅಧ್ಯಕ್ಷ ಸಿದ್ದಪ್ಪ ಹಡಪದ, ಉಪಾಧ್ಯ ಸಂತೋಷ್​ ಹಡಪದ ಮತ್ತಿತರರಿದ್ದರು.

ಹಡಪದ ಸಮಾಜ ಸಾಕಷ್ಟು ಹಿಂದುಳಿದೆ. ಹಲವರಿಗೆ ಸೂರಿಲ್ಲ. ಸೂಕ್ತ ಸ್ಥಾನಮಾನ ಸಿಕ್ಕಿಲ್ಲ. ಸಮುದಾಯ ಅಭಿವೃದ್ಧಿಗೆ ಬಜೆಟ್​ನಲ್ಲಿ 10 ಕೋಟಿ ರೂ. ಅನುದಾನ ಮೀಸಲಿಡಬೇಕು. ನಮ್ಮ ಸಮಾಜದ ಒಬ್ಬರನ್ನು ವಿಧಾನ ಪರಿಷತ್​ಗೆ ನಾಮನಿರ್ದೇಶನ ಮಾಡಬೇಕು. ಈ ಎಲ್ಲ ಬೇಡಿಕೆ ಈಡೇರಿಸದಿದ್ದರೆ ಸಚಿವರ ಮನೆಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಗುವುದು.

| ಶ್ರೀ ಅನ್ನದಾನಿ ಭಾರತಿ ಅಪ್ಪಣ್ಣ ಸ್ವಾಮೀಜಿ.

ಹಡಪದ ಅಪ್ಪಣ್ಣ ದೇವರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net