ಡೆಂಗ್ಯೂ ಬಾಧಿತ ಪ್ರದೇಶದಲ್ಲಿ ಶುಚಿತ್ವಕ್ಕೆ ಕ್ರಮ, ಗಂಗೊಳ್ಳಿ ಸಹಿತ ಸುತ್ತಮುತ್ತಲು ಪ್ರಕರಣ ಪತ್ತೆ

degue
ಡೆಂಗ್ಯೂ ಪ್ರಕರಣಗಳು ಪತ್ತೆಯಾದ ಮ್ಯಾಂಗನೀಸ್ ವಾರ್ಫ್ ಪ್ರದೇಶಕ್ಕೆ ಗಂಗೊಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಅಮಿತಾ ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು
Published on

ವಿಜಯವಾಣಿ ಸುದ್ದಿಜಾಲ ಗಂಗೊಳ್ಳಿ

ಗಂಗೊಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿದ್ದು, ಎಚ್ಚೆತ್ತುಕೊಂಡ ಆರೋಗ್ಯ ಇಲಾಖೆ ಹಾಗೂ ಸ್ಥಳೀಯ ಗ್ರಾಮ ಪಂಚಾಯಿತಿ ಮುಂಜಾಗ್ರತಾ ಕ್ರಮಕೈಗೊಂಡಿದೆ.

ಗಂಗೊಳ್ಳಿಯ ಮ್ಯಾಂಗನೀಸ್ ವಾರ್ಫ್ ಪರಿಸರದಲ್ಲಿ ಡೆಂಗ್ಯೂ ಕಾಣಿಸಿಕೊಂಡಿದ್ದು, ಸ್ಥಳೀಯರಲ್ಲಿ ಆತಂಕ ಹೆಚ್ಚಾಗಿದೆ. ಕಳೆದ ವಾರದಿಂದಲೇ ಡೆಂಗ್ಯೂ ಪ್ರಕರಣಗಳು ಪತ್ತೆಯಾಗುತ್ತಿದ್ದು, ಇದುವರೆಗೆ ಗಂಗೊಳ್ಳಿಯಲ್ಲಿ 9 ಮಂದಿಗೆ ಡೆಂಗ್ಯೂ ಬಾಧಿಸಿವೆ.

ಸಮೀಪದ ಗುಜ್ಜಾಡಿ ಹಾಗೂ ನಾಯಕವಾಡಿ ಗ್ರಾಮಗಳಲ್ಲಿ ಕೂಡ ಡೆಂಗ್ಯೂ ಕಾಣಿಸಿಕೊಂಡಿದ್ದು, ರೋಗಕ್ಕೆ ತುತ್ತಾದವರು ಸಂಪೂರ್ಣ ಗುಣಮುಖರಾಗಿದ್ದಾರೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಮ್ಯಾಂಗನೀಸ್ ವಾರ್ಫ್ ಪ್ರದೇಶಕ್ಕೆ ಗಂಗೊಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಅಮಿತಾ ಹಾಗೂ ಗಂಗೊಳ್ಳಿ ಗ್ರಾಮ ಪಂಚಾಯಿತಿ ಸಿಬ್ಬಂದಿ ಭೇಟಿ ನೀಡಿದ್ದು, ಎಲ್ಲೆಡೆಯೂ ಸ್ವಚ್ಛತೆ ಕಾಯ್ದುಕೊಳ್ಳುವಂತೆ ಸ್ಥಳೀಯರಿಗೆ ತಿಳಿಸುವುದರೊಂದಿಗೆ ಎಲ್ಲೂ ನೀರು ನಿಲ್ಲದಂತೆ ಎಚ್ಚರ ವಹಿಸಿ ಎಂದು ಸೂಚಿಸಿದ್ದಾರೆ.

ಸೊಳ್ಳೆ ನಿಯಂತ್ರಣಕ್ಕೆ ಫಾಗಿಂಗ್

ಬೋಟ್ ಬಿಲ್ಡಿಂಗ್ ಯಾರ್ಡ್ ಪ್ರದೇಶದಲ್ಲಿ ಸಂಗ್ರಹವಾಗಿರುವ ತ್ಯಾಜ್ಯಗಳು ಕೊಳೆತು ನಾರುತ್ತಿದ್ದು, ಇವುಗಳನ್ನು ಸೂಕ್ತ ವಿಲೇವಾರಿ ಮಾಡಿ ಶುಚಿತ್ವ ಕಾಯ್ದುಕೊಳ್ಳುವಂತೆ ಅಧಿಕಾರಿಗಳು ಸೂಚಿಸಿದರು. ಮ್ಯಾಂಗನೀಸ್ ವಾರ್ಫ್ ಪರಿಸರದಲ್ಲಿ ನಿಂತ ನೀರಿನಲ್ಲಿ ಸೊಳ್ಳೆಗಳು ಉತ್ಪತ್ತಿಯಾಗದಂತೆ ಔಷಧ ಸಿಂಪಡಿಸಲಾಗಿದ್ದು, ಸಂಜೆ ಫಾಗಿಂಗ್ ಮಾಡಲಾಗುತ್ತಿದೆ. ಡೆಂಗ್ಯೂ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಮತ್ತು ಗ್ರಾಮ ಪಂಚಾಯಿತಿ ವಿವಿಧ ಇಲಾಖೆಗಳ ಸಹಕಾರದೊಂದಿಗೆ ಶ್ರಮಿಸುತ್ತಿದ್ದು, ಸದ್ಯ ಡೆಂೆ ನಿಯಂತ್ರಣದಲ್ಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net